ಸೀತೆಯಾಗಲ್ಲ ಎಂದ ಆಲಿಯಾ...ರಾವಣನಾಗಲು ಒಪ್ಪಲಿಲ್ಲವೇ ರಾಕಿಂಗ್ ಸ್ಟಾರ್!?
ಬಾಲಿವುಡ್ ಆದಿಪುರುಷ್ ಎಂಬ ರಾಮಾಯಾಣ ಆಧಾರಿತ ಸಿನಿಮಾ ಮಾಡಿ ಜನರಿಂದ ಉಗಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಇಗ ಮತ್ತೆ ರಾಮಾಯಣ ಮಾಡಲು ಮತ್ತೊಬ್ಬ ನಿರ್ದೇಶಕರು ಮುಂದಾಗಿದ್ದಾರೆ. ಈ ಬಾರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ನಿತೇಶ್ ತಿವಾರಿ ರಾಮಾಯಣವನ್ನು ತೆರೆಯ ಮೇಲೆ ತರಲು ಹೊರಟಿದ್ದಾರೆ. ಆದರೆ ಅವರ ಪ್ರಯತ್ನಕ್ಕೆ ಮೊದಲೇ ವಿಘ್ನಗಳು ಎದುರಾಗುತ್ತಿವೆ.
ಎಸ್.... ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರಧಾರಿಯಾಗಿ ನಟಿಸಬೇಕಿದ್ದ ಬಾಲಿವುಡ್ ನಟಿ ಆಲಿಯಾ ಭಟ್ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ಡೇಟ್ಸ್ ಸಮಸ್ಯೆಗಳಿಂದಾಗಿ ಆಲಿಯಾ ಭಟ್ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಯಿದೆ.

ವರದಿಯ ಪ್ರಕಾರ, ರಾಮಾಯಣ ಚಿತ್ರದ ಚಿತ್ರೀಕರಣ ಪ್ರಾರಂಭದಲ್ಲಿ ವಿಳಂಬವಾಗಿದೆ. ನಟಿ ಆಲಿಯಾ ಸೀತಾ ದೇವಿಯ ಪಾತ್ರ ಮಾಡಲು ಮಾತುಕತೆ ನಡೆಸುತ್ತಿದ್ದರು, ಆದರೆ ದಿನಾಂಕದ ಸಮಸ್ಯೆಗಳಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಮೂಲವೊಂದು ತಿಳಿಸಿದೆ. ಈ ಸಿನಿಮಾದಲ್ಲಿ ರಾಮನಾಗಿ ನಟ ರಣಬೀರ್ ಕಪೂರ್ ನಟಿಸಲಿದ್ದಾರೆ.
ರಾವಣನಾಗಲು ಒಪ್ಪಲಿಲ್ಲವೇ ಯಶ್!?
ದಂಗಲ್ ಅಂತಹ ಸೂಪರ್ ಹಿಟ್ ಸಿನಿಮಾ ನೀಡಿರುವ ನಿತೀಶ್ ತಿವಾರಿ ಅವರ ರಾಮಾಯಣದಲ್ಲಿ ರಾಮನಾಗಿ ಅಲಿಯಾ ಭಟ್ ಅವರ ಪತಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಪಾತ್ರವನ್ನು ನಿಭಾಯಿಸಲು ಅವರು ಒಪ್ಪಿಕೊಂಡಿದ್ದಾರೆ ಎಂಬ ವರದಿಯಿದೆ. ಆದರೆ, ರಣಬೀರ್ ಕಪೂರ್ ಎದುರು ರಾವಣನಾಗಿ ಘರ್ಜಿಸಲು ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾಹಿತಿಯಿದೆ.
ನಟ ಯಶ್ ಅವರ ರಾವಣನ ವೇಷದಲ್ಲಿ ಲುಕ್ ಟೆಸ್ಟ್ ನಡೆಯುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಫೋಟೋಗಳು ಹರಿದಾಡಿದ್ದವು. ಆದರೆ, ನಟ ಈ ಹಿಂದೆಯೇ ರಾವಣನ ಪಾತ್ರ ಮಾಡಲು ನಿರಾಕರಿಸಿದ್ದಾರೆ ಎಂಬ ಮಾಹಿತಿಯಿದೆ. ಈ ಬಗ್ಗೆ ಯಶ್ ಯಾವುದೇ ಮಾಹಿತಿ ನೀಡಿಲ್ಲ. ಈ ಹಿಂದೆಯೂ ನಟ ಯಶ್ ತಾವು ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಜುಲೈನಲ್ಲಿ, ನಿರ್ದೇಶಕ ನಿತೇಶ್ ತಿವಾರಿ ಅವರನ್ನು ಚಿತ್ರದ ಪಾತ್ರವರ್ಗದ ಬಗ್ಗೆ ಕೇಳಲಾಗಿತ್ತು. ಈ ವೇಳೆ ರಣಬೀರ್ ಕಪೂರ್ , ಆಲಿಯಾ ಭಟ್ ಮತ್ತು ಯಶ್ ಕ್ರಮವಾಗಿ ರಾಮ, ಸೀತೆ ಮತ್ತು ರಾವಣನ ಪಾತ್ರವನ್ನು ಮಾಡುವ ಬಗ್ಗೆ ಯಾವುದೇ ಮಾಹಿತಿ ನೀಡಿಲಿಲ್ಲ. ಜೊತೆಗೆ ಈ ಹೇಳಿಕೆಗಳನ್ನು ನಿರಾಕರಿಸಲೂ ಇಲ್ಲ. ಎಲ್ಲದಕ್ಕೂ ಉತ್ತರವಾಗಿ "ಅತಿ ಶೀಘ್ರದಲ್ಲೇ ಘೋಷಣೆ ಬರಲಿದೆ" ಎಂದು ಹೇಳಿದ್ದರು.
ಇನ್ನು, ಈ ಹಿಂದೆ ರಾಮಾಯಣ ಸಿನಿಮಾ ಮಾಡಲಾಗುತ್ತದೆ ಎಂಬುದಕ್ಕೆನೇ ನಟಿ ಕಂಗನಾ ರನೌತ್ ಕಿಡಿಕಾರಿದ್ದರು. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಸಿಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬ್ರಹ್ಮಾಸ್ತ್ರ ಸಿನಿಮಾ ಮತ್ತು ಬಿಳಿ ಇಲಿ ಎಂದೆಲ್ಲಾ ಟೀಕಿಸಿದ್ದ ಅವರು, ಯಾರ ಹೆಸರನ್ನು ತೆಗೆದುಕೊಂಡಿರಲಿಲ್ಲ. ಜೊತೆಗೆ ಯಶ್ ಅವರನ್ನು ದಕ್ಷಿಣದ ಯುವ ಸೂಪರ್‌ಸ್ಟಾರ್ ಎಂದು ಕರೆದಿದ್ದರು. ಯಶ್ ರಾವಣನ ಪಾತ್ರ ಮಾಡುತ್ತಾರೆ ಎಂಬುದನ್ನು ಟೀಕಿಸಿ ವಾಲ್ಮೀಕಿ ವಿವರಣೆಯ ಪ್ರಕಾರ ಅವರು ತಮ್ಮ ಮೈಬಣ್ಣ, ನಡವಳಿಕೆ ಮತ್ತು ಮುಖದ ವರ್ಷಸ್ಸಿನಿಂದ ಶ್ರೀರಾಮನಂತೆಯೇ ಕಾಣುತ್ತಾರೆ ಎಂದು ಕೊಂಡಾಡಿದ್ದರು.
ಈಗಾಗಲೇ ಓಂ ರಾವತ್ ಅವರ ಒಂದು ರಾಮಾಯಣ ನೋಡಿ ಬೇಸತ್ತಿರುವ ಜನತೆ ಬಾಲಿವುಡ್‌ನಿಂದ ಮತ್ತೊಂದು ರಾಮಾಯಣ ಬಯಸುತ್ತಾರೆಯೇ ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ವಿಷಯ. ಆದರೂ, ಕನ್ನಡದ ರಾಕಿಂಗ್ ಸ್ಟಾರ್ ಬಾಲಿವುಡ್ ಅಂಗಳಕ್ಕೆ ಪ್ರವೇಶಿಸಲಿದ್ದಾರಾ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಂತು ಇದ್ದೇ ಇದೆ.


Click it and Unblock the Notifications











