»   » ಬಿಗ್‌ ಬೀ ಮರುಪ್ರವೇಶ

ಬಿಗ್‌ ಬೀ ಮರುಪ್ರವೇಶ

Posted By: Super
Subscribe to Filmibeat Kannada

ಸೆಪ್ಟೆಂಬರ್‌ 2001- ನಾನು ಖಂಡಿತ ಮತ್ತೆ ರಾಜಕೀಯ ಪ್ರವೇಶಿಸುವುದಿಲ್ಲ : ಅಮಿತಾಬ್‌ ಬಚ್ಚನ್‌.ಅಕ್ಟೋಬರ್‌ 23, 2001- ಉತ್ತರ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಿಗ್‌ ಬೀ. ಏನಿದು ಬಣ್ಣ ಬದಲಾವಣೆ, ಇವರೇ ಹೀಗಾಗೋದೇ ಎಂಬೆಲ್ಲಾ ಮಾತುಗಳ ನಡುವೆಯೇ ಅಮಿತಾಬ್‌ ಬಚ್ಚನ್‌ ರಾಜಕೀಯ ಮರು ಪ್ರವೇಶವಾಗಿದೆ; 14 ವರ್ಷಗಳ ರಾಜಕೀಯ ಅಜ್ಞಾತವಾಸದ ನಂತರ.

ಅಮಿತಾಬ್‌ ಇರಾದೆ ಬದಲಾದದ್ದು ಯಾಕೆ?
ಬಚ್ಚನ್‌ ಮಾತುಗಳಲ್ಲೇ ಹೇಳುವುದಾದರೆ... 'ರಾಜಕೀಯ ಬಿಟ್ಟದ್ದಕ್ಕೆ ನಿರಾಸೆಯೇನೂ ಆಗಿರಲಿಲ್ಲ. ಆದರೆ ನನ್ನೂರು ಅಲಹಾಬಾದ್‌ನ ಜನರಿಗೆ ಕೊಟ್ಟ ಆಶ್ವಾಸನೆಗಳು ಹಠಾತ್ತನೆ ಕಾಡತೊಡಗಿದವು. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಅನ್ನಿಸಿತು. ಅದಕ್ಕೇ ಇರಾದೆ ಬದಲಿಸಿ, ರಾಜಕೀಯಕ್ಕೆ ಮರು ಪ್ರವೇಶಿಸಿದೆ".

1986ರಲ್ಲಿ ಅಲಹಾಬಾದ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಬಚ್ಚನ್‌ಗೆ ರಾಜಕೀಯ ಒಗ್ಗಲಿಲ್ಲವೋ ಅಥವಾ ರಾಜಕೀಯ ಅವರಿಗೆ ಒಲಿಯಲಿಲ್ಲವೋ, ನಂತರದ ವರ್ಷಗಳಲ್ಲಿ ಸಿನಿಮಾದಲ್ಲಿ ಮಾತ್ರ ತೊಡಗಿಕೊಂಡರು. ಎಬಿಸಿ ಕಟ್ಟಿ, ಮೈತುಂಬಾ ಸಾಲ ಮಾಡಿಕೊಂಡರು. ಐದಾರು ವರ್ಷಗಳ ಕಾಲ ಕತ್ತಿನ ಮಟ್ಟ ತಲುಪಿದ್ದ ಸಾಲದ ಜಂಜಾಟದಲ್ಲೇ ಕಳೆದುಹೋಗಿದ್ದ ಅಮಿತಾಬ್‌ ಸಿನಿಮಾ ಜೀವನಕ್ಕೂ ಅಲ್ಪ ವಿರಾಮ ದೊರೆಯಿತು. ಆದರೆ ಸ್ಟಾರ್‌ ಟಿವಿಯ ಕೌನ್‌ ಬನೇಗಾ ಕರೋಡ್‌ಪತಿ ಗೇಮ್‌ ಷೋ ಬಚ್ಚನ್‌ಗೆ ಮತ್ತೆ ಬಿಗ್‌ ಬೀ ಪಟ್ಟ ತಂದಿತ್ತಿತು. ಸಾಲ ಕರಗಿಹೋಯಿತು. ಬಚ್ಚನ್‌ ಗೆಲ್ಲುತ್ತಾ ಬಂದರು. ಸಿನಿಮಾ ಜೀವನಕ್ಕೂ ಹೊಸ ವೇಗ ದಕ್ಕಿತು.


