ಹೀರೊ ಆಗಿ ಗಿಲ್ಲಿ ಮೊದಲ ಸಿನಿಮಾ ಮುಹೂರ್ತ; ಟೈಟಲ್ ಸಮೇತ ಫಸ್ಟ್ ಲುಕ್ ಪೋಸ್ಟರ್ ಔಟ್
ಬಿಗ್‌ಬಾಸ್ ವಿನ್ನರ್ ಗಿಲ್ಲಿ ಈಗ ಹೀರೊ ಆಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದರೂ ಲೀಡ್ ರೋಲ್‌ನಲ್ಲಿ ಇದು ಮೊದಲ ಸಿನಿಮಾ. ಇತ್ತೀಚೆಗೆ ಸಿನಿಮಾ ಘೋಷಣೆ ಆಗಿತ್ತು. ಇದೀಗ ಮುಹೂರ್ತ ನೆರವೇರಿದ್ದು ಸಿನಿಮಾ ಟೈಟಲ್ ಜೊತೆಗೆ ಪಾತ್ರವರ್ಗದ ಮಾಹಿತಿ ಸಿಕ್ಕಿದೆ.
'ಪಳಾರ್' ಟೈಟಲ್‌ನಲ್ಲಿ ಗಿಲ್ಲಿ ಸಿನಿಮಾ ಶುರುವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರತಂಡದ ಬೆಂಬಲಕ್ಕೆ ನಿಂತಿರುವುದು ವಿಶೇಷ. ರಾಶಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಹಾಗೂ ನವೀನ್ ಎಂಬುವವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಸಂಸ್ಥೆ ಚಿತ್ರವನ್ನು ಅರ್ಪಿಸುತ್ತಿದೆ. ಚಂದ್ರಮೋಹನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಾಸುಕಿ ವೈಭವ್ ಸಂಗೀತ, ಕೆ. ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುಧಾಕರ್ ಗೌಡ ಸೇರಿದಂತೆ ಹಾಸ್ಯ ಕಲಾವಿದರ ದೊಡ್ಡ ದಂಡೇ 'ಪಳಾರ್' ಚಿತ್ರದಲ್ಲಿದೆ. ಬಿಗ್‌ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿದ್ದ ಗಿಲ್ಲಿ ತಮ್ಮ ಮಾತು, ಕಾಮಿಡಿ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು. ಅಂತಿಮವಾಗಿ ದಾಖಲೆ ಮಟ್ಟದ ಮತಗಳನ್ನು ಪಡೆದು ಶೋ ವಿನ್ನರ್ ಆಗಿದ್ದರು. ಗಿಲ್ಲಿ ಕ್ರೇಜ್ ನೋಡಿದವರು ಅಚ್ಚರಿಗೊಂಡಿದ್ದರು. ಬಿಗ್‌ಬಾಸ್ ಮನೆಯಲ್ಲಿ ಕೂಡ ಪಳಾರ್ ಗಿಲ್ಲಿ ಎಂದೇ ಆತ ಜನಪ್ರಿಯವಾಗಿದ್ದು ವಿಶೇಷ. ಇದೇ ಅದನ್ನೇ ಟೈಟಲ್ ಆಗಿ ಇಟ್ಟು ಸಿನಿಮಾ ಮಾಡಲಾಗ್ತಿದೆ.
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಪದೇ ಪದೆ ಪಳಾರ್ ಎನ್ನುವ ಪದ ಬಳಸುತ್ತಿದ್ದರು. ಮಂಡ್ಯ ಭಾಗದಲ್ಲಿ ಈ ಪದವನ್ನು ಸಾಕಷ್ಟು ಸಂದರ್ಭಗಳಲ್ಲಿ ಬಳಸುತ್ತಾರೆ. ಎಂತಹ ಚಾಲಾಕಿ ಗೊತ್ತಾ? ಎಂತಹ ಪ್ರಳಯಾಂತಕ ಗೊತ್ತಾ? ಎಂದು ಹೇಳಲು ಎಂತಹ 'ಪಳಾರ್' ಗೊತ್ತಾ? ಎಂದು ಆಡು ಭಾಷೆಯಲ್ಲಿ ಹೇಳುತ್ತಾರೆ. ಈಗ 'ಪಳಾರ್' ಆಗಿಯೇ ಗಿಲ್ಲಿ ತೆರೆಮೇಲೆ ಜಾದೂ ಮಾಡಲು ಬರ್ತಿದ್ದಾರೆ. ಅವರ ಹುಟ್ಟುಹಬ್ಬದ ದಿನವೇ ಸಿನಿಮಾ ಮುಹೂರ್ತ ನೆರವೇರಿರುವುದು ವಿಶೇಷ.
ಇನ್‌ಫ್ಲುಯೆನ್ಸರ್ ಆಗಿ ಮಂಡ್ಯ ಭಾಷೆಯಲ್ಲಿ ವೀಡಿಯೋ, ರೀಲ್ಸ್ ಮಾಡುತ್ತ ಗಮನ ಸೆಳೆದಿದ್ದ ಗಿಲ್ಲಿ ನಟ 'ಕಾಮಿಡಿ ಕಿಲಾಡಿಗಳು' ಶೋ ಮೂಲಕ ಕರುನಾಡಿಗೆ ಪರಿಚಿತರಾಗಿದ್ದರು. ಬಳಿಕ ಕೆಲ ಶೋಗಳಲ್ಲಿ ಕಾಣಿಸಿಕೊಂಡರೂ ಬಿಗ್‌ಬಾಸ್ ಶೋ ದೊಡ್ಡ ವೇದಿಕೆ ಆಗಿತ್ತು. ತಮ್ಮ ಕಾಮಿಡಿ ಮೂಲಕ ಎಲ್ಲರ ಮನಗೆದ್ದು ಗಿಲ್ಲಿ ಜಾದೂ ಮಾಡಿದ್ದರು. ವೀಕ್ಷಕರ ನಿರೀಕ್ಷೆಯಂತೆ ಬಿಗ್‌ಬಾಸ್ ಟೈಟಲ್ ಗೆದ್ದಿದ್ದರು. ಭಾರೀ ಕ್ರೇಜ್ ಸಂಪಾದಿಸಿದ್ದ ಗಿಲ್ಲಿ ಮುಂದೇನು ಮಾಡ್ತಾರೆ ಎನ್ನುವ ಕುತೂಹಲ ಇತ್ತು.
'ಬಾಂಬೆ ಮಿಠಾಯಿ', 'ಬ್ರಹ್ಮಚಾರಿ', 'ಡಬಲ್ ಇಂಜಿನ್' ಹಾಗೂ 'ಫಾರೆಸ್ಟ್' ರೀತಿಯ ಕಾಮಿಡಿ ಸಿನಿಮಾಗಳನ್ನು ಚಂದ್ರಮೋಹನ್ ನಿರ್ದೇಶನ ಮಾಡಿದ್ದಾರೆ. 'ಪಳಾರ್' ಕೂಡ ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಚಿತ್ರಕ್ಕೆ ಸಾಕಷ್ಟು ಟೈಟಲ್ ಪರಿಶೀಲನೆ ನಡೆಸಿದ್ದೆವು. ನನಗೆ ಅಭಿಮಾನಿಯೊಬ್ಬರು ಒಂದು ಫೋಟೊ ಕೊಟ್ಟಿದ್ದರು. ಅದರಲ್ಲಿ 'ಪಳಾರ್' ಎಂದು ಬರೆದಿದ್ದರು. ಅದನ್ನು ನೋಡಿ ಇದೇ ಟೈಟಲ್ ಚೆನ್ನಾಗಿದೆ ಎಂದು ಫಿಕ್ಸ್ ಮಾಡಿದೆವು ಎಂದು ಗಿಲ್ಲಿ ಹೇಳಿದ್ದಾರೆ.
'ಪಳಾರ್' ಚಿತ್ರಕ್ಕೆ ನಾಯಕಿ ಯಾರು ಎನ್ನುವ ಕುತೂಹಲ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರತಂಡ ನಾಯಕಿ ಆಯ್ಕೆ ಆಗಿಲ್ಲ, ಹುಡುಕಾಟ ನಡೆಸುತ್ತಿದ್ದೇವೆ ಎಂದು ನಿರ್ದೇಶಕ ಚಂದ್ರಮೋಹನ್ ತಿಳಿಸಿದ್ದಾರೆ. ನಿರ್ಮಾಪಕ, ನಿರ್ದೇಶಕರು ಯಾರನ್ನು ಆಯ್ಕೆ ಮಾಡ್ತಾರೋ ನೋಡೋಣ ಎಂದು ಗಿಲ್ಲಿ ಉತ್ತರಿಸಿದ್ದಾರೆ. ಜೂನ್ 24ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಪಾತ್ರವರ್ಗದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದಿದ್ದೇವೆ. ಮಂಡ್ಯ, ಮೈಸೂರು ಭಾಗದಲ್ಲಿ ನಡೆಯುವ ಕಥೆ ಇದು. ಆದಷ್ಟು ಬೇಗ ಚಿತ್ರೀಕರಣ ಮಾಡಿ ಸಿನಿಮಾ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ.
ಕೆವಿಎನ್ ಸಂಸ್ಥೆ ಬೆಂಬಲಕ್ಕೆ ನಿಂತಿರುವುದು ನಮಗೆ ದೊಡ್ಡ ಬಲ. ಗಿಲ್ಲಿ ನಾಯಕನಾಗಿ ನಟಿಸಲು 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಗಿಲ್ಲಿ ನಿರಾಕರಿಸಿದ್ದಾರೆ. ಕಾವ್ಯಾ ಶೈವ ಚಿತ್ರದಲ್ಲಿ ನಾಯಕಿ ಆಗುತ್ತಾರಾ ಎನ್ನುವ ಪ್ರಶ್ನೆಗೂ ಚಿತ್ರತಂಡ ಉತ್ತರಿಸಲು ನಿರಾಕರಿಸಿದೆ.


Click it and Unblock the Notifications