25 ಲಕ್ಷ ಸ್ವಾಹಾ ; ತಂಗಿಯ ವಿರುದ್ಧವೇ ಪೊಲೀಸರಿಗೆ ದೂರು ಸಲ್ಲಿಸಿದ ಪೆಟ್ರೋಮ್ಯಾಕ್ಸ್ ಕಾರುಣ್ಯ ರಾಮ್
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಇಂತಹ ಕಾಲದಲ್ಲಿ ಹಣಕ್ಕೋಸ್ಕರ.. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕರ.. ಮನೆಯಲ್ಲಿಯೇ ಬಿರುಕು ಮೂಡುತ್ತೆ. ವೈರತ್ವ ಬೆಳೆಯುತ್ತೆ. ತಂದೆ -ಮಗ ಇರಬಹುದು.. ಅತ್ತೆ-ಸೊಸೆ ಇರಬಹುದು.. ಗಂಡ-ಹೆಂಡತಿ ಇರಬಹುದು.. ಅಕ್ಕ-ತಮ್ಮ.. ಅಣ್ಣ ತಂಗಿಯೇ ಆಗಿರಬಹುದು ಅಥವಾ ಅಕ್ಕ ತಂಗಿಯೇ ಆಗಿರಬಹುದು.
ಹಣದ ಮುಂದೆ ಸಂಬಂಧಗಳು ಕಳಚಿ ಬೀಳುತ್ತವೆ. ಹಣ ಮತ್ತು ಆಸ್ತಿಯ ಮೇಲಿನ ವ್ಯಾಮೋಹದಿಂದ ಸಂಬಂಧಗಳು ಮಣ್ಣು ಪಾಲಾಗುತ್ತವೆ. ಇದಕ್ಕೆ ಕಾರುಣ್ಯ ರಾಮ್ ಅವರ ಪ್ರಕರಣ ಸದ್ಯದ ಉದಾಹರಣೆ. ಹೌದು, ಕಾರುಣ್ಯ ರಾಮ್.. ಕನ್ನಡ ಚಿತ್ರರಂಗದ ಚೆಲುವೆ. ''ವಜ್ರಕಾಯ''.. ''ಕಿರಗೂರಿನ ಗಯ್ಯಾಳಿಗಳು''.. ''ಮನೆ ಮಾರಾಟಕ್ಕಿದೆ''.. ''ಪೆಟ್ರೋಮ್ಯಾಕ್ಸ್'' ಸೇರಿ ಹಲವು ಚಿತ್ರಗಳನ್ನು ಮಾಡಿರುವ ಕಾರುಣ್ಯ ರಾಮ್ ಕೇವಲ ಬೆಳ್ಳಿತೆರೆ ಮಾತ್ರವಲ್ಲದೇ ಕಿರುತೆರೆ ಮತ್ತು ರಿಯಾಲಿಟಿ ಶೋಗಳಲ್ಲಿ ಕೂಡ ತಮ್ಮ ಚಾಪು ಮೂಡಿಸಿದ್ದಾರೆ. ಜನ ಮನ ಗೆದ್ದಿದ್ದಾರೆ.

