»   » ಹೃತಿಕ್‌ ಮೇನಿಯಾದಲ್ಲಿ ಮೂಲೆಗುಂಪಾದ ಖಾನ್‌ ತ್ರಯರು

ಹೃತಿಕ್‌ ಮೇನಿಯಾದಲ್ಲಿ ಮೂಲೆಗುಂಪಾದ ಖಾನ್‌ ತ್ರಯರು

Posted By: Super
Subscribe to Filmibeat Kannada

ಇಡೀ ವರ್ಷ ಹೃತಿಕ್‌ ಮೇನಿಯಾದಲ್ಲಿ ಯೇ ಉರುಳಿತು. ಫಿಜಾದಂಥಾ ಸಾಧಾರಣ ಯಶಸ್ಸಿನ ಅಲೆಯಲ್ಲಿ ಖಾನ್‌ ತ್ರಯರು ಬೋರ್ಡ್‌ನಿಂದ ಹೊರ ಸರಿದರು. ಅಮೀರ್‌ನ ಮೇಳಾ, ಶಾರುಕ್‌ನ ಸ್ವಂತ ನಿರ್ಮಾಣದ ಫಿರ್‌ ಬಿ ದಿಲ್‌ ಹೈ ಹಿಂದೂಸ್ತಾನಿ ಮತ್ತು ಬಾದ್‌ಶಾ ಸಂಪೂರ್ಣ ನೆಲ ಕಚ್ಚಿದರೆ ಸಲ್ಮಾನ್‌ನ ಚಲ್‌ ಮೇರೆ ಭಾಯ್‌ ಮತ್ತು ದುಲ್ಹನ್‌ ಹಮ್‌ ಲೆ ಜಾಯೆಂಗೆ ಸಾಧಾರಣ ವ್ಯಾಪಾರ ಕಂಡವು.

ವರ್ಷದ ಮತ್ತೊಂದು ಭಾರೀ ಯಶಸ್ಸು ಅಮಿತಾಬ್‌ರ ಕಿರುತೆರೆ ಜಾದೂ. ಸ್ಟಾರ್‌ನ ಕೌನ್‌ ಬನೇಗ ಕರೋಡ್‌ ಪತಿ, ಬಿಗ್‌ ಬಿ ಕಳೆದುಕೊಂಡಿದ್ದ ಜನಪ್ರಿಯತೆಯನ್ನು ಮರಳಿ ತಂದಿತು. ಈ ಕಾರ್ಯಕ್ರಮ ಸಂಜೆ ಹಾಗೂ ರಾತ್ರಿ ಸಿನಿಮಾ ಪ್ರದರ್ಶನಗಳಿಗೆ ಹೊಡೆತ ನೀಡಿತು. ಲಂಡನ್‌ನ ಮೇಡಂ ಥೌಸಾಡ್ಸ್‌ನಲ್ಲಿ ಮೇಣದ ಪ್ರತಿಮೆಯಾಗಿ ನಿಲ್ಲುವ ಮೂಲಕ ಈ ಗೌರವ ಪಡೆದ ಮೊದಲ ಭಾರತೀಯ ನಟ ಎನಿಸಿಕೊಂಡಿದ್ದು ಕೂಡ ಅಮಿತಾಬ್‌ರ 2000 ಸಾಲಿನ ಹೆಗ್ಗಳಿಕೆ. ಆದರೆ, ಅವರ ಪುತ್ರ ಅಭಿಷೇಕ್‌ ಹಾಗೂ ಕರೀನಾ ಅಭಿನಯದ ರೆಫ್ಯುಜಿ ಸೋತದ್ದನ್ನು ಅನೇಕರು ಈವರೆಗೂ ಅರಗಿಸಿಕೊಂಡಿಲ್ಲ . ಅಭಿಷೇಕ್‌ನ ಮತ್ತೆರಡು ಚಿತ್ರಗಳಾದ ಢಾಯಿ ಅಕ್ಷರ್‌ ಪ್ರೇಮ್‌ ಕೆ ಹಾಗೂ ತೇರಾ ಜಾದೂ ಚಲ್‌ ಗಯಾ ಕೂಡಾ ನೋಡುಗರ ತಿರಸ್ಕಾರಕ್ಕೊಳಗಾದವು.

ಪ್ರಣಯ ಕಥೆಗಳಿಗೆ ಪಟ್ಟ : ಈ ವರ್ಷ ತ್ರಿಕೋನ ಪ್ರೇಮ ಕಥೆಗಳು, ಸಾಂಸಾರಿಕ ಕಥೆಗಳನ್ನೊಳಗೊಂಡ ಪ್ರಣಯ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸಿವೆ. ಭಾರೀ ಬಜೆಟ್ಟಿನ ಕಮಲ್‌ಹಾಸನ್‌ರ ಹೇ ರಾಂ ಇನ್ನಿಲ್ಲದಂತೆ ನೆಲ ಕಚ್ಚಿತು. ಹೊಸಬರಾದ ಆಮಿಶಾ ಪಟೇಲ್‌ ಹಾಗೂ ಕರೀನಾ ಕಪೂರ್‌ ಭರವಸೆಯ ತಾರೆಗಳೆನಿಸಿದ್ದು ವರ್ಷದ ತಾರಾ ವಿಶೇಷ. ರೆಫ್ಯುಜಿ ಸೋಲಿನ ನಂತರವೂ ಕರೀನಾ ಹೊಸ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಆಮಿಶಾ ಕೈಯ್ಯಲ್ಲಿ ಕೂಡಾ ದೊಡ್ಡ ಬ್ಯಾನರ್‌ನ ಚಿತ್ರಗಳಿವೆ.

ವರ್ಷದ ಕೊನೆಗೆ ಬಾಲಿವುಡ್‌ ಅನುಭವಿಸಿದ ಮತ್ತೊಂದು ಶಾಕ್‌- ತಮ್ಮ ನಿವಾಸದಲ್ಲೇ ಕೊಲೆಗೀಡಾದ ಮಾಜಿ ನಟಿ ಪ್ರಿಯಾ ರಾಜ್‌ವಂಶ್‌ರ ಸಾವು. ಅಂತೆಯೇ ಭಾರತೀಯ ಸಿನಿಮಾದ ಮೈಲುಗಳಲ್ಲೊಂದು ಎಂದು ಹೆಸರಾದ ಮುಂಬಯಿಯ ಮೆಹ್‌ಬೂಬ್‌ ಸ್ಟುಡಿಯೋದ ಪ್ರಮುಖ ಭಾಗವೊಂದು ಅಗ್ನಿ ಆಕಸ್ಮಿಕದಲ್ಲಿ ಭಸ್ಮವಾದದ್ದೂ ಮರೆಯಲಾಗದ ಘಟನೆ.

English summary
An Over view of Bollywood 2000

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada