ಆ ವಿಶೇಷ ದಿನದಂದು 'ಕಾಟೇರ' ಅದ್ಧೂರಿ ಟ್ರೈಲರ್ ಲಾಂಚ್ ಈವೆಂಟ್ : ಎಲ್ಲಿ, ಯಾವಾಗ?
'ಕಾಟೇರ' ಚಿತ್ರದ 'ಪಸಂದಾಗವನೆ' ಹಾಡು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ಒಂದು ಕೋಟಿಗೂ ಅಧಿಕ ವೀವ್ಸ್ ಸಾಧಿಸಿ ದಾಖಲೆ ಬರೆದಿದ್ದಾರೆ. ರೊಮ್ಯಾಂಟಿಕ್ ಸಾಂಗ್‌ವೊಂದಕ್ಕೆ ಈ ಮಟ್ಟಿಗಿನ ಪ್ರತಿಕ್ರಿಯೆ ಸಿಕ್ಕಿರುವುದು ವಿಶೇಷ. ಡಿಸೆಂಬರ್ 29ಕ್ಕೆ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಹಳ ಅದ್ಧೂರಿಯಾಗಿ ತೆರೆಗಪ್ಪಳಿಸುತ್ತಿದೆ.
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ದರ್ಶನ್ ಹಳ್ಳಿ ಹೈದನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಮಿಂಚಿದ್ದಾರೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಶ್ರುತಿ, ಕುಮಾರ್ ಗೋವಿಂದ್, ಬಿರಾದರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇತ್ತೀಚೆಗೆ ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಿ ಸರ್‌ಪ್ರೈಸ್ ನೀಡಿತ್ತು ಚಿತ್ರತಂಡ.

ಕಳೆದ ಮೂರ್ನಾಲ್ಕು ದಿನಗಳಿಂದ ಚಿತ್ರದ ಮೊದಲ ಹಾಡು 'ಪಸಂದಾಗವನೆ' ರಿಲೀಸ್ ಆಗಿ ಸದ್ದು ಮಾಡ್ತಿದೆ. ವಿ. ಹರಿಕೃಷ್ಣ ಸಂಗೀತ, ಚೇತನ್ ಕುಮಾರ್ ಸಾಹಿತ್ಯ ಹಾಗೂ ಮಂಗ್ಲಿ ಗಾಯನದ ಹಾಡು ಅಭಿಮಾನಿಗಳಿಗೆ ಇಷ್ಟವಾಗಿದೆ. ಪದೇ ಪದೆ ಕೇಳಿ ಖುಷಿಪಡುತ್ತಿದ್ದಾರೆ. ಕೆಲವರು ರೀಲ್ಸ್ ಮಾಡಿ ಶೇರ್ ಮಾಡುತ್ತಿದ್ದಾರೆ. ಚಿತ್ರದಲ್ಲಿ 70ರ ದಶಕದ ಹಳ್ಳಿ ಕತೆಯನ್ನು ತರುಣ್ ಕಟ್ಟಿಕೊಡುತ್ತಿದ್ದಾರೆ.
'ಕಾಟೇರ' ರಿಲೀಸ್ ಡೇಟ್ ಘೋಷಣೆ ಆಗುತ್ತಿದ್ದಂತೆ ಒಂದು ತಿಂಗಳಲ್ಲಿ ಪ್ರಚಾರ ಮಾಡೋಕೆ ಸಾಧ್ಯಾನಾ? ಎಂದು ಕೆಲವರು ಕೇಳಿದ್ದರು. ನಾವು ಮಾಡಿ ತೋರಿಸುತ್ತೇವೆ ಎಂದು ಚಿತ್ರತಂಡ ಹೇಳಿತ್ತು. ಅದರಂತೆ ಮೊದಲ ಸಾಂಗ್ ರಿಲೀಸ್ ಆಗಿದೆ. ಅದಕ್ಕೆ ಸಿಕ್ಕ ರೆಸ್ಪಾನ್ಸ್ ತಂಡದ ಉತ್ಸಾಹ ಹೆಚ್ಚಿಸಿದೆ. ಮುಂದಿನ 3 ವಾರಗಳಲ್ಲಿ ಇನ್ನುಳಿದ ಹಾಡುಗಳು ರಿಲೀಸ್ ಆಗಲಿವೆ. ಟ್ರೈಲರ್ ಲಾಂಚ್‌ಗೆ ದೊಡ್ಡಮಟ್ಟದಲ್ಲೇ ತಯಾರಿ ನಡೀಯಿದೆ.
