Buddhivantha 2: ಸೆಪ್ಟಂಬರ್ 15ಕ್ಕೆ 'ಬುದ್ದಿವಂತ 2' ರಿಲೀಸ್ ಆಗಲ್ಲ ಕ್ಷಮಿಸಿ ಎಂದ ಚಿತ್ರತಂಡ!
ಈ ವರ್ಷ ಕಬ್ಜ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಮುಂದಾಗಿ ಹೆಚ್ಚೇನೂ ಯಶಸ್ಸು ಸಾಧಿಸದೇ ಇರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಚಿತ್ರ ಯುಐ ಮೇಲೆ ಸದ್ಯಕ್ಕೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಉಪ್ಪಿ ಸದ್ಯ ತಮ್ಮದೇ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಯುಐ'ನಲ್ಲಿ ನಿರತರಾಗಿದ್ದಾರೆ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿರುವ ಉಪ್ಪಿ ನಟನೆಯ ಮತ್ತೊಂದು ಸಿನಿಮಾ 'ಬುದ್ಧಿವಂತ 2' ಅತ್ತ ಬಿಡುಗಡೆಗೆ ಸಿದ್ಧವಾಗಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಆದರೆ ಯಾಕೋ ಅದು ಸಾಧ್ಯವಾಗಲೇ ಇಲ್ಲ. ಟೈಟಲ್ ಹಾಗೂ ಪೋಸ್ಟರ್‌ಗಳಿಂದ ಸದ್ದು ಮಾಡುತ್ತಿರುವ ಸಿನಿಮಾ ಸೆಪ್ಟೆಂಬರ್‌ನಲ್ಲಿ ಥಿಯೇಟರ್ ಅಂಗಳಕ್ಕೆ ಬರಲಿದೆ ಎಂಬ ಸುದ್ದಿ ಸಹ ಕಳೆದ ವಾರವಷ್ಟೇ ಹರಿದಾಡಿತ್ತು. ಆದರೆ ಈಗ ಚಿತ್ರತಂಡ ಈ ಕುರಿತು ಅಪ್‌ಡೇಟ್ ಒಂದನ್ನು ನೀಡಿದ್ದು, ಬುದ್ದಿವಂತ 2 ಚಿತ್ರದ ಬಿಡುಗಡೆ ವಿಳಂಬವಾಗಲಿದೆ ಎಂಬುದನ್ನು ತಿಳಿಸಿದೆ.

ಈ ಕುರಿತು ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಬುದ್ದಿವಂತ 2 ಚಿತ್ರತಂಡ " ನಮ್ಮ ಬುದ್ದಿವಂತ 2 ಚಿತ್ರಕ್ಕೆ ಸಂಬಂಧಿಸಿದಂತೆ. ಈಗಾಗಲೇ ಪ್ರಕಟಿಸಿದ ಟೀಸರ್ ಬಿಡುಗಡೆ ಹಾಗೂ ಸಿನಿಮಾ ಬಿಡುಗಡೆ ದಿನಾಂಕಗಳನ್ನು ತಾಂತ್ರಿಕ ಕಾರಣಗಳಿಂದ ಇದೀಗ ಮುಂದೂಡಲಾಗಿದೆ. ಆದ್ದರಿಂದ ಸದರಿ ಬಿಡುಗಡೆಯ ದಿನಾಂಕಗಳನ್ನು ಅತಿ ಶೀಘ್ರದಲ್ಲಿಯೇ ಘೋಷಿಸಲಾಗುವುದು. ದಯವಿಟ್ಟು ನಿಮ್ಮ ಪ್ರೀತಿ ಹಾಗೂ ನಿರೀಕ್ಷೆಯನ್ನು ಹೀಗೆ ಕಾಯ್ದಿರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಇಂತಿ ತಮ್ಮ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಬುದ್ದಿವಂತ 2 ಚಿತ್ರತಂಡ ಹಾಗೂ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್" ಎಂದು ಪ್ರಕಟಿಸಿದೆ.
