ಕಾಗೆ- ನವಿಲು ಹೋಲಿಸಿ ಎದುರಾಳಿಗಳಿಗೆ ವರ್ತೂರ್ ಸಂತೋಷ್ ತಿರುಗೇಟು
ಬಿಗ್‌ಬಾಸ್ ಶೋಗೆ ಹೋಗಿ ಬಂದು ವರ್ತೂರ್ ಸಂತೋಷ್ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಹಳ್ಳಿಕಾರ್ ಒಡೆಯ ಎಂದೇ ಕೆಲವರು ಅವರನ್ನು ಕರೆಯುತ್ತಾರೆ. ಇದೇ ಕಾರಣಕ್ಕೆ ವಿವಾದ ಕೂಡ ಸೃಷ್ಟಿಯಾಗಿದೆ. ಇನ್ನು ವರ್ತೂರ್ ಸಂತೋಷ್ ತಮ್ಮ ಮಾತುಗಳಿಂದ ಅಭಿಮಾನಿಗಳ ಮನಗೆಲ್ಲುತ್ತಾ ಬರುತ್ತಿದ್ದಾರೆ.
ಕಾರ್ತಿಕ್ ಮಹೇಶ್ ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿಜೇತರಾಗಿ ಹೊರಹೊಮ್ಮಿದ್ದರು. ಆದರೆ ಕಾರ್ತಿಕ್‌ಗಿಂತ ವರ್ತೂರು ಸಂತೋಷ್ ಜನಪ್ರಿಯತೆ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಾರಿ ಬಿಗ್‌ಬಾಸ್ ಮನೆಗೆ 17 ಜನ ಸ್ಪರ್ಧಿಗಳಾಗಿ ಹೋಗಿದ್ದರು. ಹೊರಬಂದ ಮೇಲೆ ಎಲ್ಲರೂ ಸೈಲೆಂಟ್ ಆಗಿಬಿಟ್ಟರು. ಆದರೆ ಒಂದಿಲ್ಲೊಂದು ಕಾರಣಗಳಿಂದ ವರ್ತೂರು ಸಂತೋಷ್ ಸುದ್ದಿಯಲ್ಲಿದ್ದಾರೆ.

ಇನ್ನು ತಮ್ಮ ಜೊತೆ ಬಿಗ್‌ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳ ಜೊತೆ ವರ್ತೂರು ಸಂತೋಷ್ ಆತ್ಮೀಯ ಒಡನಾಡ ಮುಂದುವರೆಸಿದ್ದಾರೆ. ತನಿಷಾ ಕುಪಂಡ, ತುಕಾಲಿ ಸಂತು, ನೀತು ಜೊತೆಗೆ ಹೆಚ್ಚಿನ ಆತ್ಮೀಯತೆ. ಅವರ ಮನೆಗೆ ಇವರು ಹೋಗುವುದು, ಇವರ ಮನೆಗೆ ಅವರು ಬರುವುದು ಹೀಗೆ ಭಾರೀ ಸುದ್ದಿ ಆಗುತ್ತಿದೆ. ಇತ್ತೀಚೆಗೆ ನೀತು ಅವರ ಹೋಟೆಲ್‌ಗೆ ವರ್ತೂರು ಸಂತೋಷ್ ಭೇಟಿ ನೀಡಿದ್ದರು.
ನೀತು ಆತಿಥ್ಯ ಸ್ವೀಕರಿಸಿ ವರ್ತೂರು ಸಂತೋಷ್ ಸಂತೋಷ್ ಯೂಟ್ಯೂಬ್ ಚಾನಲ್‌ಗಳ ಜೊತೆ ಮಾತನಾಡಿದ್ದಾರೆ. ಸಿನಿಮಾ, ರಾಜಕೀಯ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನು ವರ್ತೂರು ಸಂತೋಷ್ ವಿರುದ್ದ ಕೆಲವರು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆಯೂ ತಿರುಗೇಟು ನೀಡಿದ್ದಾರೆ.
ರಾಜಕೀಯಕ್ಕೆ ಬರುತ್ತೀರಾ ಎನ್ನುವ ಪ್ರಶ್ನೆಗೆ "ನಾನು ರಾಜಕೀಯಕ್ಕೆ ಬರಲ್ಲ. ಯಾವುದೇ ಪಕ್ಷ, ಸಂಘದ ಜೊತೆ ಗುರ್ತಿಸಿಕೊಳ್ಳಲು ಇಷ್ಟವಿಲ್ಲ. ಜನರ ಸೇವೆ ಮಾಡಲು ರಾಜಕೀಯವೇ ಬೇಕೆಂದು ಇಲ್ಲ. ದೇವರ ಆಶೀರ್ವಾದ ಇದ್ದರೆ ಸಾಕು" ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಮಾತನಾಡಿರುವ ವರ್ತೂರು ಸಂತೋಷ್ "ನಾನು ಯಾರ ಬಗ್ಗೆಯೂ ಯಾವುದೇ ಆರೋಪ ಮಾಡಿಲ್ಲ. ನನಗೆ ನಾನೇ ಕಿಂಗ್, ನಾನೇ ಕಿಲಾಡಿ ಎಂದು ಹೇಳಿಕೊಂಡಿದ್ದೀನಾ? ಆದರೂ ಕೆಲವೊಂದು ಷಡ್ಯಂತ್ರ ನಡೀತಿದೆ. ಕಾಗೆ ಹಾಗೂ ನವಿಲಿನ ಬಗ್ಗೆ ಹೇಳುವುದಾದರೆ ಹೇಸಿಗೆಯಲ್ಲಿ ತಿಂದು ಬಂದರೂ ಅದನ್ನು ಕಾಗೆ ಎನ್ನುತ್ತಾರೆ. ಆದರೆ ನವಿಲಿಗೆ ಪ್ರತ್ಯೇಕವಾದ ಸ್ಥಾನವಿದೆ" ಎಂದಿದ್ದಾರೆ.