ಇಂಥಾ ಕಾರುಣ್ಯ ರಾಮ್ ಸದ್ಯ ರಕ್ತ ಹಂಚಿಕೊಂಡು ಹುಟ್ಟಿದ ತಮ್ಮ ಸಹೋದರಿ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದಾರೆ. ಆಶ್ಚರ್ಯ ಆದರೂ ಕೂಡ ಇದು ನಿಜಾ. ಈ ಕುರಿತು ಸಿಸಿಬಿ ಪೊಲೀಸರಿಗೆ ದೂರು ಸಲ್ಲಿಸಿರುವ ಕಾರುಣ್ಯ ರಾಮ್ ತಮ್ಮ ತಂಗಿ ಸಮೃದ್ದಿ ರಾಮ್ ತಮ್ಮ ಗಮನಕ್ಕೆ ತಾರದೇ 25 ಲಕ್ಷ ಸಾಲ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಹೌದು, ಅಸಲಿಗೆ ಅಕ್ಕನ ಜಾಡು ಹಿಡಿದು ಚಿತ್ರರಂಗಕ್ಕೆ ಬಂದ ಸಮೃದ್ದಿ ರಾಮ್ ಅವರಿಗೆ ಬೆಳ್ಳಿ ತೆರೆ ಒಲಿಯಲಿಲ್ಲ. ಈ ಹಿನ್ನೆಲೆ ಕಿರುತೆರೆಯತ್ತ ಮುಖ ಮಾಡಿದ್ದ ಸಮೃದ್ದಿ ''ಒಂದೂರಲ್ಲಿ ರಾಜ ರಾಣಿ'' ಧಾರಾವಾಹಿಯಲ್ಲಿ ಶಿವಾನಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಕನಸಿನ ಯಾನವನ್ನು ಶುರು ಮಾಡಿದ್ದರು. ಆ ನಂತದ ಖಳನಾಯಕಿಯಾಗಿ ಬದಲಾದ ಸಮೃದ್ದಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ''ಮನೆದೇವ್ರು'' ಧಾರಾವಾಹಿಯಲ್ಲಿ ನಾಯಕಿ ಜಾನಕಿಯ ಚಿಕ್ಕಮ್ಮನ ಮಗಳು ಪ್ರೀತಿ ಆಗಿ ಕಾಣಿಸಿಕೊಂಡಿದ್ದರು. ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿ ಕೂಡ ಆದರು.
ಆದರೆ, ಇದಾದ ನಂತರ ಕಿರುತೆರೆಗೆ ಕೂಡ ಗುಡ್ ಬೈ ಹೇಳಿದ ಸಮೃದ್ದಿ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡರು.ಅಕ್ಕನ ಸಹಕಾರ ಮತ್ತು ಸಹಯೋಗದೊಂದಿಗೆ ಬ್ಯೂಟಿಕ್ ಕೂಡ ಶುರು ಮಾಡಿದ್ದರು. ಆದರೆ. ದುರಾದೃಷ್ಟವಶಾತ್ ಇವರ ಈ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ. ಬದಲಿಗೆ ನಷ್ಟ ಆಯ್ತು. ಆದರೆ ಸಮೃದ್ದಿ ಮಾತ್ರ ಸುಮ್ಮನೆ ಕೂರಲಿಲ್ಲ.
ಸದ್ಯ ಕಾರುಣ್ಯ ರಾಮ್ ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿರುವಂತೆ ವ್ಯಾಪಾರದಲ್ಲಿ ನಷ್ಟವಾದ ನಂತರ ಸಮೃದ್ದಿ ಬೆಟ್ಟಿಂಗ್ ಆಡಿ ಒಂದೆರಡಲ್ಲ, ಬರೋಬ್ಬರಿ 25 ಲಕ್ಷ ಹಣ ಕಳೆದುಕೊಂಡರು. ಮನೆಯಲ್ಲಿದ್ದ ಚಿನ್ನ ಮತ್ತು ಹಣವನ್ನು ಕೂಡ ಕಾರುಣ್ಯ ರಾಮ್ ಅವರಿಗೆ ಗೊತ್ತಿಲ್ಲದಂತೆ ಉಪಯೋಗಿಸಿದರು. ಇದು ಸಾಲದು ಎಂಬಂತೆ ಬೇರೆ ಬೇರೆಯವರ ಬಳಿ ಸಮೃದ್ದಿ ಸಾಲ ಕೂಡ ಮಾಡಿದ್ದರು.

ಆದರೆ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗದೇ ಇರುತ್ತಾ..? ಸಾಲಗಾರರು ಮನೆಗೆ ಬಂದು ಹಣ ಕೊಡಿ ಎಂದು ಪೀಡಿಸಲು ಶುರು ಮಾಡಿದ ಮೇಲೆ ಕಾರುಣ್ಯ ರಾಮ್ ಅವರಿಗೆ ವಿಚಾರ ಗೊತ್ತಾಗಿದೆ. ಹಣ ಬಳಕೆ ಮಾಡಿಕೊಂಡಿದ್ದನ್ನು ತಮ್ಮ ತಂಗಿಗೆ ಕಾರುಣ್ಯ ಪ್ರಶ್ನೆ ಮಾಡಿದ್ದಾರೆ. ಆಗ ಸಮೃದ್ಧಿ ಮನೆ ಬಿಟ್ಟು ಹೋಗಿದ್ದಾರೆ. ಸದ್ಯ ಸಾಲಗಾರರು ಕಾರುಣ್ಯ ರಾಮ್ ಬೆನ್ನು ಹತ್ತಿದ್ದು ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದಾರೆ. ಯಾವುದೇ ಪೋಸ್ಟ್ ಹಾಕಿದರೂ ಕೂಡ ಕೆಲವರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಅವಾರ್ಡ್ ಫಾರ್ ಚೀಟರ್ಸ್" ಅಂತೆಲ್ಲಾ ಕೆಟ್ಟದಾಗಿ ಕಮೆಂಟ್ ಹಾಕುತ್ತಿದ್ದಾರೆ .
ಈ ಹಿನ್ನೆಲೆ ನೊಂದು ಬೆಂದು ಹೋಗಿರುವ ಕಾರುಣ್ಯ ರಾಮ್ ಸದ್ಯ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ತಂಗಿ ಸಮೃದ್ದಿ ಅವರನ್ನು ಒಳಗೊಂಡಂತೆ ಪ್ರತಿಭಾ, ರಕ್ಷಿತ್, ಪ್ರಜ್ವಲ್, ಸಾಗರ್, ಸಮೃದ್ಧಿ ವಿರುದ್ಧ ದೂರು ನೀಡಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.


Click it and Unblock the Notifications