ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಆತ್ಮಹತ್ಯೆಗೆ ಶರಣು
ಬೆಂಗಳೂರಿನಲ್ಲಿ ಉದ್ಯಮಿ ವೈಶಾಖ್(45) ಆತ್ಮ*ಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದಾರೆ. ಉದ್ಯಮಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಅವರು ಜೈಲು ಸೇರಿದ್ದರು. ನಟಿ ಕೃಷಿ ತಾಪಂಡ ಆಪ್ತ ಗೆಳೆಯನಾಗಿದ್ದ ವೈಶಾಖ್ ಆಕೆಯ ಮನೆಯಲ್ಲೇ ನಿನ್ನೆ ತಂಗಿದ್ದರು. ಬುಧವಾರ ರಾತ್ರಿ ನಟಿ ಕೃಷಿ ಅವರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು ಎಂದು ಗೊತ್ತಾಗಿದೆ.
ನಟಿ ಕೃಷಿ ತಾಪಂಡ ಒಡೆತನದ ರಾಜರಾಜೇಶ್ವರಿ ನಗರದ ಮನೆಯಲ್ಲಿ ವೈಶಾಖ್ ಬುಧವಾರ ರಾತ್ರಿ(ಜೂನ್ 24) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೈಶಾಖ್ ಹೇಳಿದ ಕೂಡಲೇ ಈ ವಿಚಾರವನ್ನು ಕೃಷಿ ಆತನ ಪೋಷಕರಿಗೆ ತಿಳಿಸಿದ್ದರು. ಇದೀಗ ವೈಶಾಖ್ ನೇಣು ಬಿಗಿದುಕೊಂದು ಜೀವ ಬಿಟ್ಟಿರುವುದು ಬೆಳಕಿಗೆ ಬಂದಿದ್ದು ಆರ್. ಆರ್ ನಗರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೃಷಿ ತಾಪಂಡ ಹಾಗೂ ವೈಶಾಖ್ ಆತ್ಮೀಯ ಸ್ನೇಹಿತರಾಗಿದ್ದರು. ಆಗಾಗ್ಗೆ ಕೃಷಿ ಅವರ ಮನೆಗೆ ವೈಶಾಖ್ ಬಂದು ಹೋಗುತ್ತಿದ್ದರು. ರಾತ್ರಿ 8.30ರ ಸುಮಾರಿಗೆ ನೇಣಿಗೆ ಶರಣಾಗಿರುವುದಾಗಿ ವರದಿಯಾಗಿದೆ. ವೈಶಾಖ್ ಅವರಿಗೆ ಈಗಾಗಲೇ ಮದುವೆಯಾಗಿದ್ದು 13 ವರ್ಷದ ಮಗು ಕೂಡ ಇದೆ. ಪದೇ ಪದೆ ಪತ್ನಿ ಜೊತೆ ಜಗಳ ಮಾಡಿಕೊಂಡು ಮನೆಗೆ ಹೋಗುತ್ತಿರಲಿಲ್ಲ. ಅದೇ ರೀತಿ ನಿನ್ನೆ ಕೃಷಿ ತಾಪಂಡ ಅವರ ಅಪಾರ್ಟ್‌ಮೆಂಟ್ ಫ್ಲಾಟ್‌ಗೆ ಹೋಗಿದ್ದರು. ಅಲ್ಲಿಂದಲೇ ನಟಿಗೆ ವೈಶಾಖ್ ಮೆಸೇಜ್ ಮಾಡಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.
ಜೀವನ ಸಾಕಾಗಿದೆ. ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಮೊದಲಿಗೆ ನಟಿ ಕೃಷಿ ಅವರಿಗೆ ವೈಶಾಕ್ ಮೆಸೇಜ್ ಕಳುಹಿಸಿದ್ದಾರೆ. ಅದನ್ನು ನೋಡಿ 'ಬೇಡ ಅಂತ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ' ಎಂದು ಕೃಷಿ ಸಮಾಧಾನ ಮಾಡಿದ್ದಾರೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗೋಣ ಎಂದಾಗಲೂ ಸರಿ ಹೋಗೋಣ ಎಂದು ಆಕೆ ಹೇಳಿದ್ದಾರೆ. ಆದರೆ ರಾತ್ರಿ 11.30ರ ಸುಮಾರಿಗೆ ಫ್ಲಾಟ್ ಒಳಗೆ ಹೋಗಿ ನೋಡಿದಾಗ ವೈಶಾಖ್ ಆತ್ಮಹತ್ಯೆ ವಿಚಾರ ಗೊತ್ತಾಗಿದೆ. ಆ ಫ್ಲಾಟ್‌ಗೆ ಎರಡು ಕೀ ಇದ್ದು ಒಂದು ನಟಿ ಕೃಷಿ ಬಳಿ ಇದ್ದರೆ ಮತ್ತೊಂದು ವೈಶಾಖ್ ಬಳಿ ಇತ್ತು. ವೈಶಾಖ್ ಮೊಬೈಲ್ ಫೋನ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ನಡೆದಾಗ ಕೃಷಿ ಮನೆಯಲ್ಲಿ ಇರಲಿಲ್ಲ. ಗಿರಿನಗರದ ನಿವಾಸಿ ವೈಶಾಖ್ ಕಾರ್ ಗ್ಯಾರೇಜ್ ಹಾಗೂ ಆಟೊಮೊಬೈಲ್ ಶಾಪ್ ಮಾಲೀಕರಾಗಿದ್ದರು. ಕೆಲ ದಿನಗಳ ಹಿಂದೆ ಉದ್ಯಮಿ ಒಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ವೈಶಾಖ್ ಬಂಧನವಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಆರ್‌ಆರ್ ನಗರದ ಎಲಿಗೆಂಟ್ ಟೆರೆಸ್ ಅಪಾರ್ಟ್‌ಮೆಂಟ್ ಕಟ್ಟಡದ 4ನೇ ಮಹಡಿಯ 401 ರೂಮ್‌ನಲ್ಲಿ ವೈಶಾಖ್ ಸಾವಿಗೆ ಶರಣಾಗಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಕೃಷಿ ತಾಪಂಡ ವಿರುದ್ಧ ಉದ್ಯಮಿ ಒಬ್ಬರು ಸಾಕಷ್ಟು ಆರೋಪ ಮಾಡಿದ್ದರು. ಆಕೆಯ ಮನೆಗೆ ಒಬ್ಬ ಉದ್ಯಮಿ ಆಗಾಗ್ಗೆ ಬರ್ತಾನೆ. ಅವನಿಂದಲೇ ನಮ್ಮಿಬ್ಬರ ಸಂಬಂಧ ಹಾಳಾಯ್ತು ಎಂದಿದ್ದರು. ಇದರ ಬೆನ್ನಲ್ಲೇ ವೈಶಾಖ್ ಆತ್ಮಹತ್ಯೆ ವಿಚಾರ ಸದ್ದು ಮಾಡ್ತಿದೆ.


Click it and Unblock the Notifications