ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
ಓಟಿಟಿನೋ, ಪ್ಯಾನ್ ಇಂಡಿಯಾ ಹುಚ್ಚೋ ಗೊತ್ತಿಲ್ಲ. ಕನ್ನಡ ಚಿತ್ರರಂಗ ಮಾತ್ರ ಸೊರಗುವಂತಾಗಿದೆ. ಚಿತ್ರಮಂದಿರಗಳ ಪ್ರೇಕ್ಷಕರ ಬರ ಎದುರಿಸುತ್ತಿವೆ. ಕೆಲವೆಡೆ ಪರಭಾಷಾ ಸಿನಿಮಾಗಳ ಹಾವಳಿ ಜೋರಾಗಿದೆ. ಸರಿಯಾದ ಆದಾಯ ಇಲ್ಲದೇ ಥಿಯೇಟರ್‌ಗಳನ್ನು ಮುಚ್ಚವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಪ್ರತಿವರ್ಷವೂ ಚಿತ್ರರಂಗದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೂ ನೂರಾರು ಸಿನಿಮಾಗಳು ಬಿಡುಗಡೆ ಆಗುತ್ತಲೇ ಇವೆ. ಹೊಸಬರು ಸಿನಿಮಾ ಕನಸು ಹೊತ್ತು ಚಿತ್ರರಂಗಕ್ಕೆ ಬರುತ್ತಲೇ ಇದ್ದಾರೆ. 200ಕ್ಕೂ ಹೆಚ್ಚು ಸಿನಿಮಾಗಳು ತೆರೆಗಪ್ಪಳಿಸಿದರೂ ಬೆರಳೆಣಿಕೆಯಷ್ಟು ಸಿನಿಮಾಗಳು ಗೆಲ್ಲುತ್ತಿವೆ. ಕೆಲ ಸಿನಿಮಾಗಳು ನಷ್ಟ ಅನುಭವಿಸದೇ ಬಚಾವಾಗುತ್ತಿವೆ. ಇನ್ನುಳಿದ ಬಹುತೇಕ ಸಿನಿಮಾಗಳ ಸೋತು ಸುಣ್ಣವಾಗುತ್ತಿವೆ.

ಆಗಾಗ್ಗೆ ದೊಡ್ಡ ಸಿನಿಮಾಗಳು ಬರದೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲ್ಲ, ಪ್ಯಾನ್ ಇಂಡಿಯಾ ಹಿಂದೆ ಬಿದ್ದವರು ವರ್ಷಕ್ಕೊಂದು ಅಥವಾ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಮೊದಲೇ ಕನ್ನಡ ಚಿತ್ರರಂಗದಲ್ಲಿರುವ ಸ್ಟಾರ್ ನಟರ ಸಂಖ್ಯೆ ಕಡಿಮೆ. ಮೊದಲ ದರ್ಜೆಯ ನಟರನ್ನು ಬಿಟ್ಟರೆ ಎರಡನೇ ದರ್ಜೆ ನಟರ ಅಭಾವ ಇದೆ. ಹಾಗಾಗಿ ಪ್ರೇಕ್ಷಕರನ್ನು ಸೆಳೆಯುವಂತಹ ಸಿನಿಮಾಗಳ ಸಂಖ್ಯೆ ದಿನೇ ದಿನೇ ಕಮ್ಮಿ ಆಗುತ್ತಿದೆ.
ಕೆಲ ಸ್ವಯಂಕೃತ ಅಪರಾಧಗಳಿಂದ ಕನ್ನಡ ಸಿನಿಮಾಗಳ ಓಟಿಟಿ, ಸ್ಯಾಟಲೈಟ್ ರೈಟ್ಸ್‌ಗೂ ಬೇಡಿಕೆ ಇಲ್ಲದಂತಾಗಿದೆ. ಇದೆಲ್ಲದರ ಪರಿಣಾಮ ದೊಡ್ಡ ನಿರ್ಮಾಪಕರು ಸಿನಿಮಾ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಂದಿಗೂ ಹೊಸ ಹೊಸ ನಿರ್ಮಾಪಕರೇ ಬಂಡವಾಳ ಹೂಡುತ್ತಿದ್ದಾರೆ. ಒಂದು ಎರಡು ಚಿತ್ರಕ್ಕೆ ಅವರು ಸುಸ್ತಾಗಿಬಿಡುತ್ತಾರೆ. ಸದ್ಯ ಐಪಿಎಲ್, ಎಲೆಕ್ಷನ್ ಭರಾಟೆ ಕಾರಣ ಎಲ್ಲಾ ಭಾಷೆಗಳಲ್ಲಿ ಕೂಡ ಸಿನಿಮಾ ಬಿಡುಗಡೆ ನಿಂತು ಹೋಗಿದೆ.
ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ', ಧ್ರುವ ಸರ್ಜಾ ನಟನೆಯ 'ಮಾರ್ಟಿನ್', ಸುದೀಪ್ 'ಮ್ಯಾಕ್ಸ್' ಹಾಗೂ ದುನಿಯಾ ವಿಜಯ್ 'ಭೀಮ' ಸಿನಿಮಾ ತೆರೆಕಂಡರೆ ಮತ್ತೆ ದೊಡ್ಡ ಸಿನಿಮಾಗಳಿಗಾಗಿ ತಿಂಗಳುಗಟ್ಟಲೆ ಕಾಯಬೇಕಿದೆ. ಯಶ್, ಸುದೀಪ್ ಸಿನಿಮಾಗಳು ಬಿಡುಗಡೆಯಾಗಿ 2 ವರ್ಷವೇ ಕಳೆದಿದೆ. 'ಮ್ಯಾಕ್ಸ್' ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎನ್ನುವುದು ಗೊತ್ತಿಲ್ಲ. 'ಟಾಕ್ಸಿಕ್' ಬಿಡುಗಡೆಗೆ ಇನ್ನು ವರ್ಷ ಕಾಯಬೇಕಿದೆ.

ಕನ್ನಡ ಚಿತ್ರಗಳ ಹಿನ್ನಡೆಗೆ ಕಾರಣ ಏನು? ಒಳ್ಳೆ ಸಿನಿಮಾಗಳು ನಿಯಮಿತವಾಗಿ ಯಾಕೆ ನಿರ್ಮಾಣವಾಗುತ್ತಿಲ್ಲ? ಎನ್ನುವ ಪ್ರಶ್ನೆಗಳು ಉದ್ಭವವಾಗುವುದು ಸಹಜ. ಕನ್ನಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ಕುಂಟು ನೆಪ ಹೇಳುತ್ತಾ ಕೂರುವುದು ಸರಿಯಲ್ಲ. ತಪ್ಪಾಗುತ್ತಿರುವುದು ಎಲ್ಲಿ? ಅದನ್ನು ಸರಿಪಡಿಸುವವರು ಯಾರು? ಈ ಜವಾಬ್ದಾರಿ ಹೊರುವವರು ಯಾರು? ಎನ್ನುವ ಚರ್ಚೆ ಕೂಡ ಬರುತ್ತದೆ.
ಸ್ಟಾರ್ ನಟರ ಸಂಭಾವನೆ, ಬೇಡಿಕೆಗಳು, ಪ್ರೊಡಕ್ಷನ್ ಕಾಸ್ಟ್ ಹೆಚ್ಚಾಗಿರುವುದು, ದಿಕ್ಕು ತಪ್ಪಿಸುವ ನಿರ್ದೇಶಕರೇ ಈ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಹೆಸರು ಹೇಳಲು ಇಚ್ಚಿಸದ ನಿರ್ಮಾಪಕರೊಬ್ಬರು ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಸ್ಟಾರ್ ನಟರು ಅಟ್ಟಕ್ಕೆ ಏರಿ ಕೂತಿದ್ದಾರೆ. ಅವರಿಗೆ ಅಷ್ಟು ಸಂಭಾವನೆ ಕೊಟ್ಟು ಸಿನಿಮಾ ಮಾಡುವುದು ಕಷ್ಟ. ಯಾರು ತಾವು ಕೇಳಿದ್ದಷ್ಟು ಸಂಭಾವನೆ ಕೊಡುತ್ತಾರೋ ಅವರಿಗೆ ಕಾಲ್‌ಶೀಟ್ ಕೊಡುತ್ತಾರೆ. ಹಿಂದೆ ಹೀಗೆ ಇರಲಿಲ್ಲ" ಎನ್ನುತ್ತಾರೆ.
