ನಾನು ನಿಮ್ಮ ಅಭಿಮಾನಿ, ಯುಐ ವಾರ್ನರ್‌ಗೆ ಅಮೀರ್ ಖಾನ್ ಕ್ಲೀನ್ ಬೋಲ್ಡ್...!
ಉಪೇಂದ್ರ ಕನ್ನಡ ಚಿತ್ರರಂಗದ ಅಪರೂಪದ ನಿರ್ದೇಶಕ ಮತ್ತು ನಾಯಕ. ತಮ್ಮ ಚಿಂತನೆಗಳಿಂದ ಆಗಾಗ ಬೆಕ್ಕಸ ಬೆರಗಾಗಿಸುವ ಉಪ್ಪಿ ಸದ್ಯ ಯುಐ ಚಿತ್ರವನ್ನು ಮಾಡಿದ್ದಾರೆ. ಈ ಡಿಸೆಂಬರ್ 20ರಂದು ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಯುಐ ಕೇವಲ ಕನ್ನಡ ಮಾತ್ರ ಅಲ್ಲ. ಬೇರೆ ಭಾಷೆಯಲ್ಲಿ ಕೂಡ ಬಿಡುಗಡೆಯಾಗಲಿದೆ.
ಆದರೆ, ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಆಗಬೇಕಾದ ಪ್ರಚಾರವಾಗುತ್ತಿಲ್ಲ ಅನ್ನುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೂ ಉಪೇಂದ್ರ ಬುದ್ದಿವಂತ. ಕೇವಲ ಕನ್ನಡದಲ್ಲಿ ಮಾತ್ರ ಉಪೇಂದ್ರ ಅವರಿಗೆ ಅಭಿಮಾನಿಗಳಿಲ್ಲ. ಬೇರೆ ಬೇರೆ ಭಾಷೆಯಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕೆ ಪ್ರಚಾರದ ಕೊರತೆಯಾದರೂ ಕೂಡ ಬೇರೆ ಭಾಷೆಯಲ್ಲಿ ಉಪ್ಪಿಯ ಈ ಸವಾರ್ಧಿಕಾರಿಯ ಕಥನವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳುತ್ತಾರೆ ಎನ್ನುವ ನಂಬಿಕೆ ಕನ್ನಡ ಚಿತ್ರರಂಗದ ಕಲಾಭಿಮಾನಿಗಳಲ್ಲಿದೆ. ಇವರ ಅಭಿಮಾನಿಗಳಲ್ಲಿದೆ. ಇದರ ನಡುವೆ ಈಗ ಉಪೇಂದ್ರ ಅವರ ಯುಐ ಕುರಿತು ಅಮೀರ್ ಖಾನ್ ಮಾತನಾಡಿದ್ದಾರೆ. ನಾನು ಕೂಡ ಉಪೇಂದ್ರ ಅವರ ಅಭಿಮಾನಿ ಎಂದು ಹೇಳಿದ್ದಾರೆ.

ಹೌದು, ಅಸಲಿಗೆ ಉಪೇಂದ್ರ ಮತ್ತು ಅಮೀರ್ ಖಾನ್ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೂಲಿ'ಯಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಜೈಪುರದಲ್ಲಿ ನಡೆಯುತ್ತಿದ್ದು ಅಮೀರ್ ಖಾನ್ ಮೊನ್ನೆಯಷ್ಟೇ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇದೇ ಸಮಯದಲ್ಲಿ ಉಪೇಂದ್ರ ಅವರ ಯುಐ ಚಿತ್ರದ ವಾರ್ನರ್ ಟೀಸರ್ ನೋಡಿರುವ ಅಮೀರ್ ಖಾನ್ ಉಪ್ಪಿಯ ಬುದ್ದಿವಂತಿಕೆಗೆ ತಲೆಬಾಗಿದ್ದಾರೆ. ನಾನು ನಿಮ್ಮ ಅಭಿಮಾನಿ ಈ ಚಿತ್ರ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.