ಸಮಾಜವಾದಿ ಪಕ್ಷದ ಅಮರ್‌ ಸಿಂಗ್‌ ಹಾಗೂ ಬಚ್ಚನ್‌ ಗಳಸ್ಯ ಕಂಠಸ್ಯ. ಇಬ್ಬರ ನಡುವೆ ಸದಾ ಒಡನಾಟ ಇತ್ತಾದರೂ ಈಚೆಗೆ ಪದೇ ಪದೇ ಜೋರು ಜೋರಾಗಿ ಓಡಾಟ ಶುರುವಾಯಿತು. ಬಚ್ಚನ್‌ ರಾಜಕೀಯ ಮರುಪ್ರವೇಶದ ವಿಷಯಕ್ಕೆ ಚಾಲನೆ ದೊರೆತಿದ್ದೇ ಆಗ.

ಹದಿನಾಲ್ಕು ವರ್ಷಗಳಾಗಿತ್ತು, ಬಚ್ಚನ್‌ ತಮ್ಮ ತವರೂರು ಅಲಹಾಬಾದ್‌ಗೆ ಹೋಗಿ ಹಾಗೂ ರಾಜಕೀಯ ತೊರೆದು. ಮೊನ್ನೆ ಕೆ.ಪಿ.ಕಾಲೇಜ್‌ ಆವರಣದಲ್ಲಿ ಚಿಣ್ಣರಿಂದ ದೊಡ್ಡವರೆಲ್ಲಾ ನೆರೆದಿದ್ದರು; ತಮ್ಮೂರ ಮಹಾನ್‌ ನಟನ ದರುಶನಕ್ಕಾಗಿ. ಸಪತ್ನೀಕರಾಗಿ ಕಾರ್ಯಕ್ರಮಕ್ಕೆ ಬಂದ ಬಿಗ್‌ ಬೀಗೆ ಭಾರೀ ಸ್ವಾಗತ. ಒಂದಷ್ಟು ಮಾತು. ಅಪ್ಪನ ಬಳುವಳಿ ಜಾನಪದ ಗೀತೆ ಈರ್‌ ಬೀರ್‌ ಫತ್ತೆ ಹಾಡಿಗೆ ಅಭಿಮಾನಿಗಳ ದುಂಬಾಲು. ಬಚ್ಚನ್‌ ಹಾಡೇ ಬಿಟ್ಟರು- 'ಏಕ್‌ ರಹೇನ್‌ ಈರ್‌, ಏಕ್‌ ರಹೇನ್‌ ಬೀರ್‌, ಏಕ್‌ ರಹೇನ್‌ ಫತ್ತೆ ಔರ್‌ ಏಕ್‌ ರಹೇನ್‌ ಹಂ...". ಜನರು ಚಪ್ಪಾಳೆ ತಟ್ಟಿ, ಹೊರಟರು.

ಇದು ಸಮಾಜವಾದಿ ಹಾದಿ...
ಆದರೆ ಮಾಧ್ಯಮದವರಿಗೆ ಅಲ್ಲಿ ಕಂಡವರೆಲ್ಲಾ ಸಮಾಜವಾದಿ ಪಕ್ಷದವರೇ. ಮುಲಾಯಂ ಸಿಂಗ್‌ ಯಾದವ್‌ ಚೀಫ್‌ ಗೆಸ್ಟ್‌. ಕಾರ್ಯಕ್ರಮ ಆಯೋಜಿಸಿದ ಅಲಹಾಬಾದ್‌ ಮೇಯರ್‌ ಕೂಡ ಸಮಾಜ ವಾದಿ ಪಕ್ಷದವರೇ. ಏನೇನೋ ತಪ್ಪು ತಿಳಿಯಬಾರದೆಂದು ಮುಲಾಯಂ ಹೇಳಿಯೇ ಬಿಟ್ಟರು- 'ಇದೊಂದು ಅಪ್ಪಟ ಸಾಂಸ್ಕೃತಿಕ ಕಾರ್ಯಕ್ರಮ. ಇದಕ್ಕೆ ರಾಜಕೀಯದ ಬಣ್ಣ ಹಚ್ಚಬೇಡಿ".