"ಡಾ. ರಾಜ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್‌ರಂತಹ ನಟರು ಒಳ್ಳೆ ಸಿನಿಮಾ ಮಾಡಬೇಕು ಎನ್ನುತ್ತಿದ್ದರು. ಎಂದಿಗೂ ತಮ್ಮ ಸಂಭಾವನೆಯನ್ನು ದಿಢೀರನೆ ಹೆಚ್ಚಿಸಿಕೊಳ್ಳುತ್ತಿರಲಿಲ್ಲ. ಅಣ್ಣಾವ್ರು ನಿರ್ಮಾಪಕರನ್ನು ದೇವರು ಎನ್ನುತ್ತಿದ್ದರು. ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳಲು ಮೀನಾಮೇಷ ಎಣಿಸುತ್ತಿದ್ದರು. ಈಗ ಪರಿಸ್ಥಿತಿ ಆ ರೀತಿ ಇಲ್ಲ. ತಮ್ಮ ಸ್ಟಾರ್‌ಡಮ್‌ಗೆ ತಕ್ಕಂತೆ ಸಂಭಾವನೆ ಕೇಳುತ್ತಾರೆ. ಸರಿ ಕೋಡೋಣ, ಆದರೆ ಸಿನಿಮಾ ಸೋತರೇ ನಮ್ಮ ಗತಿಯೇನು?" ಎಂದು ಪ್ರಶ್ನಿಸುತ್ತಾರೆ.
"ನಿರ್ದೇಶಕರಿಂದಲೇ ಸಾಕಷ್ಟು ಬಾರಿ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕಥೆ ಹೇಳುವಾಗ ಒಂದು ಬಜೆಟ್ ಇರುತ್ತದೆ. ಹೋಗ್ತಾ ಹೋಗ್ತಾ ಅದು ಹಲವು ಪಟ್ಟು ಜಾಸ್ತಿ ಆಗುತ್ತದೆ. ಒಮ್ಮೆ ಸಿನಿಮಾ ಶುರು ಮಾಡಿದ ಮೇಲೆ ಅರ್ಧಕ್ಕೆ ನಿಲ್ಲಿಸಲು ಸಾಧ್ಯವಿಲ್ಲ. ಯಾಕಂದರೆ ಅದಾಗಲೇ ಹಾಕಿರುವ ಬಂಡವಾಳ ವ್ಯರ್ಥವಾಗುತ್ತದೆ. ಅದೇ ಕಾರಣಕ್ಕೆ ನಿರ್ಮಾಪಕರು ಎಲ್ಲಾ ಸಹಿಸಿಕೊಂಡು ಹಣ ತಂದು ಹಾಕುತ್ತಾರೆ. ಕನ್ನಡದಲ್ಲೇ ಒಂದು ದೊಡ್ಡ ಸಿನಿಮಾ ಬಜೆಟ್ ಎರಡು ಪಟ್ಟು ಹೆಚ್ಚಾಗಿದೆ. ಆ ಸಿನಿಮಾ ಗೆದ್ದರೆ ನಿರ್ಮಾಪಕರು ಬಚಾವ್, ಸೋತರೇ ದೇವರೇ ದಿಕ್ಕು" ಎನ್ನುತ್ತಾರೆ.
"ಸ್ಯಾಟಲೈಟ್, ಓಟಿಟಿ ರೈಟ್ಸ್ ದರ ಅರ್ಧಕರ್ಧ ಇಳಿದುಬಿಟ್ಟಿದೆ. ಹಾಗಾಗಿ ಆದಾಯದ ಆ ಮೂಲವೂ ಇಲ್ಲದಂತಾಗಿದೆ. ಕೆಲ ಸಿನಿಮಾ ರೈಟ್ಸ್ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಾರೆ. ಮೊದಲು ಸ್ಟಾರ್ ನಟರು ನಿರ್ಮಾಪಕರ ಬಳಿ ಎಲ್ಲಾ ಚರ್ಚಿಸುತ್ತಿದ್ದರು. ನಾವು ಹೇಳಿದಂತೆ ಕೇಳುತ್ತಿದ್ದರು. ನಟ, ನಿರ್ಮಾಪಕ, ನಿರ್ದೇಶಕರ ಒಟ್ಟಿಗೆ ಕೂತು ಮಾತನಾಡುತ್ತಿದ್ದೆವು. ಆದರೆ ಈ ಬರೀ ಡಿಮ್ಯಾಂಡ್‌ಗಳನ್ನು ಮಾತ್ರ ಇಡುತ್ತಾರೆ. ಅದನ್ನು ಪೂರೈಸುವುದು ಮಾತ್ರ ನಮ್ಮ ಕೆಲಸ, ನಷ್ಟವಾದರೆ ಕೇಳುವವರಿಲ್ಲ, ಬಜೆಟ್ ಕಮ್ಮಿಯಾಗದ ಹೊರತು ಲಾಭ ಕಷ್ಟ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