ಡಿಸೆಂಬರ್ 23ಕ್ಕೆ ರೈತರ ದಿನದ ವಿಶೇಷವಾಗಿ ಮಂಡ್ಯದಲ್ಲಿ 'ಕಾಟೇರ' ಟ್ರೈಲರ್ ಲಾಂಚ್ ಮಾಡುವ ಪ್ರಯತ್ನಗಳು ನಡೀತಿದೆಯಂತೆ. ಇದೇ ವಿಚಾರ ಈಗ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಹಿಂದೆ 'ಕ್ರಾಂತಿ' ಚಿತ್ರದ ಹಾಡುಗಳನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದರು. 'ಕಾಟೇರ' ಪ್ರಚಾರಕ್ಕೂ ಇದೇ ತಂತ್ರ ಅನುಸರಿಸುವ ಸಾಧ್ಯೆತೆಯಿದೆ.
'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಹಿನ್ನೆಲೆಯಲ್ಲಿ 'ಕಾಟೇರ' ಸಿನಿಮಾ ನಿರ್ಮಾಣವಾಗಿದೆ. 70ರ ದಶಕದ ಹಳ್ಳಿ ಜನರ ನೋವು ನಲಿವಿನ ಕತೆ ಚಿತ್ರದಲ್ಲಿದೆ. ಹಾಗಾಗಿ ಟ್ರೈಲರ್ ಬಿಡುಗಡೆಗೆ ರೈತರ ದಿನವೇ ಉತ್ತಮ ಎಂದು ಚಿತ್ರತಂಡ ನಿರ್ಧರಿಸಿದೆಯಂತೆ. ಮಂಡ್ಯದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ನಡೆಸಿ ಅಭಿಮಾನಿಗಳ ನಡುವೆ ಇಡೀ ಚಿತ್ರತಂಡ ಟ್ರೈಲರ್ ಲಾಂಚ್ ಮಾಡುವ ಬಗ್ಗೆ ಗುಸುಗುಸು ಶುರುವಾಗಿದೆ.
ನೈಜ ಘಟನೆಗಳನ್ನು ಆಧರಿಸಿ 'ಕಾಟೇರ' ಸಿನಿಮಾ ಮಾಡಿರುವುದಾಗಿ ಹೇಳಲಾಗ್ತಿದೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಕನಕಪುರ, ಮಂಡ್ಯ, ಹೈದರಾಬಾದ್ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಹಳ್ಳಿಯೊಂದರ ಸೆಟ್ ಹಾಕಿ ಮುಖ್ಯ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.
ಜಡೇಶ್ ಕುಮಾರ್ ಜೊತೆ ಸೇರಿ 'ಕಾಟೇರ' ಕತೆ ಸಿದ್ಧಪಡಿಸಿರುವ ತರುಣ್, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಸುಧಾಕರ್ ರಾಜು ಛಾಯಾಗ್ರಹಣ ಹಾಗೂ ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಮಾಮೂಲಿ ಕಮರ್ಷಿಯಲ್ ಸಿನಿಮಾಗಳನ್ನು ಪಕ್ಕಕ್ಕಿಟ್ಟು ದರ್ಶನ್ ಬಹಳ ದಿನಗಳ ಬಳಿಕ ಪ್ರಯೋಗಾತ್ಮಕ ಸಿನಿಮಾ ಮಾಡಿದ್ದಾರೆ.
'ಸಲಾರ್' ಹಾಗೂ 'ಡಂಕಿ' ಸಿನಿಮಾಗಳು ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿವೆ. ಅದರ ಬೆನ್ನಲ್ಲೇ 'ಕಾಟೇರ' ಸಿನಿಮಾ ತೆರೆಗಪ್ಪಳಿಸಲಿದೆ. ಬಾಕ್ಸಾಫೀಸ್ ಕ್ಲ್ಯಾಶ್ ಆಗುತ್ತಾ? ಥಿಯೇಟರ್‌ಗಳು ಸಿಗುತ್ತಾ? ಇಲ್ವಾ? ಎನ್ನುವ ಗೊಂದಲದ ನಡುವೆ ಚಿತ್ರತಂಡ ಮಾತ್ರ 'ಕಾಟೇರ' ಸಿನಿಮಾವನ್ನು ನೆಚ್ಚಿಕೊಂಡಿದೆ.


Click it and Unblock the Notifications











