Tanisha Kuppanda: ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ 'ಪೆಂಟಗನ್' ಸಿನಿಮಾ ಹಿಂದಿಯಲ್ಲಿ ಬಿಡುಗಡೆ
ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ವೈಟಿಂಗ್ ಲಿಸ್ಟ್‌ನಲ್ಲಿದ್ದ ಇವರಿಗೆ ಈ ವಾರ ಹೆಚ್ಚು ಪ್ರಮುಖವಾಗಿತ್ತು. ಸದ್ಯ ಜನರ ಪ್ರೀತಿ ಮತ್ತು ಬೆಂಬಲದಿಂದ ಮನೆಯಲ್ಲಿಯೇ ಇರಲಿದ್ದು, ಇದರ ಬೆನ್ನಲ್ಲೆ ಸಿನಿ ಸುದ್ದಿಯೊಂದು ಬಂದಿದೆ.
ಎಸ್... ಕಲರ್ಸ್ ಕನ್ನಡದ ಮಂಗಳಗೌರಿ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿದ್ದ ನಟಿ ತನಿಷಾ ಸ್ಯಾಂಡಲ್‌ವುಡ್‌ನಲ್ಲೂ ಕೆಲಸ ಮಾಡುತ್ತಿದ್ದಾರೆ. ಹಿರಿತೆಗೆಗೆ ಪಾದಾರ್ಪಣೆ ಮಾಡಿದ್ದ ಇವರು 'ಪೆಂಟಗನ್' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಪೆಂಟಗನ್ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗಿದೆ.

ಹಿಂದಿಯಲ್ಲಿ ಬಿಡುಗಡೆಯಾದ ಕನ್ನಡದ ಪೆಂಟಗನ್
ದಕ್ಷಿಣ ಭಾರತ ಮತ್ತು ಹಾಲಿವುಡ್ ಚಲನಚಿತ್ರಗಳ ವೈವಿಧ್ಯಮಯ ಸಿನಿಮಾಗಳನ್ನು ಪ್ರಸಾರ ಮಾಡುವ OTT ಪ್ಲಾಟ್‌ಫಾರ್ಮ್ ಡಾಲಿವುಡ್ ಪ್ಲೇ ನಲ್ಲಿ ಅಕ್ಟೋಬರ್ 14 ರಂದು ಪೆಂಟಗನ್‌ನ ಹಿಂದಿ ಪ್ರೀಮಿಯರ್ ಬಿಡುಗಡೆಯಾಗಿದೆ. ಈ ವರ್ಷದ ಕನ್ನಡ ಭಾಷೆಯ ಪೆಂಟಗನ್ ಸಿನಿಮಾ ರಾಷ್ಟ್ರವ್ಯಾಪಿ ಸಿನಿ ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿಯಲಿದೆ ಎಂಬ ಭರವಸೆ ಡಾಲಿವುಡ್ ಪ್ಲೇ ನೀಡಿದೆ.
ಡಾಲಿವುಡ್ ಪ್ಲೇಯಲ್ಲಿ ಕನ್ನಡದ ಪೆಂಟಗನ್, ಪೆಂಟಗನ್ ಪಾಂಚ್ ಕಾ ಧಮ್ ಎಂಬ ಹೆಸರಿನಿಂದ ಪ್ರದರ್ಶನವಾಗಲಿದೆ. ಐದು ಕತೆಗಳ ಈ ಸಿನಿ ಗುಚ್ಚವನ್ನು ಚಂದ್ರ ಮೋಹನ್, ಆಕಾಶ್ ಶ್ರೀವತ್ಸ, ರಘು ಶಿವಮೊಗ್ಗ, ಕಿರಣ್ ಕುಮಾರ್, ಮತ್ತು ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ. ಪೆಂಟಗನ್ ಕನ್ನಡ ಚಿತ್ರರಂಗದ ಅತ್ಯುತ್ತಮ ಸಿನಿಮಾ ಎನ್ನಲಾಗುತ್ತಿದೆ.