"ನವಿಲು ಗರಿ ಸಿಕ್ಕರೆ ತೆಗೆದುಕೊಂಡು ಮನೆಯಲ್ಲಿಟ್ಟುಕೊಳ್ಳುತ್ತೇವೆ. ಕಾಗೆ ಸತ್ತರೆ ಮನೆಯಲ್ಲಿ ಇಟ್ಟುಕೊಳ್ಳಲ್ಲ. ಇಷ್ಟೇ ವ್ಯತ್ಯಾಸ. ಅವುಗಳ ಕೆಲಸ ಕಾ ಕಾ ಎಂದುಕೊಂಡಿರಬೇಕು. ಅರ್ಥ ಆಯಿತಾ ನಾನು ಯಾರಿಗೆ ಹೇಳುತ್ತೀದ್ದಿನಿ ಅಂತ. ಅವುಗಳ ಕೆಲಸ ಅಷ್ಟೆ. ಹೇಸಿಗೆಯಲ್ಲಿ ತಿನ್ನುತ್ತವೆ. ನಾವು ಹಾಕಿದ ಅನ್ನ ತಿಂದು ಮತ್ತೆ ನಮ್ಮ ಬಳಿ ಬಂದು ಕಾ ಕಾ ಎಂದುಕೊಂಡಿರುತ್ತವೆ. ಆದರೆ ನವಿಲು ನರ್ತನ ನೋಡಲು ಜನ ಕಾಯುತ್ತಿರುತ್ತಾರೆ. ಇಷ್ಟೇ ವ್ಯತ್ಯಾಸ. ಜೀವನದಲ್ಲಿ ನಾವು ಮತ್ತೊಬ್ಬರಿಗೆ ಮಾರ್ಗದರ್ಶನ ಆಗಬೇಕು. ಮತ್ತೊಬ್ಬರನ್ನು ಸಣ್ಣವರನ್ನಾಗಿ ಮಾಡಬಾರದು" ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಜಗ್ಗೇಶ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ "ಅದೆಲ್ಲಾ ಮುಗಿದ ವಿಚಾರ ಬಿಡಿ" ಎಂದು ವರ್ತೂರು ಸಂತೋಷ್ ಸುಮ್ಮನಾಗಿದ್ದಾರೆ. ಇನ್ನು ಹಳ್ಳಿಕಾರ್ ಒಡೆಯ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿರುವುದಕ್ಕೆ ಹಳ್ಳಿಕಾರ್ ಸಂರಕ್ಷಕರು ವರ್ತೂರು ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಕಷ್ಟು ಜನ ಹಳ್ಳಿಕಾರ್ ತಳಿಯನ್ನು ಉಳಿಸಿಕೊಂಡು ಬರುತ್ತಿದ್ದೇವೆ. ಆದರೆ ವರ್ತೂರು ಸಂತೋಷ್ ತಾವೊಬ್ಬರೇ ಸಂರಕ್ಷಕರು ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಆಗುತ್ತದೆ. ಮುಂದಿನ ಪೀಳಿಕೆಗೆ ತಪ್ಪು ಮಾಹಿತಿ ಹೋಗುತ್ತದೆ ಎಂದು ಮಂಡದ್ಯ ಕೆಲ ಹಳ್ಳಿಕಾರ್ ಸಂರಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವರ್ತೂರು ಸಂತೋಷ್ ವಿರುದ್ಧ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.


Click it and Unblock the Notifications











