'ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ', ಕನ್ನಡ ಚಿತ್ರರಂಗಕ್ಕೆ 'ಹೀರೋ' ಆಗಿ ಎಂಟ್ರಿ ಕೊಟ್ಟ 'ಡ್ರೋನ್ ಪ್ರತಾಪ್'..!
ಬದುಕೇ ಹಾಗೆ ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ಡ್ರೋನ್ ಪ್ರತಾಪ್ ಸದ್ಯದ ಉದಾಹರಣೆ.
ಹೌದು, 22ರ ಹರೆಯದಲ್ಲಿ 600ಕ್ಕೂ ಅಧಿಕ ಡ್ರೋನ್‌ಗಳನ್ನು ತಯಾರಿಸಿರುವುದಾಗಿ ಹೇಳಿ ಪ್ರಚಾರವನ್ನು ಪಡೆದು ಆ ನಂತರ ಕರುನಾಡಿನೆಲ್ಲೆಡೆ ಅಪಹಾಸ್ಯಕ್ಕೆ ಗುರಿಯಾದ ಡ್ರೋನ್ ಪ್ರತಾಪ್ ಆ ನಂತರ ಬಿಗ್ ಬಾಸ್ ಮನೆಗೆ ತೆರಳಿ ಡ್ಯಾಮೇಜ್ ಆಗಿದ್ದ ತಮ್ಮ ಇಮೇಜ್‌ನ್ನು ಸರಿಪಡಿಸಿಕೊಂಡರು.

ಇನ್ನೂ.. ಬಿಗ್ ಬಾಸ್ ಮನೆಯಲ್ಲಿದ್ದಾಗ ಡ್ರೋನ್ ಪ್ರತಾಪ್ ಅವರನ್ನು ತುಕಾಲಿ ಸಂತೋಷ್, ವರ್ತೂರ್ ಪ್ರಕಾಶ್ ಸೇರಿ ಅನೇಕರು ಗೇಲಿ ಮಾಡಿದ್ದರು. ಡ್ರೋನ್ ಹೆಸರಿನಲ್ಲಿ ಎಲ್ಲರ ಕಣ್ಣಿಗೆ ಮಣ್ಣೆರಚಿದ್ದೇ ನಿನ್ನ ಬದುಕಿನ ಸಾಧನೆ ಎಂಬಂರ್ಥದಲ್ಲಿ ಕಾಲೆಳೆದಿದ್ದರು. ಡ್ರೋನ್ ಪ್ರತಾಪ ಅವರ ಮನಸನ್ನು ನೋಯಿಸಿದ್ದರು. ಪ್ರತೀಕಾರದ ಜ್ವಾಲೆಯಲ್ಲಿ ಕುದಿಯುತ್ತಿದ್ದರು. ಮೊನ್ನೆ ಮೊನ್ನೆ ಆಡಿಕೊಂಡವರ ಬಾಯಿಗೆ ಬೀಗ ಜಡಿದರು. ಡ್ರೋನ್ ಹಾರಿಸಿ ಕಾಲರ್ ಮೇಲೆತ್ತಿದ್ದರು. ಡ್ರೋನ್ ಮೂಲಕ ಎತ್ತರದ ಮರಗಳಿಗೆ ಔಷಧಿಯನ್ನು ಕೂಡ ಸಿಂಪಡಿಸಿದ್ದರು.
ಇಂಥಾ ಡ್ರೋನ್ ಪ್ರತಾಪ್ ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮನ್ನು ಹಿಂಬಾಲಿಸುವವರಿಗೆ, ತಮ್ಮ ಅಭಿಮಾನಿಗಳಿಗೆ, ಕುಂತರೂ ನಿಂತರೂ ಕಾಲೆಳೆಯುತ್ತಿದ್ದವರಿಗೆ ಈ ಬ್ರೇಕಿಂಗ್ ನ್ಯೂಸ್‌ನ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಡ್ರೋನ್ ಪ್ರತಾಪ್, ನಾಯಕ ನಟನಾಗಿ ಹೊಸ ಚಿತ್ರಕ್ಕೆ ಸಹಿ ಹಾಕಿದ್ದೇನೆ ಅಲ್ಲದೇ ಮಂಡ್ಯದ ಕೆ.ಆರ್ ಪೇಟೆಯ ಹನುಮಂತನ ದೇವಸ್ಥಾನವನ್ನು ಕೂಡ ಇಂದು ಉದ್ಘಾಟನೆ ಮಾಡಿದ್ದೇನೆ ಎಂದಿದ್ದಾರೆ.
ಇನ್ನೂ ಡ್ರೋನ್ ಪ್ರತಾಪ್ ತಾವು ಚಿತ್ರಕ್ಕೆ ಹೀರೋ ಆದ ವಿಚಾರವನ್ನು ತಿಳಿಸಿದ ಬೆನ್ನಲ್ಲಿಯೇ ಅನೇಕರು ಇವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಬಿಗ್ ಬಾಸ್ ನಿಂದ ಕೊನೆಗೂ ಒಬ್ಬ ಹೀರೋ ಸಿಕ್ಕಿದ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ಜೀವನದಲ್ಲಿ ಸೋತು ಗೆದ್ದವನು ಡ್ರೋನ್ ಪ್ರತಾಪ್ ಎಂದಿದ್ದಾರೆ. ಕೆಲವರು ಹೀರೋ ಅಂದುಕೊಂಡು ಬಿಗ್ ಬಾಸ್‌ಗೆ ಹೋಗ್ತಾರೆ ಆದರೆ ಪ್ರತಾಪ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಹೀರೋ ಆಗಿದಾರೆ ಎಂದಿದ್ದಾರೆ. ನಮ್ಮ ಬೆಂಬಲ ಯಾವತ್ತು ನಿಮಗೆ ಇದ್ದೇ ಇರುತ್ತೆ ಎಂದು ಡ್ರೋನ್ ಪ್ರತಾಪ್ ಅವರನ್ನು ಹುರಿದುಂಬಿಸುತ್ತಿದ್ದಾರೆ.
ಇನ್ನುಳಿದಂತೆ ಡ್ರೋನ್ ಪ್ರತಾಪ್ ಅವರ ಈ ಮೊದಲ ಚಿತ್ರದ ನಿರ್ದೇಶಕ ಯಾರು ಎನ್ನುವ ವಿಚಾರ ಇನ್ನೂ ಬಹಿರಂಗಗೊಂಡಿಲ್ಲ. ಚಿತ್ರದ ಹೆಸರೇನು ? ಚಿತ್ರಕ್ಕೆ ಬಂಡವಾಳ ಹೂಡಲಿರುವ ನಿರ್ಮಾಪಕರು ಯಾರು ? ಡ್ರೋನ್ ಪ್ರತಾಪ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ನಾಯಕಿ ಯಾರು ? ಚಿತ್ರದ ಮುಹೂರ್ತ ಸಮಾರಂಭ ಯಾವಾಗ ಎಲ್ಲಿ ನಡೆಯಲಿದೆ ? ಎಂಬ ಪ್ರಶ್ನೆಗಳಿಗೆ ಕೂಡ ಡ್ರೋನ್ ಪ್ರತಾಪ್ ಸದ್ಯಕ್ಕೆ ಉತ್ತರವನ್ನು ನೀಡಿಲ್ಲ. ಅಂದ್ಹಾಗೆ ಡ್ರೋನ್ ಪ್ರತಾಪ್ ಮೂರು ದಿನದ ಹಿಂದೆ ಫೋಟೊಶೂಟ್ ಮಾಡಿಸಿದ್ದರು. ಆ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆಗಲೇ ಡ್ರೋನ್ ಪ್ರತಾಪ್ ಅವರಿಗೆ ನೀವು ಹೀರೋ ಆಗ್ತಿದ್ದೀರಾ ಹೇಗೆ ಎಂದು ಪ್ರಶ್ನೆಯನ್ನು ಕೇಳಿದ್ದರು. ಆ ಅನುಮಾನ ಈಗ ನಿಜವಾಗಿದೆ.


Click it and Unblock the Notifications











