Varthur Santhosh: ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನ, ಕಾರಣ ಇದು
ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಿರುವ ರಿಯಾಲಿಟಿ ಶೋ ಬಿಗ್ ಬಾಸ್. ಈಗಾಗಲೇ ಹತ್ತನೇ ಸೀಸನ್‌ಗೆ ಕಾಲಿಟ್ಟಿರುವ ಈ ರಿಯಾಲಿಟಿ ಶೋನಲ್ಲಿ ಹಿಂದೆಂದು ನಡೆದಿರದ ಘಟನೆ ನಡೆದಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಬಂಧನವಾಗಿದೆ. ಭಾನುವಾರ ಕಿಚ್ಚ ಸುದೀಪ್ ಪಂಚಾಯಿತಿ ಮುಗಿದ ಬಳಿಕ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಹೌದು, ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪರ್ಧಿಯೊಬ್ಬರನ್ನು ಬಂಧಿಸಲಾಗಿದೆ. ರಾಮೋಹಳ್ಳಿ ಅರಣ್ಯಾಧಿಕಾರಿಗಳು ಆರೋಪಿ ಸಂತೋಷ್ ಅವರನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣ ಅವರು ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಎಂದು ಹೇಳಲಾಗಿದೆ. ತಮ್ಮ ಕುತ್ತಿಗೆಯ ಸರದಲ್ಲಿ ಪೆಂಡೆಂಟ್ ಹಾಕಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.

ರಾಮೋಹಳ್ಳಿ ಅರಣ್ಯ ಅಧಿಕಾರಿಗಳು ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಅವರನ್ನು ಹೊರ ಕರೆತಂದು ಬಂಧಿಸಿದ್ದಾರೆ. ವರ್ತೂರು ಸಂತೋಷ್ ಅರಣ್ಯಾಧಿಕಾರಿಗಳ ವಶದಲ್ಲಿದ್ದಾರೆ. ಅಧಿಕಾರಿಗಳು ಹುಲಿ ಉಗುರಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನ ಮಾಡಲಾಗಿದೆ. ಕುತ್ತಿಗೆಯಲ್ಲಿ ಹುಲಿ ಉಗುರು ಹಾಕಿಕೊಂಡಿರುವ ಅವರ ವಿರುದ್ಧ ವನ್ಯಜೀವಿ ಕಾಯಿದೆ ಉಲ್ಲಂಘನೆ ಅಡಿಯಲ್ಲಿ ದೂರು ದಾಖಲಾಗಿತ್ತು.
ಬಂಧಿತ ವರ್ತೂರು ಸಂತೋಷ್ ಅವರನ್ನು ಕಗ್ಗಲಿಪುರ ಅರಣ್ಯ ಇಲಾಖೆ ಕಚೇರಿಯಲ್ಲಿನ ಅಧಿಕಾರಿಗಳು ವಿಚಾರಿಸುತ್ತಿದ್ದಾರೆ. ಬಂಧಿತರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದ್ದಾರೆ. ಇನ್ನು, ರೈತ ಸಂತೋಷ್ ಹಳ್ಳಿಕಾರ್ ತಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇದಲ್ಲದೆ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಇವರನ್ನು ಹಳ್ಳಿಕಾರ್ ಒಡೆಯ ಎಂದು ಕರೆಯಲಾಗುತ್ತದೆ.


Click it and Unblock the Notifications











