BBK11: ಬಿಗ್‌ಬಾಸ್ ಕನ್ನಡ-11 ಪ್ರೋಮೊ ಸಿದ್ಧ; ಯಾವಾಗ ಶೋ ಶುರು?
ಮತ್ತೆ ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋಗೆ ದಿನಗಣನೆ ಶುರುವಾಗಿದೆ. ಸದ್ದಿಲ್ಲದೇ ಪ್ರೋಮೊ ಚಿತ್ರೀಕರಣ ಮಾಡಲಾಗಿದೆ. ಈ ಬಾರಿ ಯಾರು ಶೋ ನಿರೂಪಣೆ ಮಾಡುತ್ತಾರೆ ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಮತ್ತೊಮ್ಮೆ ಸುದೀಪ್ ವೀಕೆಂಡ್‌ನಲ್ಲಿ ಮನೆ ಮನೆಯ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ.
ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್‌ಬಾಸ್ ಕನ್ನಡ-11 ಮೊದಲ ಪ್ರೋಮೊ ಬಿಡುಗಡೆ ಆಗಲಿದೆ. ಎಂದಿನಂತೆ ಬಹಳ ವಿಭಿನ್ನವಾಗಿ ಅಷ್ಟೇ ಸ್ಟೈಲಿಶ್ ಆಗಿ ಈ ಬಿಗ್‌ಬಾಸ್ ಪ್ರೋಮೋ ಶೂಟ್ ಮಾಡಲಾಗಿದೆ. ಸುದೀಪ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೊಗೆ ಸಂಬಂಧಿಸಿದಂತೆ ಒಂದಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ಬಾರಿ ಸುದೀಪ್ ಬದಲು ರಿಷಬ್ ಶೆಟ್ಟಿ ಬಿಗ್‌ಬಾಸ್ ಶೋ ನಿರೂಪಣೆ ಮಾಡುತ್ತಾರೆ ಎನ್ನುವ ತಳಬುಡವಿಲ್ಲದ ವದಂತಿ ಹರಿದಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗಿತ್ತು. ಆದರೆ ಅದು ಸತ್ಯಕ್ಕೆ ದೂರವಾದ ಮಾತು ಎನ್ನುವುದು ಗೊತ್ತಾಗಿದೆ. ಹಿಂದಿ ಬಳಿಕ ಕನ್ನಡದಲ್ಲಿ ಬಿಗ್‌ಬಾಸ್ ಶೋ ಹೆಚ್ಚು ಸಕ್ಸಸ್ ಕಂಡಿದೆ. ನಿರೂಪಣೆ ವಿಚಾರಕ್ಕೆ ಬಂದರೆ ಸುದೀಪ್ ಬೆಸ್ಟ್ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ.
ಸೀಸನ್‌ನಿಂದ ಸೀಸನ್‌ಗೆ ಸುದೀಪ್ ಸಂಭಾವನೆ ಕೂಡ ಹೆಚ್ಚಾಗಿದೆ. ಇನ್ನು ಕಿಚ್ಚ ಬಹಳ ಇಷ್ಟಪಟ್ಟು ಶೋ ನಡೆಸಿಕೊಡುತ್ತಿದ್ದಾರೆ. ಹಾಗಾಗಿ ಅವರು ಶೋ ಬಿಡುವ ಮಾತೇಯಿಲ್ಲ. 10ನೇ ಸೀಸನ್ ಅನ್ನು ಸಂಥಿಂಗ್ ಸ್ಪೆಷಲ್ ಎಂದು ಹೇಳಲಾಗಿತ್ತು. ಇದೀಗ 11ನೇ ಸೀಸನ್ ಇನ್ನು ಎಷ್ಟು ವಿಶೇಷವಾಗಿರುತ್ತದೆ ಎನ್ನುವ ಕುತೂಹಲ ಮೂಡಿದೆ. ಯಾರೆಲ್ಲಾ ಈ ಬಾರಿ ದೊಡ್ಮನೆಗೆ ಸ್ಪರ್ಧಿಗಳಾಗಿ ಹೋಗುತ್ತಾರೆ ಎನ್ನುವ ಚರ್ಚೆಯೂ ಶುರುವಾಗಿದೆ.
