ರಾಯಚೂರಿನ ವ್ಯಕ್ತಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ ಗೋಲ್ಡ್ ಸುರೇಶ್ ? ಬಿಗ್ ಬಾಸ್ ಸ್ಫರ್ಧಿಯ ವಿರುದ್ಧ ವಂಚನೆಯ ಆರೋಪ..!
ಈಗೀಗ ಸೆಲೆಬ್ರೆಟಿಗಳ ಮೇಲೆ ವಂಚನೆ, ದ್ರೋಹ, ಚೆಕ್ ಬೌನ್ಸ್ ಆರೋಪಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಸಾಲಿನಲ್ಲಿ ಗೋಲ್ಡ್ ಸುರೇಶ್ ಕೂಡ ಇದ್ದಾರೆ ಎಂದು ವ್ಯಕ್ತಿಯೊಬ್ಬರು ಸದ್ಯ ಆರೋಪವನ್ನು ಮಾಡಿದ್ದಾರೆ. ಹೌದು. ಮೈ ತುಂಬಾ ಚಿನ್ನ ಹಾಕಿಕೊಂಡು ಗೋಲ್ಡ್ ಸುರೇಶ್ ಎಂದೇ ಜಗದ್ವಿಖ್ಯಾತರಾದವರು ಸುರೇಶ್.
ಬೆಳಗಾವಿಯ ಅಥಣಿ ತಾಲೂಕಿನ ಪಾರ್ಥನಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಗೋಲ್ಡ್ ಸುರೇಶ್ ಕಳೆದ ವರ್ಷ ಬಿಗ್ ಬಾಸ್ ಕನ್ನಡದ ಹನ್ನೊಂದನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದರು. ತಮ್ಮ ಆಟದಿಂದ ಗಮನ ಸೆಳೆದಿದ್ದರು.

ಆದರೆ, ಆ ನಂತರ ವ್ಯೆಯಕ್ತಿಕ ಕಾರಣಗಳಿಂದ ಕಾರ್ಯಕ್ರಮದಿಂದ ಹೊರ ಬಂದರು. ನನ್ನನ್ನೇ ನಂಬಿ ಹಲವು ಕುಟುಂಬಗಳಿವೆ, ನಾನು ಬಿಗ್ ಬಾಸ್ ಮನೆಗೆ ಹೋದ ನಂತರ ನನ್ನ ಪತ್ನಿ ಒತ್ತಡಕ್ಕೊಳಗಾದರು, ಬಿಜಿನೆಸ್ ಮ್ಯಾನೇಜ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ, ಹೀಗಾಗಿ ಅನಿವಾರ್ಯವಾಗಿ ನಾನು ಮನೆಯಿಂದ ಹೊರ ಬರಬೇಕಾಯ್ತು ಎಂದು ಹೇಳಿದ್ದರು.
ಇನ್ನು, ಬಿಗ್ ಬಾಸ್ ಮನೆಯಲ್ಲಿದ್ದಾಗ ಸುದೀಪ್ ಅವರು ಕೂಡ ಸುರೇಶ್ಅ ವರ ಈ ಗೋಲ್ಡ್ ಶೋಕಿಯ ಕುರಿತು ಅನೇಕ ಸಲ ಮಾತನಾಡಿದ್ದರು. ಚಿನ್ನ ಇಲ್ಲದೆಯೇ ನಿಮ್ಮನ್ನು ನೋಡಲು ಚೆನ್ನ ಎಂದು ಹೇಳಿದ್ದರು. ಗೋಲ್ಡ್ ಸುರೇಶ್ ಅವರ ಪತ್ನಿಯ ಮನದ ಆಸೆ ಕೂಡ ಇದೇ ಆಗಿತ್ತು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರಳಿದ ನಂತರ ಈ ವಿಚಾರ ಅರಿತ ಗೋಲ್ಡ್ ಸುರೇಶ್ ಸದ್ಯ ಸಿಂಪಲ್ ಆಗಿರಲು ನಿರ್ಧಾರ ಮಾಡಿದ್ದರು.
ಇಂಥಾ ಗೋಲ್ಡ್ ಸುರೇಶ್ ತಮಗೆ ಹದಿನಾಲ್ಕು ಲಕ್ಷದ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬ ವ್ಯಕ್ತಿ ಆರೋಪವನ್ನು ಮಾಡಿದ್ದಾರೆ. ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿರುವ ಮೈನುದ್ದಿನ್, 2017ರಲ್ಲಿ ನನಗೆ ಗೋಲ್ಡ್ ಸುರೇಶ್ ಅವರ ಪರಿಚಯವಾಗಿತ್ತು. ಕೇಬಲ್ ಚಾನೆಲ್ ಸ್ಟುಡಿಯೋ ಮಾಡುಕೊಡುತ್ತೇನೆ ಎಂದು ಹೇಳಿ ನನ್ನ ಜೊತೆ 14 ಲಕ್ಷ ರೂಪಾಯಿ ಅಗ್ರಿಮೆಂಟ್ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.