ಕಂಡರು 'ಗುಡ್ಡಿ" ಜಯಾ
ಅರೆರೆ.. ಹದಿನಾಲ್ಕು ವರ್ಷಗಳಿಂದ ಇಲ್ಲಿಗೆ ಬರದ ಸ್ಟಾರು ಇವತ್ತೇ ಯಾಕಪ್ಪಾ ಬಂದದ್ದು? ಬಂದದ್ದಲ್ಲಾ ಸ್ವಾಮಿ ಕರೆತಂದದ್ದು; ಈ ರಾಜಕೀಯ ಫುಢಾರಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಂತ ಸ್ಥಳೀಯರು ಮಾತಾಡಿಕೊಂಡದ್ದು ನಮ್ಮ ಕಿವಿಗೆ ಬಿದ್ದಿತ್ತು. ಜಯಾ ಅಂತೂ ಮಗು ಥರಾ ಕುಣಿದರು. ಅಲಹಾಬಾದ್‌ ಕಂಡರೆ ಅವರಿಗೆ ಹಾಗಾಗುತ್ತದಂತೆ. ಜಗತ್ತನ್ನೆಲ್ಲಾ ಸುತ್ತಿದ್ದೇನೆ. ಆದರೆ, 1985ರ ಆ ಗುಲಾಬಿಗಳು ಈಗಲೂ ನನ್ನ ಬಳಿ ಜೋಪಾನವಾಗಿವೆ. ಅವು ಅಲಹಾಬಾದಿನಲ್ಲಿ ನನಗೆ ಸಂದ ಗುಲಾಬಿಗಳು. ಅಂಥವನ್ನು ನನ್ನ ಜೀವಮಾನದಲ್ಲಿ ಮತ್ತೆ ನೋಡಲೇ ಇಲ್ಲ ಅಂತ ಜಯಾ ಹೇಳಿದಾಗ ಗುಡ್ಡಿ ಸಿನಿಮಾದ ತುಂಟ ಹುಡುಗಿಯ ನಗೆ ಅವರ ಮೊಗದಲ್ಲಿ ಮತ್ತೆ ಇಣುಕಿತು.

ಮಗನ ಸೋಲುಗಳಿಂದ ಅಪ್ಪ ಅಮಿತಾಬ್‌ ತಲೆಕೆಡಿಸಿಕೊಂಡಿದ್ದರೂ, ಅವರ ಚರಿಷ್ಮಾ ಮಾತ್ರ ದಿನೇದಿನೇ ಏರುತ್ತಿದೆ. ಕರೋಡ್‌ಪತಿ ಮೋಡಿ ಮಾಸುತ್ತಿರುವಾಗಲೂ ಬಚ್ಚನ್‌ ಬೇಡಿಕೆ ಬಿಸಿಯಾಗುತ್ತಲೇ ಇದೆ. ಇಂಥಾ ಹಿನ್ನೆಲೆಯಲ್ಲಿ ಗೆಳೆಯನಿಗೋಸ್ಕರ ಊಸರವಳ್ಳಿ ಆದದ್ದೂ ಆಗಿದೆ. ಅಂದಹಾಗೆ, ಜಯಾ ಕೂಡ ಪತಿ ಜೊತೆ ವಿಮಾನದಲ್ಲಿ ಹಾರುತ್ತಾ ಸಮಾಜವಾದಿ ಪಕ್ಷಕ್ಕೇ ನಿಮ್ಮ ಮತ ಅಂತ ಪ್ರಚಾರ ಮಾಡುತ್ತಿದ್ದಾರೆ.

ತಿಂಗಳ ಹಿಂದೆ ರಾಜಕೀಯ ಮರು ಪ್ರವೇಶದ ಬಗ್ಗೆ ಸೊಲ್ಲೆತ್ತಿದ್ದ ಮಾಧ್ಯಮಗಳ ಬಗ್ಗೆ ಕೆಂಡಾಮಂಡಲಾಗಿದ್ದ ಬಚ್ಚನ್‌ಗೆ ಅಂತೂ ಇಂತೂ ಹದಿನಾಲ್ಕು ವರ್ಷಗಳ ನಂತರ ಅಲಹಾಬಾದ್‌ ಜನರಿಗೆ ತಾವು ಕೊಟ್ಟಿದ್ದ ಭರವಸೆಗಳು ದಿಢೀರನೆ ನೆನಪಾಗಿವೆ. ಭಗವಂತ ಅವರಿಗೆ ಒಳ್ಳೆಯದನ್ನು ಮಾಡಲಿ!

English summary
Amitabh Bachchan with Samajvadi party members...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada