ಸದ್ದಿಲ್ಲದೇ ಉಂಗುರ ಬದಲಿಸಿಕೊಂಡ ಪ್ರಥಮ್: 'ಒಳ್ಳೆ ಹುಡುಗ' ಕೈ ಹಿಡಿಯುತ್ತಿರುವ ಹುಡುಗಿಯ ಹಿನ್ನೆಲೆ ಏನು?
ಬಿಗ್‌ಬಾಸ್ ಶೋನಿಂದ ಕನ್ನಡಿಗರಿಗೆ ಪರಿಚಿತರಾದ್ದವರು ಪ್ರಥಮ್. ಶೋನಲ್ಲಿ ಒಳ್ಳೆ ಹುಡುಗ ಎಂದು ಹೇಳಿಕೊಂಡು ಟ್ರೋಫಿಗೆ ಮುತ್ತಿಟ್ಟ ಪ್ರಥಮ್ ನಂತರ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಸದ್ಯ ನಿಶ್ಚಿತಾರ್ಥ ಮಾಡಿಕೊಂಡು ಆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ(ಜೂನ್ 12) ಭಾನುಶ್ರೀ ಎಂಬುವವರ ಜೊತೆ ಪ್ರಥಮ್ ಮದುವೆ ನಿಶ್ಚಯವಾಗಿದೆ. ಶೀಘ್ರದಲ್ಲೇ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ.
'ಕರ್ನಾಟಕದ ಅಳಿಯ' ಎನ್ನುವ ಸಿನಿಮಾದಲ್ಲಿ ನಟಿಸ್ತಿರುವ ಪ್ರಥಮ್ ಶೀಘ್ರದಲ್ಲೇ ಮಂಡ್ಯದ ಅಳಿಯ ಆಗಲಿದ್ದಾರೆ. ಅಂದರೆ ಮಂಡ್ಯ ಮೂಲದ ಭಾನುಶ್ರೀ ಜೊತೆ ಮದುವೆ ಆಗಲಿದ್ದಾರೆ. ಮಂಡ್ಯ ಪಕ್ಕದ ಹಳ್ಳಿಯಲ್ಲಿ ಪ್ರಥಮ್- ಭಾನುಶ್ರೀ ನಿಶ್ಚಿತಾರ್ಥ್ ಬಹಳ ಸರಳವಾಗಿ ನೆರವೇರಿದೆ. ಎರಡು ಕುಟುಂಬಗಳ ಸದಸ್ಯರು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿ ಆಗಿದ್ದರು. ಪ್ರಥಮ್ ಮದುವೆ ಆಗ್ತಿರೋ ಭಾನುಶ್ರೀ ಸದ್ಯ ಡಿಗ್ರಿ ಮುಗಿಸಿ ಡಬಲ್ ಡಿಗ್ರಿ ಮಾಡಲು ತಯಾರಿ ನಡೆಸುತ್ತಿದ್ದಾರೆ.

ಮೊದಲಿನಿಂದಲೂ ಪ್ರಥಮ್ ಹಳ್ಳಿ ಹುಡುಗಿಯನ್ನು ಮದುವೆ ಆಗುವುದಾಗಿ ಹೇಳುತ್ತಾ ಬರ್ತಿದ್ದರು. ಹೇಳಿದಂತೆಯೇ ಹಳ್ಳಿಯ ಬಡ ಕುಟುಂಬದ ಹುಡುಗಿಯನ್ನ ಮದುವೆ ಆಗಲು ಮುಂದಾಗಿದ್ದಾರೆ. ನಿಶ್ಚಿತಾರ್ಥದ ಬಗ್ಗೆ ಫೇಸ್‌ಬುಕ್‌ನಲ್ಲಿ "ಒಂದು ಸುಂದರ ಕ್ಷಣ.ಇವತ್ತು ನನ್ನ ಎಂಗೇಜ್‌ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೇ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ; ನಾನು ತುಂಬಾ ಸರಳವಾಗಿಯೇ ಬದುಕಿದವನು; ಹಾಗೇ ಇರೋಕೆ ಇಷ್ಟ"
"ನನ್ನ ಎಂಗೇಜ್‌ಮೆಂಟ್ ಈ ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೇ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ; ಹೀಗೇ ಇದ್ದು ಬಿಡ್ತೀನಿ.. ಹರಸುವವರು ಅಲ್ಲಿಂದಲೇ ಹರಸಿ...ಅದೇ ಆಶೀರ್ವಾದ" ಎಂದು ಬರೆದುಕೊಂಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ತಮ್ಮ ನಾನ್‌ಸ್ಟಾಪ್ ಮಾತಿನಿಂದ ಪ್ರಥಮ್ ಗಮನ ಸೆಳೆದಿದ್ದರು. 100 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದು ಗೆದ್ದು ಬೀಗಿದ್ದರು. ನಂತರ 'ಎಂಎಲ್‌ಎ', 'ದೇವರಂಥ ಮನುಷ್ಯ', 'ರಾಜು ಕನ್ನಡ ಮೀಡಿಯಂ', 'ನಟ ಭಯಂಕರ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಮತ್ತೆ ಕೆಲವು ಸಿನಿಮಾಗಳು ಈಗ ಅವರ ಕೈಯಲ್ಲಿವೆ.


Click it and Unblock the Notifications











