ಸ್ವಾತಂತ್ರ್ಯೋತ್ಸವಕ್ಕೆ ಅದ್ಧೂರಿಯಾಗಿ ತೆರೆಗೆ ಎಂಟ್ರಿ ಕೊಡಲಿದ್ದಾರೆ ಬಿಗ್ ಬಾಸ್ ಭುವನ್
ಬಿಗ್ ರಿಯಾಲಿಟಿ ಶೋ ಮೂಲಕ ಖ್ಯಾತಿಗಳಿಸಿದ್ದ ನಟ ಭುವನ್ ಈಗ ನಾಯಕನಾಗಿ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ್ದ ಭುವನ್ ಈಗ ರಾಂಧವ ಚಿತ್ರದ ಮೂಲಕ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಭುವನ್ ನಾಯಕನಾಗಿ ಕಾಣಿಸಿಕೊಂಡಿರುವ ಚೊಚ್ಚಲ ಚಿತ್ರ ಸ್ವಾತಂತ್ರ್ಯ ದಿನಾಚರಣೆಯ ದಿನ ತೆರೆಗೆ ಬರುತ್ತಿದೆ.
ರಾಂಧವ ಎಂದು ಕ್ಯಾಚಿ ಟೈಟಲ್ ಇಟ್ಕೊಂಡು, ಹೆಸರಿನ ಮೂಲಕವೇ ಚಿತ್ರಾಭಿಮಾನಿಗಳ ಗಮನ ಸೆಳೆದಿದ್ದ ಚಿತ್ರತಂಡ, ಈಗ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. ಅಂದ್ಹಾಗೆ ರಾಂಧವ ನಿರ್ದೇಶಕ ಸುನೀಲ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ. ಮೊದಲ ಚಿತ್ರದಲ್ಲೇ ಭಾರಿ ನಿರೀಕ್ಷೆ ಮೂಡಿಸಿದ್ದಾರೆ ನಿರ್ದೇಶಕ ಸುನೀಲ್.
ಅಂದ್ಹಾಗೆ ರಾಂಧವ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರಕ್ಕೆ ಯಾವುದೆ ಕತ್ತರಿ ಪ್ರಯೋಗ ಮಾಡದೆ ಯು/ಎ ಪ್ರಮಾಣ ಪತ್ರ ನೀಡಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ದೊಡ್ಡ ದೊಡ್ಡ ಸಿನಿಮಾಗಳ ಅಬ್ಬರದ ನಡುವೆ ಗ್ಯಾಪ್ ನಲ್ಲಿ ಅದ್ಧೂರಿಯಾಗಿ ಸುಮಾರು 300ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದೆ ಚಿತ್ರತಂಡ.

ಈಗಾಗಲೆ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಂಧವ ಚಿತ್ರದಲ್ಲಿ ಭುವನ್ ಮೂರು ಶೇಡ್ ನಲ್ಲಿ ಮಿಂಚಿದ್ದಾರೆ. ಈಗಾಗಲೆ
ಟ್ರೈಲರ್ ಮೂಲಕ ಎರಡು ಲುಕ್ ರಿವೀಲ್ ಆಗಿದೆ. ಒಂದು ಗೆಟಪ್ ಮಾಡ್ರನ್ ಭುವನ್ ಆಗಿ ಕಾಣಿಸಿಕೊಂಡರೆ, ಇನ್ನೊಂದು ಲುಕ್ ನಲ್ಲಿ ರಾಜನಾಗಿ ಮಿಂಚಿದ್ದಾರೆ. ಆದ್ರೆ ಮೂರನೇ ಗೆಟಪ್ ಬಗ್ಗೆ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ ಚಿತ್ರತಂಡ.

ಟ್ರೈಲರ್ ಮತ್ತು ಹಾಡುಗಳು ರಿಚ್ ಆಗಿ ಮೂಡಿ ಬಂದಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಬಿಗ್ ಬಾಸ್ ನಂತರ ಭುವನ್ ಒಂದು ಧಾರಾವಾಹಿ ಮೂಲಕ ಕಿರುತೆರೆ ಅಭಿಮಾನಿಗಳ ಮುಂದೆ ಬಂದಿದ್ದರು. ಆದ್ರೆ ಆ ನಂತರ ಭುವನ್ ಎಲ್ಲಿಯು ಕಾಣಿಸಿಕೊಂಡಿರಲಿಲ್ಲ. ಆದ್ರೀಗ ವರ್ಷದ ಬಳಿಕ ರಾಂಧವನಾಗಿ ಎಂಟ್ರಿ ಕೊಡುತ್ತಿದ್ದು ರಾಂಧವ ಭುವನ್ ನೋಡಲು ಚಿತ್ರಾಭಿಮಾನಿಗಳ ಕಾತುರರಾಗಿದ್ದಾರೆ.


Click it and Unblock the Notifications











