ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್‌ಗೆ ಬಿಗ್ ರಿಲೀಫ್...!
ಪರಪ್ಪನ ಅಗ್ರಹಾರದಿಂದ ಮುಕ್ತಿಯನ್ನು ಪಡೆದು ಸದ್ಯ ದರ್ಶನ್ ತಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ವಹಿಸಿದ್ದಾರೆ. ಪತ್ನಿಯ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷ ನಡೆದ ಕಹಿಯನ್ನೆಲ್ಲ ಮರೆತು ಮನೆ-ಮಗ-ಸಂಸಾರ-ಸಿನಿಮಾ ಎಂದು ಓಡಾಡಿಕೊಂಡು ಇದ್ದಾರೆ.
ಹಾಗಂಥ ಸಮಸ್ಯೆ ಬಗೆಹರಿಯಿತು ಅಂತಲ್ಲ. ಯಾಕೆಂದರೆ.. ದರ್ಶನ್‌ಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಿ ಖಾಕಿ ಪಡೆ ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನೇರಿದೆ. ಇದರ ನಡುವೆ ಈಗ ದರ್ಶನ್‌ಗೆ ರೇಣುಕಾಸ್ವಾಮಿಯ ಪ್ರಕರಣದಲ್ಲಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಹೌದು, ಅಸಲಿಗೆ ಈ ಮೊದಲು ಬೆಂಗಳೂರಿನ ಗಡಿಯಾಚೆ ಒಂದು ಹೆಜ್ಜೆ ಇಡಬೇಕೆಂದರೂ ಅಪ್ಪಣೆ ಪಡೆಯಬೇಕು ಎಂಬ ಷರತ್ತನ್ನೂ ನ್ಯಾಯಾಲಯ ಹಾಕಿತ್ತು. ಇದರಿಂದ ಕಂಗಾಲಾಗಿದ್ದ ದರ್ಶನ್ ಮೈಸೂರಿಗೆ ಹೋಗಬೇಕು ಅಂದರೂ ಕೂಡ ಕೋರ್ಟ್‌ನ ಮೊರೆ ಹೋಗಬೇಕಾಗಿತ್ತು. ನ್ಯಾಯಾಲಯದ ಅನುಮತಿಯನ್ನು ಪಡೆದ ಮೇಲೆಯೇ ಮೈಸೂರಿಗೆ ತೆರಳಬೇಕಾಗಿತ್ತು.
ಆದರೆ ಈಗ ದರ್ಶನ್ ಫುಲ್ ಜಾಲಿ ಜಾಲಿ. ಯಾಕೆಂದರೆ ಈ ಷರತ್ತು ಸಡಿಲಿಕೆ ಕೋರಿ ದರ್ಶನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ದೇಶದ ಒಳಗೆ ಎಲ್ಲಿ ಬೇಕಾದರೂ ತಿರುಗಾಡಲು ದರ್ಶನ್‌ಗೆ ಹೈಕೋರ್ಟ್ ಅನುಮತಿಯನ್ನು ನೀಡಿದೆ. ಈ ಕುರಿತು ಇಂದು ಆದೇಶ ಹೊರಡಿಸಿದ ನ್ಯಾಯಾಧೀಶರಾದ ವಿಶ್ವಜಿತ್ ಶೆಟ್ಟಿ ವಿದೇಶಕ್ಕೆ ತೆರಳುವ ಸಂದರ್ಭದಲ್ಲಿ ಮಾತ್ರ ದರ್ಶನ್ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು ಎಂದು ಹೇಳಿದ್ಧಾರೆ. ಅತ್ತ ದರ್ಶನ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಂದ್ಹಾಗೇ ಷರತ್ತು ಸಡಿಲಿಕೆ ಕೋರಿ, ಹೈಕೋರ್ಟ್‌ಗೆ ದರ್ಶನ್ ಸಲ್ಲಿಸಿದ್ದ ಈ ಅರ್ಜಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಜಾಮೀನು ಪಡೆಯುವಾಗ ಅನಾರೋಗ್ಯದ ಕಾರಣ ನೀಡಿದ್ದರು ಆದರೆ ಈಗ ನೋಡಿದರೆ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ ಎಂದು ವಾದಿಸಿದ್ದರು. ಆದರೂ ಕೂಡ ದರ್ಶನ್ ಜಾಮೀನು ಷರತ್ತುಗಳನ್ನು ಹೈಕೋರ್ಟ್ ಸಡಿಲಿಸಿದೆ.
ಸದ್ಯ ಷರತ್ತುಗಳಲ್ಲಿ ಹೈಕೋರ್ಟ್ ಸಡಿಲಿಕೆ ಮಾಡಿದ ಹಿನ್ನೆಲೆ, ದರ್ಶನ್ ಶೀಘ್ರದಲ್ಲಿಯೇ ಡೆವಿಲ್ ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ. ಚಿತ್ರದ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗುವ ನಿರೀಕ್ಷೆ ಇದೆ. ಇನ್ನು, ಈ ಹಿಂದೆ ದರ್ಶನ್ ಫೆಬ್ರವರಿ 28ರಿಂದ ಅಂದರೆ ಇಂದಿನಿಂದ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆ ಸುದ್ದಿ ಸದ್ಯ ಸುಳ್ಳಾಗಿದೆ.
ಇನ್ನುಳಿದಂತೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದ ದರ್ಶನ್‌ಗೆ ವಿಪರೀತ ಬೆನ್ನು ನೋವು ಇತ್ತು. ನಡೆದಾಡಲು ಕೂಡ ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ದರ್ಶನ್ ಇಲ್ಲಿಯವರೆಗೆ ಆಪ್‌ರೇಶನ್ ಥಿಯೇಟರ್ ಕಡೆ ಮುಖ ಮಾಡಿಲ್ಲ. ಬದಲಿಗೆ ದರ್ಶನ್ ಫಿಸಿಯೋಥೆರಪಿ ಮೊರೆ ಹೋಗಿದ್ದಾರೆ ಎನ್ನುವ ಸುದ್ದಿ ಇದೆ.
ಒಟ್ನಲ್ಲಿ ಸದ್ಯ ಹೈಕೋರ್ಟ್ ಷರತ್ತು ಸಡಿಲಿಕೆ ಮಾಡಿದ ಹಿನ್ನೆಲೆ ದರ್ಶನ್ ನಿರಾಳರಾಗಿದ್ದಾರೆ. ದರ್ಶನ್‌ಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಿ ಖಾಕಿ ಪಡೆ ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನೇರಿರುವ ಹಿನ್ನೆಲೆ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ಕ್ಲೈಮ್ಯಾಕ್ಸ್ ಏನಾಗಲಿದೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











