BBK 11: ಚೈತ್ರಾ ಮೇಲೆ ಕಿಚ್ಚ ಗರಂ; 'ಮ್ಯಾಕ್ಸ್' ಹಾಡಿನಿಂದ ಸ್ವತಃ ಸುದೀಪ್ ಟ್ರೋಲ್!
ಬಿಗ್‌ಬಾಸ್ ಶೋನಲ್ಲಿ ಈ ವಾರದ ಕತೆ ಕಿಚ್ಚನ ಜೊತೆ ಮುಕ್ತಾಯವಾಗಿದೆ. ವೀಕ್ಷಕರ ನಿರೀಕ್ಷೆಯಂತೆ ತಪ್ಪು ಮಾಡಿದವರಿಗೆ ಸುದೀಪ್ ಖಡಕ್ ಕ್ಲಾಸ್ ತಗೊಂಡಿದ್ದಾರೆ. ಜಗದೀಶ್ ಹಾಗೂ ರಂಜಿತ್ ವಾರದ ನಡುವೆ ಎಲಿಮಿನೇಟ್ ಆದ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಆಗಿದೆ. ಅದಕ್ಕೆ ಕಾರಣ ಏನು ಎನ್ನುವುದರ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ.
ಜಗದೀಶ್ ಬಿಗ್‌ಬಾಸ್ ಮನೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎನ್ನುವ ಕಾರಣಕ್ಕೆ ಹೊರ ಬರುವಂತಾಗಿದೆ. ಜಗದೀಶ್ ಮನೆಯಲ್ಲಿ ತಮ್ಮ ಅಗ್ರೇಸ್ಸಿವ್ ಆಟದಿಂದ ಗಮನ ಸೆಳೆದಿದ್ದರು. ತಮ್ಮ ನೇರಾನೇರ ಮಾತುಗಳಿಂದಲೇ ವೀಕ್ಷಕರು ಗಮನ ಸೆಳೆದಿದ್ದರು. ಮನೆಯ ಎಲ್ಲಾ ಸದಸ್ಯರು ಒಂದು ಕಡೆ ಆದರೆ ಜಗದೀಶ್ ಒಬ್ಬರೇ ಒಂದು ತಂಡ ಎನ್ನುವಂತಿದ್ದರು.

ಜಗದೀಶ್ ಅವರನ್ನು ಪ್ರವೋಕ್ ಮಾಡಿದ್ದು ಯಾರು? ಎನ್ನುವ ಚರ್ಚೆ ಕೂಡ ವೇದಿಕೆಯಲ್ಲಿ ನಡೆಯಿತು. ಜಗದೀಶ್ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂದು ಎಲ್ಲರೂ ಆರೋಪಿಸಿದ್ದೀರಿ. ಹಾಗಿದ್ದರೆ ನೀವು ಮಾತನಾಡಿದ್ದು ಸರೀನಾ? ಎಂದು ಸುದೀಪ್ ಪ್ರಶ್ನಿಸಿದರು. ಮುಖ್ಯವಾಗಿ ಚೈತ್ರಾ ಕುಂದಾಪರ ಬಳಸಿದ ಪದಗಳ ಬಗ್ಗೆ ಸುದೀಪ್ ಕೆಂಡಾಮಂಡಲವಾದರು.
ಚೈತ್ರಾ ಅವ್ರೇ "ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಎನ್ನುವ ಪದ ಬಳಸಿದ್ರಿ, ಹೀಗೆ ಹೇಳಿದರೆ ಅಪ್ಪನಿಗೆ ಬೈದಂತೆ ಅಲ್ಲ, ತಾಯಿಗೆ ಬೈದಂತೆ" ಎಂದು ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡರು. ಇದೇ ಪ್ರೋಮೋದಲ್ಲೂ ವೈರಲ್ ಆಗ್ತಿದೆ. ಆದರೆ ಕಿಚ್ಚನ ಇದೇ ಮಾತನ್ನು ಇಟ್ಟುಕೊಂಡು ಕೆಲವರು ಅವರನ್ನೇ ಟ್ರೋಲ್ ಮಾಡುತ್ತಿದ್ದಾರೆ.
ನಿಜಕ್ಕೂ ಚೈತ್ರಾ ಆಡಿದ ಆ ಮಾತನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಬಿಗ್‌ಬಾಸ್ ರೀತಿಯ ವೇದಿಕೆಯಲ್ಲಿ ಇಂತಹ ಪದಗಳನ್ನು ಬಳಸಿ ಬೈಯ್ಯುವುದು ಸರಿಯಲ್ಲ. ಅದನ್ನು ಯಥಾವತ್ ಅದೇ ರೀತಿ ಪ್ರಸಾರ ಮಾಡುವುದನ್ನು ಕೆಲವರು ಒಪ್ಪಲು ಸಿದ್ಧರಿಲ್ಲ. ಇದೇ ಮಾತುಗಳ ಬಗ್ಗೆ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೈತ್ರಾ ಬಳಸಿದ ಪದ ಎಂತಹ ಕೆಟ್ಟ ಪದ ಎನ್ನುವುದುನ್ನು ಕಿಚ್ಚ ಹೇಳಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ 'ಮ್ಯಾಕ್ಸಿಮಮ್ ಮಾಸ್' ಎನ್ನುವ ಹಾಡಿದೆ. ಇತ್ತೀಚೆಗೆ ಸುದೀಪ್ ಹುಟ್ಟುಹಬ್ಬಕ್ಕೆ ಈ ಹಾಡು ಬಿಡುಗಡೆ ಆಗಿತ್ತು. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಚೇತನ್ ಗಂಧರ್ವ ಹಾಡಿಗೆ ದನಿಯಾಗಿದ್ದಾರೆ.
'ಮ್ಯಾಕ್ಸಿಮಮ್ ಮಾಸ್' ಸಾಂಗ್ ಮೊದಲ ಸಾಂಗ್ 'ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟು ಬಾರೋ' ಎಂದು ಶುರುವಾಗುತ್ತದೆ. ಇದೀಗ ಜಗದೀಶ್ ಬಗ್ಗೆ ಮಾತನಾಡುತ್ತಾ ಚೈತ್ರಾ ಕುಂದಾಪುರ ಬಳಸಿದ ಮಾತುಗಳನ್ನು ತಪ್ಪು ಎನ್ನುವುದಾದರೆ ನಿಮ್ಮದೇ ಚಿತ್ರದಲ್ಲಿ ಇರುವ ಹಾಡಿನ ಸಾಲು ಅದೇ ರೀತಿ ಇದೆ ಅಲ್ವಾ? ಹೆಚ್ಚು ಕಮ್ಮಿ ಅದೇ ಅರ್ಥ ಕೊಡುತ್ತಿದೆಯಲ್ವಾ? ಅದನ್ನು ಹೇಗೆ ಒಪ್ಪಿಕೊಂಡ್ರಿ? ಹೇಳುವುದೊಂದು, ಮಾಡುವುದೊಂದು ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ಅಭಿಮಾನಿಗಳು ಸುದೀಪ್ ಪರ ನಿಂತಿದ್ದಾರೆ. ಅದು ಸಿನಿಮಾ, ಇದು ರಿಯಾಲಿಟಿ ಶೋ. ಎರಡನ್ನು ಲಿಂಕ್ ಮಾಡಬೇಡಿ ಎಂದು ತಿರುಗೇಟು ಕೊಡುತ್ತಿದ್ದಾರೆ. ಅಷ್ಟಕ್ಕೂ ಈ ಹಾಡಿಗೆ ಸಾಹಿತ್ಯ ಬರೆದಿದ್ದು ಅನೂಪ್ ಭಂಡಾರಿ, ಅವರನ್ನು ಕೇಳಬೇಕು, ಸುದೀಪ್ ಅವರನ್ನು ಅಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಸಿನಿಮಾ ಕೂಡ ಒಂದು ಪ್ರಬಲ ಮಾಧ್ಯಮ. ಸಿನಿಮಾಗಳಲ್ಲಿ ಕೂಡ ತಪ್ಪನ್ನು ತಪ್ಪು ಎಂದೇ ಹೇಳುತ್ತಾರೆ. ಹಾಗಾಗಿ ಸುದೀಪ್ 'ಮ್ಯಾಕ್ಸ್' ಚಿತ್ರದ ಈ ಹಾಡಿನ ಸಾಲನ್ನು ಹೇಗೆ ಸರಿ ಎನ್ನುತ್ತಾರೆ? ಹಾಡು ಯಾರೇ ಬರೆದರೂ ನಟಿಸಿರುವುದು ಸುದೀಪ್ ಅಲ್ವಾ? ಅವರಿಗೆ ಗೊತ್ತಾಗಲಿಲ್ಲವೇ? ಕೂಡಲೇ ಈ ಸಾಲುಗಳನ್ನು ಬದಲಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.


Click it and Unblock the Notifications











