ರಾಜಕೀಯದ ಅಖಾಡಕ್ಕೆ ಧುಮುಕಿದ ಜಾಹ್ನವಿ ; ತೆನೆ ಹೊತ್ತ ಬಿಗ್ ಬಾಸ್ ಚೆಲುವೆ - ಸ್ವಾಗತಿಸಿದ ಹೆಚ್‌ಡಿಕೆ
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಇಷ್ಟೇ ಅಲ್ಲ ವಿಜಯ್ ಐತಿಹಾಸಿಕ ಸಾಧನೆ ಕೂಡ ಕಣ್ಮುಂದೆಯೇ ಇದೆ.
ಆದರೆ ಈ ಮಾತು ಕನ್ನಡಕ್ಕೆ ಅನ್ವಯವಾಗುವುದಿಲ್ಲ. ನಿಜಾ .. ಅನಂತ್ ನಾಗ್.. ರಮ್ಯಾ .. ಸುಮಲತಾ ಅಂಬರೀಶ್.. ಉಮಾಶ್ರೀ..ಶಶಿಕುಮಾರ್.. ಜಗ್ಗೇಶ್.. ಬಿ.ಸಿ.ಪಾಟೀಲ್ ಹೀಗೆ ಹಲವರು ರಾಜಕೀಯಕ್ಕೆ ಧುಮುಕಿದ್ದಾರೆ. ಗುರುತಿಸಿಕೊಂಡಿದ್ದಾರೆ. ಆದರೆ.. ರಾಜಕೀಯದ ಪಡಸಾಲೆಯಲ್ಲಿ ಅಂಬರೀಶ್ ಗುಡುಗಿದಂತೆ, ಬೆಳೆದಂತೆ ಯಾರು ಕ್ರಾಂತಿಯನ್ನು ಮಾಡಲಿಲ್ಲ. ಪ್ರಾದೇಶಿಕ ಪಕ್ಷವನ್ನು ಕೂಡ ಕಟ್ಟಲಿಲ್ಲ. ಉಪೇಂದ್ರ ಈ ಕೆಲಸ ಮಾಡಿದ್ದಾರಾದರೂ ಅವರ ಲೆಕ್ಕಾಚಾರವೇ ಬೇರೆ. ಹೀಗಿರುವಾಗ ಜಾಹ್ನವಿ ಈಗ ರಾಜಕೀಯದ ಅಖಾಡಕ್ಕೆ ಧುಮುಕಿದ್ದಾರೆ.

ಹೌದು.ಜಾಹ್ನವಿ.. ಕಳೆದ ವರ್ಷ ''ಬಿಗ್ ಬಾಸ್'' ಸ್ಫರ್ಧಿ. ಕಳೆದ ಬಾರಿ ''ಬಿಗ್ ಬಾಸ್'' ಫಿನಾಲೆ ತಲುಪುವರ ಸಾಲಿನಲ್ಲಿ ಹಲವರ ಪ್ರಕಾರ ಜಾಹ್ನವಿ ಮುಂಚೂಣಿಯಲ್ಲಿದ್ದರು.
ಆದರೆ..ಜಾಹ್ನವಿ ಅದೆಲ್ಲಿ ಎಡವಿದರು ಎನ್ನುವುದು ''ಬಿಗ್ ಬಾಸ್''ಗೆ ಗೊತ್ತಾದರೂ ''ಬಿಗ್ ಬಾಸ್'' ಸ್ಫರ್ಧಿ ಎಂಬ ಲೆಬಲ್‌ನ ಹೊರತಾಗಿ ಕನ್ನಡ ಸುದ್ದಿ ಲೋಕದಲ್ಲಿ ನಿರೂಪಕಿಯಾಗಿ ಕೂಡ ಹೆಸರು ಮಾಡಿದವರು ಜಾಹ್ನವಿ.
ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮ ಲೋಕದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ನಂತರ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ಕಿರುತೆರೆಯ ಮೇಲೆ ಕೂಡ ಕಣ್ಣಿಟ್ಟಿದ್ದಾರೆ.