ಕರ್ನಾಟಕ ಮೂಲದ ಕಿರುತೆರೆ ನಟಿ ಜ್ಯೋತಿ ರೈ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಆಕೆಯನ್ನು ಬಿಗ್‌ಬಾಸ್ ಶೋ ಕರೆತರಲು ತಂಡ ಪ್ರಯತ್ನಿಸಿತ್ತು. ಆದರೆ ಆಕೆ ಅದಕ್ಕೆ ಒಲ್ಲೆ ಎಂದಿದ್ದಾರೆ. ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರುವುದರಿಂದ ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಸೆಪ್ಟೆಂಬರ್ 27 ಅಥವಾ ಅಕ್ಟೋಬರ್ 5ರಂದು ಬಿಗ್‌ಬಾಸ್ ಕನ್ನಡ-11 ಆರಂಭವಾಗಲಿದೆ. ಯೂಟ್ಯೂಬರ್ ವರ್ಷಾ ಕಾವೇರಿ, ಕಿರುತೆರೆ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸ, ನಟ ಸುನೀಲ್ ರಾವ್, ಮೋಕ್ಷಿತಾ ಪೈ, ದಿವ್ಯಾ ವಸಂತ ಹೀಗೆ ಹಲವರ ಹೆಸರುಗಳು ಈ ಬಾರಿ ದೊಡ್ಮನೆಗೆ ಹೋಗಲು ಕೇಳಿಬರುತ್ತಿದೆ.
ಕಳೆದ ಬಾರಿ ಡ್ರೋನ್ ಪ್ರತಾಪ್‌ಗೆ ಅವಕಾಶ ಕೊಟ್ಟಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಹಾಗಾಗಿ ಈ ಬಾರಿಯೂ ವಿವಾದಗಳಿಂದ ಸುದ್ದಿ ಆದವರು ಬಿಗ್‌ಬಾಸ್ ಮನೆಗೆ ಹೋಗುವ ಟಿಕೆಟ್ ಪಡೆಯುತ್ತಾರಾ? ಕಾದು ನೋಡಬೇಕಿದೆ.
ಬಿಗ್‌ಬಾಸ್ ವಿಚಾರ ಪಕ್ಕಕ್ಕಿಟ್ಟರೆ ಸುದೀಪ್ ಅಭಿಮಾನಿಗಳು 'ಮ್ಯಾಕ್ಸ್' ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಬಹಳ ಬೇಗ ಸಿನಿಮಾ ರಿಲೀಸ್ ಎಂದು ಹೇಳಿ ಕೆಲ ದಿನಗಳ ಹಿಂದೆ ಟೀಸರ್ ಬಿಟ್ಟಿದ್ದರು. ಆ ಬಳಿಕ ಯಾವುದೇ ಅಪ್‌ಡೇಟ್ ಸಿಗಲಿಲ್ಲ. 'ವಿಕ್ರಾಂತ್ ರೋಣ' ಸಿನಿಮಾ ಬಂದು ಹೋಗಿ 2 ವರ್ಷ ಕಳೆದಿದೆ. ಆದರೆ ಬಳಿಕ ಸುದೀಪ್ ನಟಿಸಿದ ಯಾವುದೇ ಸಿನಿಮಾ ಬಂದಿಲ್ಲ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಎಂಟರ್‌ಟ್ರೈನರ್ 'ಮ್ಯಾಕ್ಸ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಕಲೈಪುಲಿ ಎಸ್ ತನು ಜೊತೆ ಸೇರಿ ಸುದೀಪ್ ಸಿನಿಮಾ ನಿರ್ಮಿಸಿದ್ದಾರೆ.


Click it and Unblock the Notifications











