"ಕಲಾವಿದರನ್ನು ನೋಡಿ ಜನ ಮತ ಹಾಕ್ತಾರಾ? ಸ್ಟಾರ್ಸ್ ಹೋದಕಡೆ ಎಲ್ಲಾ ಗೆದ್ದುಬಿಟ್ಟಿದ್ದಾರಾ?": ಉಮಾಪತಿ ಟಾಂಗ್
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ. ಸ್ಟಾರ್ ಕಲಾವಿದರನ್ನು ಪ್ರಚಾರ ಕಣಕ್ಕೆ ಇಳಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ. ಸತೀಶ್ ರೆಡ್ಡಿ ಎದುರು 'ರಾಬರ್ಟ್' ಸಿನಿಮಾ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಕಣಕ್ಕಿಳಿದಿದ್ದಾರೆ.
ಎಂ. ಸತೀಶ್ ರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿ ಸತತ 4ನೇ ಬಾರಿ ಟಿಕೆಟ್ ಪಡೆದಿದ್ದಾರೆ. ಇತ್ತೀಚೆಗೆ ನಾಮಪತ್ರ ಕೂಡ ಸಲ್ಲಿಸಿದ್ದಾರೆ. 2008ರಲ್ಲಿ ವಿಧಾನಸಭೆ ಕ್ಷೇತ್ರವಾಗಿ ಬೊಮ್ಮನಹಳ್ಳಿ ಅಸ್ತಿತ್ವಕ್ಕೆ ಬಂದ ನಂತರ ಸತತ 3 ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸತೀಶ್ ರೆಡ್ಡಿ ಗೆದ್ದಿದ್ದಾರೆ. 4 ಬಾರಿ ಮತ್ತೆ ಅಖಾಡಕ್ಕೆ ಇಳಿದಿದ್ದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಎದುರಾಗಿದೆ. ಕಳೆದ 2 ಬಾರಿ ಅನಾಯಾಸವಾಗಿ ಗೆದ್ದು ಬಂದ ಸತೀಶ್ ರೆಡ್ಡಿ ಅವರಿಗೆ ಈ ಬಾರಿ ಸ್ಪರ್ಧೆ ಕಠಿಣವಾದಂತೆ ಕಾಣುತ್ತಿದೆ.

ಹಾಲಿ ಶಾಸಕರಾದ ಸತೀಶ್ ರೆಡ್ಡಿ ಹಾಗೂ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆತ್ಮೀಯ ಸ್ನೇಹಿತರು. ಸತೀಶ್ ರೆಡ್ಡಿ ಪರ ನಟ ದರ್ಶನ್ ಕೂಡ ಈ ಬಾರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಒಂದ್ಕಾಲದಲ್ಲಿ ಸ್ನೇಹಿತರಾಗಿದ್ದ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಂತರ ದೂರಾಗಿದ್ದರು. 25 ಕೋಟಿ ರೂ. ಫೇಕ್ ಲೋನ್ ಪ್ರಕರಣದಲ್ಲಿ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇದೀಗ ಉಮಾಪತಿ ಎದುರು ಸತೀಶ್ ರೆಡ್ಡಿ ಪರ ದರ್ಶನ್ ಪ್ರಚಾರಕ್ಕೆ ಬರುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.
ದರ್ಶನ್ ಪ್ರಚಾರಕ್ಕೆ ಬರುತ್ತಿರುವುದು ಬಗ್ಗೆ ಬೊಮ್ಮನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿರುವ ಉಮಾಪತಿ, "ಶಾಸಕರಿಗೆ ಐಡೆಂಟಿಟಿ ಇಲ್ಲ, ಅದಕ್ಕೆ ಐಡೆಂಟಿಟಿ ಹುಟ್ಸೋಕೆ ನಮ್ಮ ದರ್ಶನ್ ಸರ್ ಬರ್ತಾರೆ. ನನ್ ಕಾರ್ಯಕರ್ತರು ನಾಯಕರೇ ನನ್ನ ಸ್ಟಾರ್‌ಗಳು ಕರೆಸ್ತಿದ್ದಾರೆ. ತಮ್ಮ ಜೀವನಕ್ಕಾಗಿ ಕಲಾವಿದರು ಕಲಾಸೇವೆ ಮಾಡ್ತಿದ್ದಾರೆ. ಅವರಿಂದ ಜನ ಬದಲಾಗಿ ಮತ ಹಾಕುತ್ತಾರೆ ಅನ್ನೋದೆಲ್ಲಾ ಸುಳ್ಳು. ಇವತ್ತು ಯಾರು ದಡ್ಡರಲ್ಲ ಎಂದಿದ್ದಾರೆ.
"ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಮೂರೇ ದಿವಸ ಅನ್ನುವ ಮಾತಿದೆ. ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಸ್ಟಾರ್‌ಗಳು ಹೋಗಿ ಪ್ರಚಾರ ಮಾಡಿದ ಕಡೆಯೆಲ್ಲ ಆ ಅಭ್ಯರ್ಥಿಗಳು ಗೆದ್ದುಬಿಟ್ಟಿದ್ದಾರಾ? ನನಗೆ ಮತದಾರರೇ ಸ್ಟಾರ್ಸ್. ಅವರು ನನ್ನೊಟ್ಟಿಗೆ ಇರುವಾಗ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ದರ್ಶನ್ ಒಬ್ಬರೇ ಅಲ್ಲ, ಭಾರತೀಯ ಚಿತ್ರರಂಗದ ಎಲ್ಲಾ ಸ್ಟಾರ್ಸ್‌ನ ಕರ್ಕೊಂಡು ಬರಲಿ, ನನ್ನ ಸ್ಟಾರ್ಸ್ ನನ್ನ ಜನಗಳು" ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ. ಈ ಬಾರಿ ಚುನಾವಣೆ ದುಡ್ಡಿನಿಂದ ಅಲ್ಲ ಸ್ವಾಭಿಮಾನದಿಂದ ನಡೀತಿದೆ" ಎಂದು ಉಮಾಪತಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಸತೀಶ್ ರೆಡ್ಡಿ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ನಟ ದರ್ಶನ್ ಭಾಗಿ ಆಗಿದ್ದರು. ಸತೀಶ್ ರೆಡ್ಡಿ ಜೊತೆ ಬೇಗೂರು ರಸ್ತೆಯಲ್ಲಿ ರೋಡ್ ಶೋ ನಡೆಸಿದ್ದರು. ಇನ್ನು ಕಳೆದ ಬಾರಿಯೇ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮಾಪತಿ ಶ್ರೀನಿವಾಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆ ಬಾರಿ ಟಿಕೆಟ್ ಕೈ ತಪ್ಪಿತ್ತು. ಆದರೆ ಈ ಬಾರಿ ಸಿಕ್ಕಿದ್ದು ಈಗಾಗಲೇ ನಾಮಪತ್ರ ಕೂಡ ಸಲ್ಲಿಸಿದ್ದಾರೆ.
ಸುದೀಪ್ ನಟನೆಯ 'ಹೆಬ್ಬುಲಿ' ಚಿತ್ರದ ಸಹ ನಿರ್ಮಾಪಕರಾಗಿ ಉಮಾಪತಿ ಕನ್ನಡ ಚಿತ್ರರಂಗಕ್ಕೆ ಬಂದರು. 'ರಾಬರ್ಟ್', 'ಒಂದಲ್ಲ ಎರಡಲ್ಲ' ಹಾಗೂ 'ಮದಗಜ' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಚಿಕ್ಕಣ್ಣ ನಟನೆಯ 'ಉಪಾಧ್ಯಕ್ಷ' ಸಿನಿಮಾ ರಿಲೀಸ್‌ಗೆ ರೆಡಿ ಆಗ್ತಿದ್ದು ಇದಕ್ಕೆ ಬಂಡವಾಳ ಹೂಡಿದ್ದಾರೆ. ದರ್ಶನ್ ಹೀರೊ ಆಗಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಘೋಷಿಸಿದ್ದರು. ದರ್ಶನ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಈ ಸಿನಿಮಾ ಸದ್ಯಕ್ಕೆ ನಿಂತಿದೆ. ಆದರೆ ಈ ಚಿತ್ರವನ್ನೇ ಮಾಡೋದು ಗ್ಯಾರೆಂಟಿ ಎಂದು ಈ ಹಿಂದೆ ಹೇಳಿದ್ದರು.


Click it and Unblock the Notifications











