ದರ್ಶನ್- ಜೋಗಿ ಪ್ರೇಮ್ ಬಾಯಲ್ಲಿ ಹನುಮಾನ್ ಚಾಲೀಸಾ; D58 ಟೈಟಲ್ ಅದೇನಾ?
ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮತ್ತೊಂದು ಉಡುಗೊರೆ ಅಭಿಮಾನಿಗಳಿಗೆ ಸಿಕ್ಕಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ದರ್ಶನ್ ನಟನೆಯ ಸಿನಿಮಾ ಥೀಮ್ ಪೋಸ್ಟರ್ ರಿವೀಲ್ ಆಗಿದೆ. ಸಣ್ಣ ಡೈಲಾಗ್ ಜೊತೆಗೆ ಹಂಟಿಂಗ್ ಬಿಜಿಎಂ ಮಿಕ್ಸ್ ಮಾಡಿ ಸ್ಪೆಷಲ್ ವಿಡಿಯೋ ಬಿಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಲಿದೆ.
ನಿರ್ಮಾಪಕ ವೆಂಕಟ್ ಕೋನಂಕಿ ಹುಟ್ಟುಹಬ್ಬದ ದಿನವೇ D58 ಸಿನಿಮಾ ಘೋಷಣೆ ಆಗಿತ್ತು. 'ಕರಿಯ' ಬಳಿಕ ದರ್ಶನ್- ಪ್ರೇಮ್ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಸಹಜವಾಗಿಯೇ ನಿರೀಕ್ಷೆ ಮೂಡಿಸಿದೆ. ಕೆಲ ದಿನಗಳ ಹಿಂದೆ ಸಣ್ಣ ಭಿನ್ನಾಭಿಪ್ರಾಯದಿಂದ ಇನ್ಮುಂದೆ ನಾನು ದರ್ಶನ್ ಅವರೊಟ್ಟಿಗೆ ಸಿನಿಮಾ ಮಾಡುವುದಿಲ್ಲ ಎಂದು ಪ್ರೇಮ್ ಹೇಳಿಬಿಟ್ಟಿದ್ದರು. ಆದರೆ ರಕ್ಷಿತಾ ಪ್ರೇಮ್ ಈ ಭಿನ್ನಾಭಿಪ್ರಾಯ ಶಮನ ಮಾಡಿದ್ದರು.

ಬಹಳ ಹಿಂದಿನಿಂದಲೂ ದರ್ಶನ್ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು. 7 ವರ್ಷಗಳ ಹಿಂದೆಯೇ 'ಆಂಜನೇಯ' ಎನ್ನುವ ಟೈಟಲ್‌ನಲ್ಲಿ ಇಬ್ಬರೂ ಸಿನಿಮಾ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಬಳಿಕ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿ ಆ ಸಿನಿಮಾ ವಿಚಾರ ತಣ್ಣಗಾಗಿತ್ತು.
'ದಿ ವಿಲನ್' ಸಿನಿಮಾ ಚಿತ್ರೀಕರಣದ ಸಮಯದಲ್ಲೂ 'ಆಂಜನೇಯ' ಸಿನಿಮಾ ಬಗ್ಗೆ ಊಹಾಪೋಹ ಶುರುವಾಗಿತ್ತು. ಆದರೆ ಬಳಿಕ ಅದನ್ನು ಎಲ್ಲರೂ ಮರೆತುಬಿಟ್ಟಿದ್ದರು. ಸದ್ಯ ಬಿಡುಗಡೆಯಾಗಿರುವ ಥೀಮ್ ವಿಡಿಯೋ ಭಾರೀ ಕುತೂಹಲ ಮೂಡಿಸಿದೆ. "ನನ್ ಉಸಿರು ಇರೋವರೆಗೂ ಈ ಭೂಮಿ ಮೇಲೆ ನಿಂದು ಒಂದು ಹನಿ ರಕ್ತ ಬಿಳೋಕು ಬಿಡಲ್ಲ" ಎನ್ನುವ ದರ್ಶನ್ ಖಡಕ್ ಡೈಲಾಗ್‌ನಿಂದ ಗ್ಲಿಂಪ್ಸ್ ಸದ್ದು ಮಾಡ್ತಿದೆ.
ಆಂಜನೇಯ ಗದೆ ಹಿಡಿದು ಶ್ರೀರಾಮ ಮಂದಿರದತ್ತ ಹೊರಟು ನಿಂತಂತೆ ಥೀಮ್ ವಿಡಿಯೋ ರಿವೀಲ್ ಆಗಿದೆ. ಚಿತ್ರದಲ್ಲಿ ದರ್ಶನ್ ಪಾತ್ರ ಹನುಮಂತನಂತೆ ಬಹಳ ಬಲಶಾಲಿ ಎನ್ನುವುದನ್ನು ಈ ಮೂಲಕ ಹೇಳಲಾಗಿದೆ. ಆದರೆ ಸಿನಿಮಾ ಜಾನರ್ ಯಾವುದು ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. ಸದ್ಯ ಅಭಿಮಾನಿಗಳು ಸಿನಿಮಾ ಕಥೆ ಏನು? ಎಂದು ತಲೆಕೆಡಿಸಿಕೊಂಡಿದ್ದಾರೆ. ಇದು ಐತಿಹಾಸಿಕ ಸಿನಿಮಾ? ಪೌರಾಣಿಕನಾ? ಇಲ್ಲ ಕಮರ್ಷಿಯಲ್ ಸಿನಿಮಾ? ಎಂದು ಗೊಂದಲಕ್ಕೀಡಾಗಿದ್ದಾರೆ.
ಥೀಮ್ ವಿಡಿಯೋದಲ್ಲಿ ರಾಮ- ಹನುಮರ ಪ್ರಸ್ತಾಪ ಇದ್ದರೂ ಇದು ಪೌರಾಣಿಕ ಕಥೆ ಅಲ್ಲ ಅನ್ನೋದು ಕೆಲವರು ಲೆಕ್ಕಾಚಾರ. ಇನ್ನು ಚಿತ್ರಕ್ಕೆ ನಿಜವಾಗಿಯೂ 'ಆಂಜನೇಯ' ಎನ್ನುವ ಟೈಟಲ್ ಫಿಕ್ಸ್ ಮಾಡ್ತಾರಾ? ಅಥವಾ ಬೇರೆ ಏನಾದರೂ ಹೊಸ ಟೈಟಲ್ ಬರುತ್ತಾ ಕಾದು ನೋಡಬೇಕು. ಇದು ಬರೀ ಥೀಮ್ ವಿಡಿಯೋ. ಇನ್ನು ಟೀಸರ್‌ನಲ್ಲಿರೋ ಡೈಲಾಗ್ ನಾಯಕ ತನ್ನವರಿಗಾಗಿ ಯಾರನ್ನು ಬೇಕಾದರೂ ಎದುರಾಕಿಕೊಳ್ಳಲು, ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳಲಾಗಿದೆ.
D58 ಸಿನಿಮಾ ಮುಂದಿನ ವರ್ಷ ತೆರೆಗಪ್ಪಳಿಸುತ್ತದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಸದ್ಯ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸಲಿದ್ದಾರೆ. ಮಿಲನಾ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಟೀಸರ್ ಕೂಡ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮತ್ತೊಂದು ಕಡೆ ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆ ಸಿನಿಮಾ ಬಳಿಕವೇ ದರ್ಶನ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

'ಕೆಡಿ' ಚಿತ್ರದ ಮೂಲಕ ಪ್ರೇಮ್ ಪ್ಯಾನ್ ಇಂಡಿಯಾ ಸಾಹಸಕ್ಕೆ ಹೊರಟಿದ್ದಾರೆ. ಹಾಗಾಗಿ D58 ಸಿನಿಮಾ ಕೂಡ 5 ಭಾಷೆಗಳಲ್ಲಿ ತೆರೆಗೆ ಬರುತ್ತದಾ? ಎನ್ನುವ ಲೆಕ್ಕಾಚಾರ ಶುರುವಾಗಿದೆ. ಆದರೆ ದರ್ಶನ್ ಮಾತ್ರ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಮುಂದೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











