"ಬರ್ತ್‌ಡೇಗೆ ದುಡ್ದು ಕೊಟ್ಟು ಜನರನ್ನು ಕರೆಸ್ತಾರೆ, ಅಷ್ಟು ಮಾರ್ಕೆಟ್ ಇದೆ, ಮೆಜೆಸ್ಟಿಕ್ ಇದೆ ಅಂತಾರೆ": ಪ್ರಥಮ್
ಗುಣಮಟ್ಟದ ಸಿನಿಮಾಗಳು ಇಲ್ಲದೇ ಕನ್ನಡ ಚಿತ್ರರಂಗ ಬಡವಾಗುತ್ತಿದೆ. ಕನ್ನಡದಲ್ಲಿ ಮೂರ್ನಾಲ್ಕು ಜನ ಸ್ಟಾರ್ ನಟರು ಬಿಟ್ಟರೆ ಉಳಿದವರು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ವಿಫಲರಾಗುತ್ತಿದ್ದಾರೆ. ಓಟಿಟಿಯವರು ಕನ್ನಡ ಸಿನಿಮಾಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಕೆಲವೊಮ್ಮೆ ಕಂಟೆಂಟ್ ಇರುವ ಸಿನಿಮಾಗಳು ಬಂದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ನಾನಾ ಕಾರಣಗಳಿವೆ. ಸಿನಿಮಾ ಅನ್ನೋದು ಒಂದು ಹವ್ಯಾಸ. ನಿಯಮಿತವಾಗಿ ಒಳ್ಳೆ ಸಿನಿಮಾಗಳು ಬಂದಾಗ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಆ ಹವ್ಯಾಸವನ್ನು ಹುರಿದುಂಬಿಸುವಂತಹ ಸಿನಿಮಾಗಳು ಆಗಾಗ್ಗೆ ಬರಬೇಕು. ಟಿಕೆಟ್ ದರ ಕೂಡ ಕಮ್ಮಿ ಮಾಡಬೇಕಿದೆ.

ಕನ್ನಡ ಚಿತ್ರರಂಗದ ಸ್ಥಿತಿಗತಿ ಬಗ್ಗೆ ಇತ್ತೀಚೆಗೆ ಫಿಲ್ಮ್ ಚೇಂಬರ್‌ನಲ್ಲಿ ಗಂಭೀರ ಚರ್ಚೆ ನಡೆಯಿತು. ಕನ್ನಡ ಚಿತ್ರರಂಗವನ್ನು ಉಳಿಸಲು ಏನೆಲ್ಲಾ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಮಾತುಕತೆ ಆಯಿತು. ಸ್ಟಾರ್ ನಟರು ವರ್ಷಕ್ಕೆ ಒಂದು ಚಿತ್ರವನ್ನಾದರೂ ಮಾಡುವಂತೆ ಮನವಿ ಮಾಡುವುದಾಗಿ ಸಭೆಯಲ್ಲಿ ಚರ್ಚೆ ಆಗಿದೆ. ಇನ್ನು ಇದೆಲ್ಲದರ ನಡುವೆ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಕನ್ನಡ ನಟರ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಕನ್ನಡದಲ್ಲಿ ಕೆಲ ನಟರದ್ದು ಬರೀ ಬಿಲ್ಡಪ್. ಹುಟ್ಟುಹಬ್ಬಕ್ಕೆ ಕೂಡ ಹಣ ಕೊಟ್ಟು ಜನರನ್ನು ಮನೆ ಬಳಿ ಕರೆಸುತ್ತಾರೆ ಎಂದು ಪ್ರಥಮ್ ಹೇಳಿದ್ದಾರೆ. ಬರೀ ಬಿಲ್ಡಪ್ ಇದ್ದರೆ ಸಿನಿಮಾಗಳು ಓಡಲ್ಲ ಎಂದಿದ್ದಾರೆ. "ಬರ್ತ್‌ಡೇಗೆ ಜನರನ್ನು ಕರೆಸುತ್ತಾರೆ ಕನ್ನಡದಲ್ಲಿ ಕೆಲ ನಟರು. ಮಾಧ್ಯಮಗಳ ಮುಂದೆ ತೋರಿಸಿಕೊಳ್ಳಲು ಹೀಗೆ ಮಾಡುತ್ತಾರೆ" ಎಂದಿದ್ದಾರೆ.

"ಜ್ಯೂನಿಯರ್ಸ್ ಏಜೆಂಟ್‌ಗೆ ಹೇಳಿ ಜನರನ್ನು ಮನೆ ಬಳಿ ಕರೆಸಿ ಅಣ್ಣಂಗೆ ಜೈ ಎಂದು ಹೇಳಿಸುತ್ತಾರೆ. ತಮಿಳುನಾಡಿನಲ್ಲಿ ಯಾರಾದರೂ ಸತ್ತರೆ ಬಾಯಿ ಬಡಿದುಕೊಳ್ಳು ಜನರನ್ನು ಕರೆಸುವಂತೆ ಹುಟ್ಟುಹಬ್ಬಕ್ಕೆ ಕರೆಸುತ್ತಾರೆ. ಇಂತಹ ಥರ್ಡ್‌ಕ್ಲಾಸ್ ಸ್ಟೇಜ್‌ನಲ್ಲಿ ನಾವೆಲ್ಲಾ ಇದ್ದೀವಿ. ಇದನ್ನೆಲ್ಲಾ ಇಟ್ಕೊಂಡು ನನಗೆ ಅಷ್ಟು ಮಾರ್ಕೆಟ್ ಇದೆ, ಮೆಜೆಸ್ಟಿಕ್ ಇದೆ, ಶಿವಾಜಿನಗರ ಇದೆ ಅಂತಾರೆ. ಯಾವ ಮಾರ್ಕೆಟ್ ಇಲ್ಲ ಸರ್" ಎಂದು ಪ್ರಥಮ್ ವ್ಯಂಗ್ಯವಾಡಿದ್ದಾರೆ.
"ಖ್ಯಾತ ವಿತರಕರೊಬ್ಬರು ಹೇಳುವಂತೆ ಶನಿವಾರ, ಭಾನುವಾರ ಬಿಡಿ ಸೋಮವಾರ ಮಧ್ಯಾಹ್ನದ ವೇಳೆಗೆ ಆ ನಟ, ಯಾರೋ ಕರ್ಕೊಂಡು ಬನ್ನಿ. ಚಿತ್ರಮಂದಿರದಲ್ಲಿ 35 ಜನ ಇರ್ತಾರೆ. ಅದು ಪ್ರಾಮಾಣಿಕ ಪ್ರೇಕ್ಷಕರು. ಇನ್ನೆಲ್ಲಾ ಬಿಲ್ಡಪ್ ಎನ್ನುತ್ತಾರೆ. ಇದೇ ನಿಜ. ಯಾರೋ ನಟ ಹುಟ್ಟುಹಬ್ಬಕ್ಕೆ ಜನರನ್ನು ಕರೆಸುತ್ತಾರೆ. ಯಾರೋ ಹೇಳಿದ್ರು ಅಂತ ಕೇಳಿ, ನಾವು ಸ್ಟಾರ್ ಎಂದು ಹಾಗೆ ಮಾಡ್ತಾರೆ"
"ಮಧ್ಯಾಹ್ನದವರೆಗೂ ಕಾದರೂ ಜನ ಬರದೇ ಇದ್ದಾಗ ದುಡ್ಡು ಕೊಟ್ಟು ಜ್ಯೂನಿಯರ್ ಆರ್ಟಿಸ್ಟ್‌ಗಳನ್ನು ಕರೆಸುತ್ತಾರೆ. ಇದೆಲ್ಲಾ ರಾಜಕೀಯ ಸಮಾವೇಶಕ್ಕೆ ಚೆಂದ. ಈ ದುರಂತವನ್ನು ಚಿತ್ರರಂಗಕ್ಕೂ ತಂದು ಬಿಟ್ರಲ್ಲೋ ಎಲ್ಲಾ ಫೇಕ್. ನಂಬಬೇಡಿ. ಇನ್ನು ಯೂಟ್ಯೂಬ್ ವೀವ್ಸ್, ಲೈಕ್ಸ್ ಎಲ್ಲಾ ಸುಳ್ಳು. ಬೆಳಗ್ಗೆ 5 ಗಂಟೆಗೆ ಟೀಸರ್ ಬಿಟ್ಟು ಒಂದು ಗಂಟೆ ಅವಧಿಯಲ್ಲಿ 5 ಮಿಲಿಯನ್ಸ್ ವೀವ್ಸ್ ಅಂತಾರೆ ನಂಬೋಕೆ ಸಾಧ್ಯನಾ? ಎಂದು ಪ್ರಥಮ್ ಪ್ರಶ್ನಿಸಿದ್ದಾರೆ.
ಪ್ರಥಮ್ ನಿರ್ದೇಶಿಸಿ ನಟಿಸಿರುವ 'ಕರ್ನಾಟಕದ ಅಳಿಯ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ನೇಹಾ ಹಿರೇಮಠ ಕೊಲೆ ಪ್ರಕರಣದ ಬಗ್ಗೆ ಪ್ರಥಮ್ ಆಕ್ರೋಶ ವ್ಯಕ್ತಪಡಿಸಿದ್ದರು. ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಹಾಸನ ಪೆನ್‌ಡ್ರೈವ್ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ್ದರು.


Click it and Unblock the Notifications