ಒಂದೊಂದು ಕಥೆಯು ವಿಭಿನ್ನವಾಗಿರಲಿದೆ. ಕಿಶೋರ್, ಪಿ.ರವಿಶಂಕರ್, ವಿಜನಾಥ ಬಿರಾದಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಮತ್ತು ಪೃಥ್ವಿ ಅಂಬಾರ್ ಅವರಂತಹ ಘಟಾನುಘಟಿ ತಾರಾ ಬಳಗ ಸಿನಿಮಾದಲ್ಲಿದೆ. ಚಲನಚಿತ್ರವು ಐದು ವಿಭಿನ್ನ ಕಥೆಗಳನ್ನು ಒಟ್ಟಿಗೆ ಹೆಣೆಯುತ್ತದೆ. ಇನ್ನು, ಮನರಂಜನೆಯನ್ನು ಭಾಷಾ ಗಡಿಗಳನ್ನು ಮೀರಿ ಹಂಚಿಕೆ ಮಾಡುವುದು ಈ ಪ್ಲಾಟ್‌ಫಾರ್ಮ್ ಉದ್ದೇಶ ಎನ್ನಲಾಗಿದೆ.

ಪೆಂಟಗನ್ ಸಿನಿಮಾ ಮತ್ತು ತನಿಷಾ ಕುಪ್ಪಂಡ ವಿವಾದ
ಪೆಂಟಗನ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ನಟಿ ತನಿಷಾ ಕುಪ್ಪಂಡ ಯೂಟ್ಯೂಬರ್ ಒಬ್ಬರನ್ನು ಸಕತ್ ತರಾಟೆಗೆ ತೆಗೆದುಕೊಂಡಿದ್ದರು. ಸಿನಿಮಾದ ಒಮದು ಕಥೆಯಲ್ಲಿ ಸಕತ್ ಬೋಲ್ಡ್ ಆಗಿದ ನಟಿಸಿದ್ದ ತನಿಷಾ ಅವರ ಹಾಡು ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ತನಿಷಾ ಅವರನ್ನು ನೋಡಿ ಜನ ಬೆಕ್ಕಸ ಬೆರಗಾಗಿದ್ದರು.
ಇನ್ನು ಬೋಲ್ಡ್ ಅವತಾರಕ್ಕೆ ಬಂದ ನೆಗೆಟಿವ್ ಕಾಮೆಂಟ್‌ಗಳಿಗೆ ಡೋಂಟ್ ಕೇರ್ ಎಂದಿದ್ದ ಅವರು, ಯೂಟ್ಯೂಬರ್ ಒಬ್ಬರ ಕೆಟ್ಟ ಪ್ರಶ್ನೆಗೆ ಕಿಡಿಕಾರಿದ್ದರು. ಹಾಡು ಬಿಡುಗಡೆಯಾದ ಬಳಿಕ ನಡೆದ ಸಂದರ್ಶನದ ಸಮಯದಲ್ಲಿ ಯೂಟ್ಯೂಬರ್ ಒಬ್ಬರು ನೀವೂ ಬ್ಲೂ ಫಿಲ್ಮ್ನಲ್ಲಿ ನಟಿಸ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆ ಕೇಳಿದ ಕಿಡಿ ಕಾರಿದ್ದ ನಟಿ ತನಿಷಾ ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸಿನಿಮಾದ ಕಥೆ ಡಿಮ್ಯಾಂಡ್ ಮಾಡಿದ ಕಾರಣ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಕೂಡ ತಪ್ಪೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಿದ್ದ ಅವರು ಕಣ್ಣೀರು ಕೂಡ ಹಾಕಿದ್ದರು. ಇದಾದ ನಂತರ ಅವರ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು, ಡಾಲಿವುಡ್ ಪ್ಲೇ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನೀಶ್ ಅರ್ಜುನ್ ದೇವ್, "ನಾವು ಹಿಂದಿಯಲ್ಲಿ 'ಪೆಂಟಗನ್' ಅನ್ನು ಹೆಚ್ಚು ಜನರಿಗೆ ತೋರಿಸಲು ಇಷ್ಟಪಡುತ್ತೇವೆ. ಈ ಚಿತ್ರ ಕೇವಲ ಸಿನಿಮಾ ರತ್ನವಲ್ಲ. ಇದು ಕನ್ನಡ ಚಿತ್ರರಂಗದ ಆಳವಾದ ಕಥೆ ಹೇಳುವ ಪರಂಪರೆಗೆ ಒಂದು ಸಾಕ್ಷಿಯಾಗಿದೆ. 'ಪೆಂಟಗನ್' ಭಾರತದ ಮೂಲೆ ಮೂಲೆಯಲ್ಲಿರುವ ವೀಕ್ಷಕರನ್ನು ಮನಸ್ಸನ್ನು ಗೆಲ್ಲಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