ಕೊವಿಡ್‌ಗೂ ಮುನ್ನವೇ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಬಿಡುಗಡೆ ಭಾಗ್ಯ ಯಾವಾಗ ಎಂಬ ಪ್ರಶ್ನೆ ಉಪ್ಪಿ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿರಲ್ಲಿ ಕಾಡಿತ್ತು. ಈ ಪ್ರಶ್ನೆಗೆ ಇದೀಗ ಚಿತ್ರತಂಡ ಉತ್ತರಿಸಿದ್ದು, ಸೆಪ್ಟೆಂಬರ್ 15ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಪ್ರಕಟಿಸಿತ್ತು. ಆದರೆ ಇದೀಗ ಈ ದಿನಾಂಕ ಸಹ ಮುಂದೂಡಲ್ಪಟ್ಟಿದ್ದು, ಬದಲಿ ದಿನಾಂಕವನ್ನು ಚಿತ್ರತಂಡ ಯಾವಾಗ ಪ್ರಕಟಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ನಿರ್ದೇಶಕ ಆರ್. ಚಂದ್ರು ಗರಡಿಯಲ್ಲಿ ಪಳಗಿದ ಜಯರಾಮ್ ಮಾಧವನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜರುಗುತ್ತಿವೆ. ಕೋವಿಡ್‌ಗೂ ಮುನ್ನವೇ ಈ ಸಿನಿಮಾ ಚಿತ್ರೀಕರಣವಾಗಿತ್ತು. ಆದರೆ ಸಿನಿಮಾ ಯಾಕೋ ಥಿಯೇಟರ್ ಕಡೆ ಮುಖ ಮಾಡಲಿಲ್ಲ. 'ಚಮಕ್, 'ಅಯೋಗ್ಯ' ಸಿನಿಮಾಗಳ ನಿರ್ಮಾಪಕ ಡಾ.ಟಿ.ಆರ್ ಚಂದ್ರಶೇಖರ್ 'ಬುದ್ದಿವಂತ- 2' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಈ ಹಿಂದೆ ಉಪೇಂದ್ರ ನಟನೆಯ ಬುದ್ಧಿವಂತ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ತಮಿಳಿನ ಸೂಪರ್ ಹಿಟ್ ಸಿನಿಮಾ 'ನಾನ್ ಅವನ್ ಇಲ್ಲೈ'ನ ರಿಮೇಕ್ ಆಗಿದ್ದ ಬುದ್ಧಿವಂತ ಸಿನಿಮಾವನ್ನು ಸಿನಿ ರಸಿಕರು ಮೆಚ್ಚಿ ಒಪ್ಪಿಕೊಂಡಿದ್ದರು.
ಹೀಗೆ ಅಂದು ನಾವು ವೀಕ್ಷಿಸಿದ್ದ ಬುದ್ಧಿವಂತ ಸಿನಿಮಾಗೂ ಈ ಚಿತ್ರಕ್ಕೂ ನಂಟಿದೆಯಾ, ಇದು ಆ ಚಿತ್ರದ ಸೀಕ್ವೆಲ್ಲಾ, ಚಿತ್ರದ ಕತೆ ಯಾವ ರೀತಿ ಇರಲಿದೆ ಎಂಬ ಕುತೂಹಲ ಹಾಗೂ ಪ್ರಶ್ನೆಗಳು ಸಿನಿ ರಸಿಕರನ್ನು ಕಾಡುತ್ತಿದ್ದು, ಈ ಪ್ರಶ್ನೆಗಳಿಗೆಲ್ಲಾ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ. ಹೀಗೆ ತಕ್ಕಮಟ್ಟಿಗೆ ಹೈಪ್ ಹೊಂದಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಎಸ್. ನವೀನ್ ಕುಮಾರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಜಾಗೂ ರವಿವರ್ಮ, ವಿಕ್ರಮ್ ಅವರ ಸಾಹಸ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