ಆ ನಂತರ ಮುಂಗಡವಾಗಿ ನಾಲ್ಕು ಲಕ್ಷ ರೂಪಾಯಿಗಳನ್ನು ಪಡೆದ ಸುರೇಶ್, ಕಾಲಾನುಕ್ರಮೇಣ ಹಂತ ಹಂತವಾಗಿ ಏಳು ಲಕ್ಷ ಹಣವನ್ನು ಕೂಡ ಪಡೆದಿದ್ದರು ಎಂದಿರುವ ಮೈನುದ್ದೀನ್, ಆ ನಂತರ ಈ ವ್ಯಕ್ತಿ ಮೋಸಗಾರ ಎನ್ನುವುದು ನಮಗೆ ಗೊತ್ತಾಯ್ತು ಹೀಗಾಗಿ ಹಿಂದೆ ಸರಿದೆ ಎಂದು ಹೇಳಿದ್ದಾರೆ. ಅರೆಬರೆ ಕೆಲಸ ಮಾಡಿದ್ದ ಸುರೇಶ್ ಆ ನಂತರ ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆ ವ್ಯಕ್ತಿಯನ್ನು ಟಿವಿಯಲ್ಲಿ ನೋಡಿದೆ, ಫುಲ್ ಚೇಂಜ್ ಆಗಿದ್ದ, ಇಷ್ಟು ದೊಡ್ಡ ಶ್ರೀಮಂತ ಆಗಿದ್ದಾನೆ, ನನ್ನ ದುಡ್ಡು ಅವರಿಗೇನು ದೊಡ್ಡದಲ್ಲ ಎಂದುಕೊಮಡು ವರ್ಷಗಳ ಹಿಂದೆ ಸಂಪರ್ಕ ಮಾಡಿದ್ದೆ ಆಗ ಬನ್ನಿ ಸಿಗುತ್ತೇನೆ ಎಂದು ಹೇಳಿ ತಮ್ಮ ಲೊಕೇಶನ್ ಕಳುಹಿಸಿದ್ದರು ಎಂದಿರುವ ಮೈನುದ್ದೀನ್ ಸಂಜೆವರೆಗೆ ಸತಾಯಿಸಿ ಒಂದು ಲಕ್ಷ ಹಣ ಕೊಟ್ಟರು ಎಂದು ಹೇಳಿದ್ದಾರೆ. ಆ ನಂತರ 50,000 ಹಣವನ್ನು ನನ್ನ ಸ್ನೇಹಿತನ ಖಾತೆಗೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಬಾಕಿ ಹಣ ಕೇಳಿದರೆ ನೀವು ನನಗೆ ಅಷ್ಟು ದುಡ್ಡೇ ಕೊಟ್ಟಿಲ್ಲ ಎಂದು ಗೋಳ್ಡ್ ಸುರೇಶ್ ಹೇಳುತ್ತಿದ್ಧಾರೆ ಎಂದಿರುವ ಮೈನುದ್ದೀನ್, ನಾನು ಆರ್‌ಟಿಜಿಎಸ್ ಮಾಡಿರುವ ಮತ್ತು ಅವರ ಜೊತೆ ಅಗ್ರಿಮೆಂಟ್ ಮಾಡಿಕೊಂಡಿರುವ ಎಲ್ಲ ದಾಖಲೆಗಳು ಕೂಡ ನನ್ನ ಬಳಿ ಇದೆ ಎಂದು ಹೇಳಿದ್ದಾರೆ. ನನಗೆ ನಷ್ಟ ಆಗಿದೆ ಬರಬೇಕಾದ ದುಡ್ಡು ಬರುತ್ತಿಲ್ಲ ಅಂತ ಹೇಳುತ್ತಿದ್ದರು ಹೀಗಾಗಿ ನಾನು ಇಷ್ಟು ದಿನ ಸುಮ್ಮನೆ ಆಗಿದ್ದೆ ಆದರೆ ಅವತ್ತಿನಿಂದ ಅವರದ್ದು ಒಂದು ಫೋನ್ ಕೂಡ ಇಲ್ಲ ಎಂದು ಮೈನುದ್ದಿನ್ ಹೇಳಿದ್ದಾರೆ.
ಮೈನುದ್ದಿನ್ ಅವರ ಈ ಆರೋಪಕ್ಕೆ ಗೋಲ್ಡ್ ಸುರೇಶ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











