ಸುಲ್ತಾನ್ ಸಂಭ್ರಮ ; ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೆಗೆ ಬಿಗ್ ಬಾಸ್ ಈಶಾನಿ ಗಿಫ್ಟು !
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಅಂದ್ರೆ ಅಭಿಮಾನಿಗಳ ಪಾಲಿಗೆ ಹಬ್ಬ. ಅಭಿಮಾನಿಗಳೆಲ್ಲ ತಿಂಗಳ ಮುಂಚೆಯೇ ಇದಕ್ಕಾಗಿ ರೆಡಿಯಾಗುವುದು ಮಾಮೂಲಿ. ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಇತರರೂ ಕೂಡಾ ದರ್ಶನ್ ಅವರಿಗೆ ಅಚ್ಚರಿದಾಯಕ ಗಿಫ್ಟುಗಳನ್ನು ಕೊಡೋ ಪರಿಪಾಠವಿದೆ. ಈ ಸಲ ಅಂಥಾದ್ದೇ ಒಂದು ಗಿಫ್ಟ್ ನೀಡಲು ಬಿಗ್ ಬಾಸ್ ಖ್ಯಾತಿಯ ಈಶಾನಿ ಮುಂದಾಗಿದ್ದಾರೆ. ಇದೇ ಫೆಬ್ರವರಿ ಹದಿನಾರರಂದು ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಾಡನ್ನ ಬಿಡುಗಡೆ ಮಾಡಲು ಸಿದ್ಧತೆಯನ್ನೂ ಮಾಡಿಕೊಳ್ತಿದ್ದಾರೆ
ಇನ್ನೂ ಈಶಾನಿ ಬಿಡುಗಡೆ ಮಾಡಲಿರುವ ಈ ಹಾಡು ಹೇಗಿರಲಿದೆ ಅನ್ನುವುದು ಸದ್ಯಕ್ಕೆ ನಿಗೂಢವಾದರೂ, ದರ್ಶನ್ ಅವರ ಕುರಿತು ಮಾಡಲಾಗ್ತಿರುವ RAP ಸಾಂಗ್ ಬಗ್ಗೆ ಯುಟ್ಯೂಬ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈಶಾನಿ ಹೇಳಿದ್ದಾರೆ. ಈಶಾನಿ ಅವರ ಈ ಹೇಳಿಕೆ ಸದ್ಯಕ್ಕೆ ಡಿ ಕಂಪನಿಯಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ದರ್ಶನ್ ಅವರ ಅಸಂಖ್ಯಾತ ಅಭಿಮಾನಿಗಳ ಸಂಭ್ರಮವನ್ನೂ ಹೆಚ್ಚಿಸಿದೆ. ಈ ಕಾರಣಕ್ಕೆ ಹಾಡಿನ ಆರಂಭದ ಒಂದೆರಡು ಸಾಲನ್ನಾದರೂ ಹೇಳಿ ಎಂಬ ಮನವಿಯನ್ನ ಈಶಾನಿ ಅವರಲ್ಲಿ ಅನೇಕರು ಮಾಡ್ತಿದ್ದಾರೆ.

ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿರುವ ದಾಸ
ಇನ್ನೂ ಪ್ರತಿ ವರ್ಷದಂತೆ ಈ ವರ್ಷ ಕೂಡ ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಈ ವರ್ಷವೂ ಅದೇ ಹಣದಲ್ಲಿ ಅಕ್ಕಿ, ಬೇಳೆ, ಸಕ್ಕರೆ ಇತರೆ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಅವಶ್ಯಕತೆ ಇರುವ ಅನಾಥಾಶ್ರಮಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು. ಈ ಸಂಭ್ರಮಾಚರಣೆಯಲ್ಲಿ ನಮ್ಮ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆ ಆಗದಂತೆ ವರ್ತಿಸಿ. ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂಕುಂಡಗಳನ್ನು ಬೀಳಿಸುವುದು ಅವರ ಸ್ವತ್ತುಗಳಿಗೆ ಹಾನಿ ಮಾಡುವಂಥಹಾ ವರ್ತನೆಗಳು ಬೇಡ. ನನ್ನ ಮೇಲೆ ಇಷ್ಟೆಲ್ಲ ಪ್ರೀತಿ, ಅಭಿಮಾನ ಇಟ್ಟಿರುವ ನೀವು ನನ್ನ ಕೋರಿಕೆಯನ್ನು ನಡೆಸಿಕೊಡುತ್ತೀರಿ ಎಂದು ನಂಬಿದ್ದೇನೆ. ಹಾಗೂ ಸಂಘದ ಕಾರ್ಯಕರ್ತರು ಹಾಗೂ ಪೊಲೀಸರಿಗೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ' ಎಂದು ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಕೋರಿಕೊಂಡಿದ್ದಾರೆ.
ಆಗ್ಲೇ ಶುರುವಾಗಿದೆ ಸುಲ್ತಾನ್ ಸಂಭ್ರಮ!
ಈ ಬಾರಿಯೂ ದರ್ಶನ್ ಬರ್ತಡೆಗೆ ಇನ್ನೂ ತಿಂಗಳಿರುವಾಗಲೇ ದರ್ಶನ್ ಪರ್ವ ಸುಲ್ತಾನ್ ಸಂಭ್ರಮ ಎಂಬ ಶೀರ್ಷಿಕೆಯಡಿಯಲ್ಲಿ ಅಭಿಮಾನಿಗಳೆಲ್ಲ ದರ್ಶನ್ ಹುಟ್ಟುಹಬ್ಬಕ್ಕೆ ರೆಡಿಯಾಗಿದ್ದಾರೆ.ಈ ಮೂಲಕ ಫೆಬ್ರವರಿ ಹದಿನಾರರಂದು ನಡೆಯಲಿರೋ ದರ್ಶನ್ ಹುಟ್ಟುಹಬ್ಬದ ಆಚರಣೆಗೆ ಅಭಿಮಾನಿಗಳೆಲ್ಲ ಎಂದಿನ ಉತ್ಸಾಹದಿಂದ ಅಣಿಗೊಳ್ಳುತ್ತಿದ್ದಾರೆ. ಕರ್ನಾಟಕದಾಧ್ಯಂತ ಇರೋ ಅಭಿಮಾನಿಗಳೆಲ್ಲ ಒಂದಾಗಿ ಸುಲ್ತಾನ್ ಸಂಭ್ರಮ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ದರ್ಶನ್ ಹುಟ್ಟುಹಬ್ಬ ಅಂದ್ರೆ ಕೇವಲ ಸಂಭ್ರಮಾಚರಣೆಗೆ ಮಾತ್ರವೇ ಸೀಮಿತವಾಗಿಲ್ಲ. ಹಲವಾರು ಸಾಮಾಜಿಕ ಕೆಲಸ ಕಾರ್ಯಗಳೂ ನಡೆಯುತ್ತವೆ. ಅಂಥವುಗಳಿಗೂ ಕೂಡಾ ಅಭಿಮಾನಿ ಪಡೆ ರೂಪುರೇಷೆ ಸಿದ್ಧಪಡಿಸಿಕೊಂಡಿದೆ.

ಒಟ್ಟಿನಲ್ಲಿ ಸದ್ಯಕ್ಕೆ ದರ್ಶನ್ ಅವರ ಹುಟ್ಟುಹಬ್ಬದಂದು, ದರ್ಶನ್ ಹಾಗೂ ಕರ್ನಾಟಕದೆಲ್ಲೆಡೆ ನೆಲೆಸಿರುವ ದರ್ಶನ್ ಅಭಿಮಾನಿಗಳಿಗೆ ಈಶಾನಿ ಹಾಡೊಂದನ್ನ ಉಡುಗೊರೆಯನ್ನಾಗಿ ನೀಡಲು ತಯಾರಿಯನ್ನ ನಡೆಸಿದ್ದಾರೆ. ಈ ಹಾಡು ದರ್ಶನ್ ಹುಟ್ಟುಹಬ್ಬವನ್ನು ನಿಜಕ್ಕೂ ವಿಶೇಷವನ್ನಾಗಿಸಲಿರೋದು ಸತ್ಯ.


Click it and Unblock the Notifications











