»   » ಬಾಲಿವುಡ್‌ ಜಾತಕ - 2000

ಬಾಲಿವುಡ್‌ ಜಾತಕ - 2000

Posted By: Super
Subscribe to Filmibeat Kannada

ಮುಂಬಯಿ : ಭೂಗತ ಜಗತ್ತಿನ ಸಂಪರ್ಕದ ಆರೋಪದಲ್ಲಿ ಬೇಯುತ್ತಿರುವ ಬಾಲಿವುಡ್‌ಗೆ 2000 ಯಶಸ್ವಿ ವರ್ಷವಾಗಲಿಲ್ಲ . ಭಾರೀ ಭರವಸೆ ಮೂಡಿಸಿದ ಹೃತಿಕ್‌, ಅಭಿಷೇಕ್‌ ಬಚ್ಚನ್‌, ಕರೀನಾ ಕಪೂರ್‌ರಂಥಾ ಯುವ ತಾರೆಗಳ ಚಿತ್ರಗಳು ನಿರೀಕ್ಷಿಸಿದಷ್ಟು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ . ವರ್ಷದುದ್ದಕೂ ಪ್ಲಾಫ್‌ ಚಿತ್ರಗಳದ್ದೇ ಎದ್ದು ಕಾಣುವ ಹೆಸರು.

ವರ್ಷದ ಆರಂಭ ಭರ್ಜರಿಯಾಗಿಯೇ ಇತ್ತು . ಹೃತಿಕ್‌ ಅಭಿನಯದ ರಾಕೇಷ್‌ ರೋಷನ್‌ರ ಕಹೋ ನ ಪ್ಯಾರ್‌ ಹೈ ನ ಅದ್ಭುತ ಯಶಸ್ಸು ವರ್ಷದ ಪ್ರಾರಂಭದಲ್ಲಿ ಹೊಸ ಸಂಚಲನೆ ಮೂಡಿಸಿತು. ಅದೇ ಹೃತಿಕ್‌ ವರ್ಷದ ಕೊನೆಗೂ ಅನೇಕ ಕಾರಣಗಳಿಂದಾಗಿ ಸುದ್ದಿಯಲ್ಲಿರುವುದು ಕಾಕತಾಳೀಯ. ಮೊನ್ನೆ ತಾನೇ ಮದುವೆ. ಹನಿಮೂನಿನ ಸಂದರ್ಭದಲ್ಲೇ ನೇಪಾಳದಲ್ಲಿ ಎದುರಾಗಿರುವ ಪ್ರತಿಭಟನೆಯಿಂದಾಗಿ ಹೃತಿಕ್‌ ಸುದ್ದಿಯಲ್ಲಿದ್ದಾರೆ. ಇದು ಅವರ ಸ್ಟಾರ್‌ ಇಮೇಜ್‌ಗೆ ಎಷ್ಟರ ಮಟ್ಟಿಗೆ ಧಕ್ಕೆಯಾದೀತು ಅನ್ನುವುದನ್ನು 2001 ನಿರ್ಧರಿಸುತ್ತದೆ.

ಕಹೋ ನ ... ಯಶಸ್ಸು ಮೂಡಿಸಿದ ಭರವಸೆಯನ್ನು ನಂತರದ ಸಾಲು ಸಾಲು ತೋಪಾದ ಚಿತ್ರಗಳು ಹುಸಿಯಾಗಿಸಿದವು. ಆದರೆ, ಬಿಗ್‌ ಬಿ ಅಮಿತಾಬ್‌, ಗೆಲ್ಲುವ ಕುದುರೆ ಶಾರುಕ್‌ ಖಾನ್‌ರಂಥ ಭಾರೀ ತಾರೆಗಳನ್ನು ಒಳಗೊಂಡ ಯಶ್‌ ಚೋಪ್ರಾರ ಮೊಹಬ್ಬತೇ ಚಿತ್ರದ ಯಶಸ್ಸು ವರ್ಷದ ಕೊನೆಗೆ ಮತ್ತೆ ಬಾಲಿವುಡ್‌ನಲ್ಲಿ ಭರವಸೆ ಉಳಿಸಿದೆ. ಈ ಚಿತ್ರ ಶಾರುಕ್‌ಗೆ ಹೊಸ ಉಸಿರು ತುಂಬಿದ್ದೂ ನಿಜ. ಇವೆರಡೂ ಚಿತ್ರಗಳನ್ನು ಹೊರತು ಪಡಿಸಿದರೆ ಮತ್ತೊಂದು ಯಶಸ್ವಿ ಚಿತ್ರ ಮಿಷನ್‌ ಕಾಶ್ಮೀರ್‌. ಮುಂಬಯಿ ಮತ್ತು ದೆಲ್ಲಿಯಲ್ಲಿ ಗಂಟು ಮಾಡಿದ ಈ ಚಿತ್ರ ಉಳಿದೆಡೆಗಳಲ್ಲಿ ಸಾಧಾರಣ ಅನ್ನುವಷ್ಟರ ಮಟ್ಟಿಗೆ ಯಶಸ್ಸು ಕಂಡಿತು.

ಚಿತ್ರಗಳ ಗೆಲುವು ಸೋಲಿಗಿಂತ ವರ್ಷದ ಕೊನೆಯಲ್ಲಿ ಸುದ್ದಿಯಲ್ಲಿದ್ದುದು ಚಿತ್ರ ನಿರ್ಮಾಪಕ ನಜೀಂ ರಿಜ್ವಿ. ಭೂಗತ ಜಗತ್ತಿನವರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಈತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಇನ್ನೂ ಸಾಗುತ್ತಿದೆ. ಇದಕ್ಕೂ ಮುನ್ನ ಕಹೋ ನ.. ಚಿತ್ರದ ಯಶಸ್ವಿ ನಿರ್ಮಾಪಕ ರಾಕೇಶ್‌ ರೋಷನ್‌ನನ್ನು ಕೊಲ್ಲುವ ಪ್ರಯತ್ನಗಳು ನಡೆದಿದ್ದವು ಹಾಗೂ ಜೆ.ಪಿ.ದತ್ತ , ವಿಧು ವಿನೋದ್‌ ಚೋಪ್ರಾ ಮುಂತಾದವರು ಪ್ರಾಣ ಬೆದರಿಕೆಯನ್ನು ಎದುರಿಸಿದ್ದರು.

ಸರ್ಕಾರ ಕೂಡ ತನ್ನ ಸಿನಿಮಾ ನೀತಿಯಲ್ಲಿ ತಂದ ಕೆಲವು ಬದಲಾವಣೆಗಳು ಭಾರೀ ಪ್ರಚಾರ ಪಡೆದವು. ವಿಡಿಯೋ ಪೈರಸಿಯನ್ನು ನಿರ್ಮೂಲನಗೊಳಿಸಲು ಕೈಗೊಂಡ ಕ್ರಮಗಳು, ಸಿನಿಮಾವನ್ನು ಉದ್ಯಮ ಎಂದು ಪರಿಗಣಿಸಿದ್ದು, ನಿರ್ಮಾಪಕರಿಗೆ ಸಾಲ ಸೌಲಭ್ಯ ಮುಂತಾದ ಯೋಜನೆಗಳು ಬಾಲಿವುಡ್‌ನ ಮೆಚ್ಚುಗೆ ಗಳಿಸಿದವು.

ಡಬ್ಬಿಂಗ್‌ ಸಿನಿಮಾಗಳು ಸೇರಿ 2000 ಸಾಲಿನಲ್ಲಿ 233 ಸಿನಿಮಾಗಳು ತೆರೆ ಕಂಡಿವೆ. ಅವುಗಳಲ್ಲಿ 46 ಎ ಗ್ರೇಡ್‌ ಚಿತ್ರಗಳು, 100 ಬಿ ಗ್ರೇಡ್‌ ಚಿತ್ರಗಳು, ಉಳಿದವು ಸಿ ಗ್ರೇಡ್‌ನವು.

English summary
An Over view of Bollywood 2000

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada