'ಟಾಕ್ಸಿಕ್' ಡಬ್ಕಿ ಡಬಲ್ ನ್ಯೂಸ್; ಚಿತ್ರರಂಗದಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ ಟೀಂ
ಗೀತು ಮೋಹನ್ ದಾಸ್ ನಿರ್ದೇಶನ 'ಟಾಕ್ಸಿಕ್' ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರ್ತಿದೆ. ಅದರಲ್ಲೂ ಸ್ಟಾರ್ ಕಾಸ್ಟರ್ ಬಗ್ಗೆ ಭಾರೀ ಗೊಂದಲವಿದೆ. ಬರೀ ಅಂತೆಕಂತೆ, ಊಹಾಪೋಹ ಸುದ್ದಿಗಳದ್ದೇ ಕಾರುಬಾರು. ಚಿತ್ರಕ್ಕೆ ಕರೀನಾ ಕಪೂರ್ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಬಳಿಕ ಆಕೆ ಹೊರ ಬಂದಿದ್ದಾರೆ ಎನ್ನಲಾಗ್ತಿದೆ.
ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ನಾಯಕನ ಸಹೋದರಿ ಪಾತ್ರಕ್ಕೆ ಬಹಳ ಮಹತ್ವ ಇದೆ ಎನ್ನಲಾಗ್ತಿದೆ. ಹಾಗಾಗಿ ಆ ಪಾತ್ರ ಯಾರು ಮಾಡ್ತಾರೆ ಎನ್ನುವ ಎನ್ನುವ ಕುತೂಹಲವಿದೆ. ಕರೀನಾ ಕಪೂರ್ ನಟಿಸೋಕೆ ಆಸಕ್ತಿ ತೋರಿದ್ದರು. ಆದರೆ ಬಳಿಕ ಡೇಟ್ಸ್ ಸಮಸ್ಯೆಯಿಂದ ನೋ ಎಂದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸಂಭಾವನೆ ವಿಚಾರಕ್ಕೆ ಆಕೆ ಹಿಂದಡಿ ಇಟ್ಟಿದ್ದಾರೆ ಎನ್ನುವ ವಾದವೂ ಇದೆ.

ಅಂದಹಾಗೆ ಈ ಪಾತ್ರಕ್ಕೆ ಮೊದಲು ಚಿತ್ರತಂಡ ಐಶ್ವರ್ಯ ರೈ ನಟಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡಿತ್ತಂತೆ. ಆಕೆಯನ್ನು ಸಂಪರ್ಕಿಸಿದ್ದರಂತೆ. ಆದರೆ ಆಕೆ ಸರಿಯಾಗಿ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ತಂಡ ಕರೀನಾ ಕಪೂರ್ ಕಡೆ ಮುಖ ಮಾಡಿತ್ತು. ಆಕೆ ಕೂಡ ಸಾಧ್ಯವಿಲ್ಲ ಎಂದಮೇಲೆ ತಮಿಳು ನಟಿ ನಯನತಾರಾ ಹೆಸರು ಚಾಲ್ತಿಗೆ ಬಂದಿತ್ತು. ಈಗಾಗಲೇ ಕನ್ನಡದ 'ಸೂಪರ್' ಚಿತ್ರದಲ್ಲಿ ನಟಿಸುವ ನಯನ್ ಮತ್ತೆ ಸ್ಯಾಂಡಲ್‌ವುಡ್ ಬರ್ತಾರೆ ಎಂದು ಕೆಲವರು ಊಹಿಸಿದ್ದರು.
ಕರೀನಾ ಕಪೂರ್ ಮಾಡಬೇಕಿದ್ದ ಪಾತ್ರವನ್ನು ಮತ್ತೊಬ್ಬ ನಟಿ ಹುಮಾ ಖುರೇಷಿ ಮಾಡುವುದು ಖಚಿತ ಎನ್ನಲಾಗ್ತಿದೆ. ಬಾಲಿವುಡ್ ಮಾಧ್ಯಮಗಳಲ್ಲಿ ಈ ರೀತಿ ವರದಿಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. 'ಗ್ಯಾಂಗ್ಸ್ ಆಫ್ ವಸ್ಸೇಪುರ್', 'ಡಿ-ಡೇ', 'ಬದ್ಲಾಪುರ್', 'ಹೈವೇ', 'ಕಾಲಾ' ರೀತಿಯ ಹಿಟ್ ಸಿನಿಮಾಗಳಲ್ಲಿ ಹುಮಾ ನಟಿಸಿದ್ದಾರೆ. ಈಕೆ 'ಟಾಕ್ಸಿಕ್' ಚಿತ್ರದಲ್ಲಿ ನಟಿಸೋಕೆ ಪಕ್ಕಾ ಎಂದು ಹೇಳಲಾಗುತ್ತಿದೆ.
ಹುಮಾ ಖುರೇಶಿ ಇನ್‌ಸ್ಟಾಗ್ರಾಮ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಅದನ್ನು ತೋರಿಸಿ ಆಕೆ 'ಟಾಕ್ಸಿಕ್' ಚಿತ್ರದಲ್ಲಿ ನಟಿಸೋದು ಖಚಿತ ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಇನ್ನು 'ಟಾಕ್ಸಿಕ್' ಚಿತ್ರದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ನ್ಯೂಸ್ ಕೇಳಿಬರ್ತಿದೆ. ಸಾಮಾನ್ಯವಾಗಿ ಒಂದೇ ಕಥೆಯನ್ನು 2 ಭಾಗಗಳಾಗಿ ತೆರೆಗೆ ತರುವುದು ನೋಡಿದ್ದೇವೆ. ಆದರೆ ಒಂದೇ ಚಿತ್ರವನ್ನು 2 ಬೇರೆ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲು ಚಿತ್ರತಂಡ ಮುಂದಾಗಿದೆಯಂತೆ.

'ಟಾಕ್ಸಿಕ್' ಬರೀ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಹೇಳಲಾಗುತ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಸಹ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಹಾಗಾಗಿ ಗ್ಲೋಬರ್ ಆಡಿಯನ್ಸ್‌ನ ಮನದಲ್ಲಿಟ್ಟುಕೊಂಡು 2 ಬೇರೆ ಬೇರೆ ವರ್ಷನ್‌ಗಳಲ್ಲಿ ಚಿತ್ರವನ್ನು ನಿರ್ಮಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಭಾರತದ ಭಾಷೆಗಳಿಗೆ ಹಾಡುಗಳ ಜೊತೆಗೆ ಒಂದು ವರ್ಷನ್, ಅದೇ ರೀತಿ ವಿದೇಶದ ಭಾಷೆಗಳಿಗೆ ಮತ್ತೊಂದು ವರ್ಷನ್ ಸಿನಿಮಾ ಕಟ್ಟಿಕೊಡುತ್ತಾರೆ ಎನ್ನಲಾಗ್ತಿದೆ.
ದಕ್ಷಿಣದ ಸಿನಿಮಾಗಳು ಈಗ ಬೇರೆ ದೇಶಗಳಲ್ಲಿ ಹೆಚ್ಚು ಹೆಚ್ಚು ಬಿಡುಗಡೆ ಆಗುತ್ತಿವೆ. ಜಪಾನ್, ಚೀನಾ ದೇಶಗಳಲ್ಲಿ ಕೂಡ ಕನ್ನಡ ಸಿನಿಮಾಗಳು ಸದ್ದು ಮಾಡ್ತಿದೆ. ಜಪಾನ್‌ನಲ್ಲಿ ಇತ್ತೀಚೆಗೆ 'KGF' ಸರಣಿ ಸಿನಿಮಾಗಳು ಬಿಡುಗಡೆ ಆಗಿತ್ತು. ರಾಕಿಭಾಯ್ ಆರ್ಭಟಕ್ಕೆ ಜಪಾನೀಸ್ ಪ್ರೇಕ್ಷಕರು ಥ್ರಿಲ್ಲಾಗಿದ್ದರು. ಇದನ್ನೆಲ್ಲಾ ಮನದಲ್ಲಿಟ್ಟುಕೊಂಡು ಚಿತ್ರತಂಡ ಈ ಪ್ಲ್ಯಾನ್ ಮಾಡ್ತಿದೆ ಎನ್ನುವ ವಾದ ಕೆಲವರದ್ದು. ಹಾಗಾಗಿ ಒಂದು ಪ್ಯಾನ್ ಇಂಡಿಯಾ ಮತ್ತೊಂದು ಇಂಟರ್‌ನ್ಯಾಷನಲ್ ವರ್ಷನ್ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ.


Click it and Unblock the Notifications











