ಕೆಂಗೇರಿಯಲ್ಲಿ ಸುದೀಪ್ ನಿರ್ಮಿಸುತ್ತಿರುವ ವಿಷ್ಣು ಸ್ಮಾರಕದ ಹೆಸರು, ನೀಲನಕ್ಷೆ ಬಹಿರಂಗ
ಅಭಿಮಾನಿಗಳು ವಿಷ್ಣುವರ್ಧನ್ ಅಮೃತ ಮಹೋತ್ಸವದಲ್ಲಿ ಮಿಂದೆದ್ದಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ ದಾದಾ ಸ್ಮಾರಕ ಧ್ವಂಸವಾಗಿದೆ. ಅದೇ ಜಾಗದಲ್ಲಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಬಯಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅಭಿಮಾನ್ ಸ್ಟುಡಿಯೋ ಪಕ್ಕದಲ್ಲೇ ವಿಷ್ಣು ಆಲಯ ಮಂಟಪ ನಿರ್ಮಿಸಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದಾರೆ. ಅಲ್ಲೇ ಒಂದಷ್ಟು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಅತ್ತ ಮೈಸೂರಿನಲ್ಲಿರುವ ವಿಷ್ಣುವರ್ಧನ್ ಸ್ಮಾರಕದಲ್ಲಿ ಕುಟುಂಬಸ್ಥರು ಪೂಜೆ ನೆರವೇರಿಸಿದರು. ಈಗಾಗಲೇ ಕೆಂಗೇರಿ ಬಳಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ತಯಾರಿ ನಡೆದಿದೆ. ನಟ ಸುದೀಪ್ ಅದಕ್ಕಾಗಿ ಅರ್ಧ ಎಕರೆ ಜಾಗ ಖರೀದಿಸಿದ್ದರು. ಅವರೊಟ್ಟಿಗೆ ವಿಷ್ಣುಸೇನಾ ಸಮಿತಿ ಹಾಗೂ ಅಭಿಮಾನಿಗಳು ಕೈ ಜೋಡಿಸಿದ್ದಾರೆ. ಇನ್ನೊಂದು ವರ್ಷದಲ್ಲಿ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ದರ್ಶನ ಕೇಂದ್ರ ಅಲ್ಲಿ ತಲೆ ಎತ್ತಲಿದೆ. ಅದರ ಹೆಸರು ಹಾಗೂ ನೀಲನಕ್ಷೆ ಇದೀಗ ಬಹಿರಂಗವಾಗಿದೆ.

'ಡಾ. ವಿಷ್ಣುವರ್ಧನ ಅಭಿಮಾನ ಕ್ಷೇತ್ರ' ಹೆಸರಿನಲ್ಲಿ ಕೆಂಗೇರಿ ಬಳಿಕ ಸ್ಮಾರಕ ನಿರ್ಮಾಣ ಆಗಲಿದೆ. 25 ಅಡಿಗಳ ದಾದಾ ಪುತ್ಥಳಿ ಜೊತೆಗೆ ಗ್ರಂಥಾಲಯ ಅಲ್ಲಿ ನಿರ್ಮಾಣವಾಗಲಿದೆ. ಬಹಳ ವಿಭಿನ್ನವಾಗಿ ಈ ದರ್ಶನ ಕೇಂದ್ರ ಸಿದ್ಧಗೊಳ್ಳಲಿದೆ. ಅದರ ನೀಲನಕ್ಷೆಯನ್ನು ಬಿಡುಗಡೆ ಮಾಡಿದ್ದಾರೆ. ತ್ರೀಡಿ ವೀಡಿಯೋದಲ್ಲಿ ಸ್ಮಾರಕ ಯಾವ ರೀತಿ ಇರಲಿದೆ ಎನ್ನುವುದನ್ನು ಪರಿಚಯಿಸಲಾಗಿದೆ. ಆ ವೀಡಿಯೋವನ್ನು ನಟ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸ್ಮಾರಕದ ಒಳಗೆ ಪ್ರವೇಶಿಸುತ್ತಿದ್ದಂತೆ 'ಯಜಮಾನ್ರು' ಎಂದು ದೊಡ್ಡ ಅಕ್ಷರಗಳಲ್ಲಿ ಬರೆದ ನೇಮ್ ಬೋರ್ಡ್.. ಮುಂದೆ ಚಿತ್ರದುರ್ಗದ ಕೋಟೆಯ ಒಂದು ಭಾಗ (ನಾಗರಹಾವು ಹಾವು ಚಿತ್ರದಲ್ಲಿ ತೋರಿಸಿರುವ ಭಾಗ)ದಂತೆ ಕಟ್ಟಡ ನಿರ್ಮಾಣ. ವಿಷ್ಣು ಕೈಯಲ್ಲಿ ಸದಾ ಇರುತ್ತಿದ್ದ ಕೈಗಡವನ್ನು ನೆನಪಿಸುವ ದೊಡ್ಡ ಫೋಟೊ ಫ್ರೇಮ್ ಬ್ಯಾಕ್‌ಗ್ರೌಂಡ್.. ಅಲ್ಲಿಂದ ಮುಂದೆ ಸಾಗಿದರೆ ಸ್ಮಾರಕದ ಒಳಗೆ ಪ್ರವೇಶಿಸುವ ಮಾರ್ಗ. ಎದುರಿಗೆ ವಿಷ್ಣುವರ್ಧನ್ 25 ಅಡಿ ಪುತ್ಥಳಿ. ಅದನ್ನು ನೋಡುತ್ತಾ ಹೋಗುತ್ತಿದ್ದಂತೆ ಫೋಟೊ ಗ್ಯಾಲರಿ ಕಣ್ಮುಂದೆ ಬರುತ್ತದೆ.
ದಾದಾನ ಅಪರೂಪದ ಫೋಟೊಗಳನ್ನು ಆ ಗ್ಯಾಲರಿಯಲ್ಲಿ ನೋಡಬಹುದು. ಇನ್ನು ಗೋಡೆಗಳ ಮೇಲೆ ವಿಷ್ಣುವರ್ಧನ್ ಡೈಲಾಗ್‌ಗಳನ್ನು ಬರೆದಿರುವುದು. ಪುತ್ಥಳಿ ಸುತ್ತು ಬಳಸಿ ಒಳಗೆ ಹೋದರೆ ಧ್ಯಾನ ಮಂದಿರ, ಪಕ್ಕದಲ್ಲೇ ದೊಡ್ಡ ಗ್ರಂಥಾಲಯ ಎಲ್ಲವೂ ಇರಲಿದೆ. "ನಮ್ಮ ಪ್ರೀತಿಯ ವಿಷ್ಣುವರ್ಧನ್ ಸರ್ ವಿಚಾರದಲ್ಲಿ ಇಷ್ಟೇ ಖಂಡಿತ ಅಲ್ಲ" ಎಂದು ಸುದೀಪ್ ಮಾತನಾಡಿರುವ ವೀಡಿಯೋ ಕೂಡ ಇದೆ. ಇನ್ನು ದಾದಾ ಸ್ಮಾರಕ ನಿರ್ಮಾಣಕ್ಕೆ ಚಿತ್ರ ನಿರ್ಮಾಪಕ, ರಾಜಕಾರಣಿ, ಉದ್ಯಮಿ ಅಶೋಕ್ ಖೇಣಿ ಕೂಡ ಕೈ ಜೋಡಿಸಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ಸದ್ಯಕ್ಕೆ ಸ್ಮಾರಕ ನಿರ್ಮಾಣ ಕಷ್ಟ ಎನ್ನುವಂತಾಗಿದೆ. ಇವತ್ತು ಕೂಡ ಅಭಿಮಾನಿಗಳು ಸ್ಟುಡಿಯೋ ಬಳಿ ಹೋಗಿದ್ದರು. ಅಲ್ಲೇ ದಾದಾ ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದರು. ಆದರೆ ಕೋರ್ಟ್ ಆದೇಶ ಇರುವುದರಿಂದ ಒಳಗೆ ಪ್ರವೇಶಿಸಲು ಅಭಿಮಾನಿಗಳಿಗೆ ಅವಕಾಶ ಸಿಗಲಿಲ್ಲ. ಸ್ಟುಡಿಯೋ ಮುಂಭಾಗದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಇತ್ತೀಚೆಗೆ ಸರ್ಕಾರ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಘೋಷಣೆ ಮಾಡಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು. ಇದೇ ಖುಷಿಯಲ್ಲಿ ದಾದಾ ಹುಟ್ಟುಹಬ್ಬ ಆಚರಿಸಿ ಖುಷಿಪಟ್ಟಿದ್ದಾರೆ.
ಇನ್ನೊಂದು ವರ್ಷದಲ್ಲಿ ಕೆಂಗೇರಿ ಬಳಿ 'ಡಾ. ವಿಷ್ಣುವರ್ಧನ ಅಭಿಮಾನ ಕ್ಷೇತ್ರ' ನಿರ್ಮಾಣವಾಗಲಿದೆ. ಈಗಾಗಲೇ ಪುತ್ಥಳಿ ನಿರ್ಮಾಣಕ್ಕೆ ಅಭಿಮಾನಿಗಳು ಅಡ್ವಾನ್ಸ್ ಕೂಡ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿ ಅವಕಾಶ ಸಿಕ್ಕರೆ ಅಲ್ಲಿಯೂ ಸ್ಮಾರಕ ನಿರ್ಮಾಣವಾಗಲಿದೆ. ಆ ಮೂಲಕ 3 ಜಾಗಗಳಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಆಗುವಂತಾಗುತ್ತದೆ.


Click it and Unblock the Notifications