ಎಲ್ಲರಿಗೂ ನಮಸ್ಕಾರ ಎಂದು ಮಾತು ಶುರು ಮಾಡುವ ಅಮೀರ್ ಖಾನ್, ಇವತ್ತು ನಾನು ತುಂಬಾ ಅಭಿಮಾನದಿಂದ ನೋಡುವ ವ್ಯಕ್ತಿಯ ಜೊತೆ ಇದ್ದೇನೆ.ಇವರ ಚಿತ್ರ ಡಿಸೆಂಬರ್ 20ರಂದು ಬಿಡುಗಡೆಯಾಗಲಿದೆ. ನಾನು ಈಗಷ್ಟೇ ಚಿತ್ರದ ಟ್ರೇಲರ್ ನೋಡಿದೆ, ಆಶ್ಚರ್ಯ ಚಕಿತಗೊಂಡೆ ಎಂದು ಹೇಳಿದ್ದಾರೆ. ಆ ನಂತರ ಅಲ್ಲಿಯೇ ಪಕ್ಕದಲ್ಲಿ ಇದ್ದ ಉಪೇಂದ್ರ ಅವರನ್ನು ಕೂಡ ಪರಿಚಯಿಸುವ ಅಮೀರ್ ಖಾನ್, ಉಪೇಂದ್ರ ಅವರೇ ಟ್ರೇಲರ್ ಮಾತ್ರ ಅತ್ಯದ್ಭುತವಾಗಿದೆ. ನಿಮ್ಮ ಈ ಚಿತ್ರ ಹಿಂದಿ ಪ್ರೇಕ್ಷಕರಿಗೂ ಕೂಡ ಇಷ್ಟವಾಗಲಿದೆ. ಟ್ರೇಲರ್ ನೋಡಿ ನಾನಂತೂ ದಂಗಾದೆ ಎಂದಿದ್ದಾರೆ. ನಿಮಗೆ ಅದ್ಭುತವಾದ ಯಶಸ್ಸು ಸಿಗಲಿ ಎಂದು ಉಪೇಂದ್ರ ಅವರಿಗೆ ಶುಭ ಹಾರೈಸಿದ್ದಾರೆ. ಅಮೀರ್ ಖಾನ್ ಅವರ ಈ ಮಾತುಗಳಿಗೆ ಉಪ್ಪಿ ಧನ್ಯವಾದ ಹೇಳಿದ್ದಾರೆ.
ಈ ಅಪರೂಪದ ಭೇಟಿಯ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಬರೆದುಕೊಂಡಿರುವ ಉಪೇಂದ್ರ, ಪ್ರೀತಿಯ ಅಮೀರ್ ಸರ್ ನಿಮ್ಮನ್ನು ಭೇಟಿಯಾಗುವ ಬಹುಕಾಲದ ಕನಸು ಇಂದು ನನಸಾಗಿದೆ. ನಿಮ್ಮ ಹಾರೈಕೆ ಮತ್ತು ಬೆಂಬಲಕ್ಕೆ ಧನ್ಯವಾಗಳು ಎಂದು ಹೇಳಿದ್ದಾರೆ. ಇನ್ನುಳಿದಂತೆ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಸಿಕ್ಕಿದೆ. ಇನ್ನೂ ಉಪೇಂದ್ರ ಅವರಿಗೆ ಅಕ್ಕ-ಪಕ್ಕದ ರಾಜ್ಯದಲ್ಲಿ ಮೊದಲಿಂದ ಬೇಡಿಕೆ ಇದೆ. ಈ ಕಾರಣಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಕೇರಳದಲ್ಲಿ ಎಪಿ ಇಂಟರ್ನ್ಯಾಷನಲ್ ಪ್ರೊಡಕ್ಷನ್ ಹೌಸ್ ಈ ಜವಾಬ್ಧಾರಿ ವಹಿಸಿಕೊಂಡಿದೆ. ವಿದೇಶಗಳಲ್ಲಿ ಹೋಮ್ ಸ್ಕ್ರೀನ್ ಎಂಟ್ರಟೈನ್ಮೆಂಟ್ ವಿತರಣೆ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಕರ್ನಾಟಕದಲ್ಲಿ ಕೆವಿಎನ್ ನಿರ್ಮಾಣ ಸಂಸ್ಥೆ ಚಿತ್ರವನ್ನು ಬಿಡುಗಡೆ ಮಾಡಲಿದೆ. ಬೆಂಗಳೂರು ಅಥವಾ ಚಿತ್ರದುರ್ಗದಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯುವ ಸಾಧ್ಯತೆ ಇದೆ.


Click it and Unblock the Notifications