ಇದೇ ಸಮಯದಲ್ಲಿ ರಾಜಕೀಯದಲ್ಲಿಯೂ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಜಾಹ್ನವಿ ಮುಂದಾಗಿದ್ದು ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ತಲೆಯ ಮೇಲೆ ತೆನೆ ಹೊತ್ತಿದ್ದಾರೆ.

ಜಾಹ್ನವಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಲ ವಿಶೇಷತೆಗಳಿವೆ. ಕೇಂದ್ರ ಸಚಿವ, ಜೆಡಿಎಸ್ ಪ್ರಮುಖ ನಾಯಕ ಹೆಚ್‌ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜಾಹ್ನವಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಹೌದು, ಅಸಲಿಗೆ ಜೆಡಿಎಸ್ ಮಹಿಳಾ ಘಟಕಕ್ಕೆ ಇನ್ನಷ್ಟು ಬಲ ತುಂಬಲು, ಕೇಂದ್ರ ಸಚಿವ ಮತ್ತು ಜೆಡಿಎಸ್ ಪ್ರಮುಖ ನಾಯಕ ಹೆಚ್‌ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಈಗಾಗಲೇ ಎರಡು ವರ್ಷಗಳಿಂದ ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಗಿ ರಶ್ಮಿ ರಾಮೇಗೌಡ ಕಾರ್ಯ ನಿರ್ವಹಿಸುತ್ತಿದ್ದು ಸ್ಥಳಿಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಕೊಂಡು ತನ್ನ ಸಂಘಟನಾ ಕಾರ್ಯವನ್ನು ಜೆಡಿಎಸ್ ಚುರುಕುಗೊಳಿಸಿದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಇಂದು (ಮೇ 24) ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಹ್ನವಿ, ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ. ವಿಶೇಷ ಅಂದರೆ ಜೆಪಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್‌ಡಿ ಕುಮಾರಸ್ವಾಮಿ ಪಕ್ಷದ ಧ್ವಜ ನೀಡಿ ಜಾಹ್ನವಿ ಅವರನ್ನು ಸ್ವಾಗತಿಸಿದ್ದಾರೆ. ಶಾಲು ಹೊದಿಸಿ ಆತ್ಮೀಯವಾಗಿ ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಜಾಹ್ನವಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ,ಶೈಲಜಾ ರಾವ್ ಉಪಸ್ಥಿತರಿದ್ದರು. ಇನ್ನು ಜಾಹ್ನವಿ ತೆನೆ ಹೊತ್ತ ಬೆನ್ನಲ್ಲೇ ಯುವ ಸಮುದಾಯವನ್ನು ಸೆಳೆಯುವಲ್ಲಿ ಜಾಹ್ನವಿ ಜೆಡಿಎಸ್ ಪಕ್ಷದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಚರ್ಚೆ ಕೂಡ ಸದ್ಯ ನಡೆಯುತ್ತಿದೆ.
ಇನ್ನುಳಿದಂತೆ ಸದ್ಯ ರಾಜಕೀಯ ರಂಗ ಪ್ರವೇಶ ಮಾಡಿರುವ ಜಾಹ್ನವಿ, ಸಿನಿಮಾ ರಂಗವನ್ನು ತೊರೆಯುತ್ತಾರಾ..? ಅಥವಾ ಎರಡು ದೋಣಿಯ ಮೇಲೆ ಕಾಲಿಡುತ್ತಾರಾ..? ಎನ್ನುವ ಕುತೂಹಲ ಇದೆ. ತಮ್ಮ ಈ ಹೊಸ ಪ್ರಯತ್ನದಲ್ಲಿ ಜಾಹ್ನವಿ ಎಷ್ಟರ ಮಟ್ಟಿಗೆ ಯಶಸ್ವಿಯಾಗ್ತಾರಾ..? ರಾಜಕೀಯದಲ್ಲಿ ಯಾವೆಲ್ಲಾ ಕ್ರಾಂತಿಯನ್ನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications