ಮತ್ತೊಂದು ತಮಿಳು ಚಿತ್ರದಲ್ಲಿ ಉಪೇಂದ್ರ ನಟನೆ; ಹೀರೊ, ನಿರ್ದೇಶಕ ಯಾರು?
ಕನ್ನಡ ಕಲಾವಿದರಿಗೆ ಕನ್ನಡಕ್ಕಿಂತ ಪರಭಾಷೆ ಮೇಲೆ ಪ್ರೀತಿ ಹೆಚ್ಚಾಗುತ್ತಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗುತ್ತಿದ್ದಂತೆ ಅಕ್ಕ ಪಕ್ಕದ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. ಕಳೆದ ವರ್ಷ ರಜನಿಕಾಂತ್ ಜೊತೆ 'ಕೂಲಿ' ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ಇದೀಗ ಮತ್ತೊಂದು ತಮಿಳು ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ರಿಯಲ್ ಸ್ಟಾರ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದ. ಅಥರ್ವ ನಟನೆಯ ಚಿತ್ರಕ್ಕೆ ಕಾರ್ತಿಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂದಿನ ತಿಂಗಳು ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಅದೇ ಚಿತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ಮುಖ್ಯವಾದ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂದು ಹೇಳಲಾಗ್ತಿದೆ.

ಉಪೇಂದ್ರ ಅವರಿಗೆ ತಮಿಳು ಚಿತ್ರರಂಗ ಹೊಸದೇನು ಅಲ್ಲ. ದಶಕಗಳ ಹಿಂದೆಯೇ ಅವರು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. 2008ರಲ್ಲಿ ವಿಶಾಲ್ ನಟನೆಯ 'ಸೆಲ್ಯೂಟ್' ಎಂಬ ತಮಿಳು ಚಿತ್ರದಲ್ಲಿ ಉಪ್ಪಿ ಬಣ್ಣ ಹಚ್ಚಿದ್ದರು. ತೆಲುಗಿಗೂ ಈ ಸಿನಿಮಾ ಡಬ್ ಆಗಿ ಬಿಡುಗಡೆ ಆಗಿತ್ತು. 15 ವರ್ಷಗಳ ಬಳಿಕ 'ಕೂಲಿ' ಸಿನಿಮಾ ಮೂಲಕ ಮತ್ತೆ ಕಾಲಿವುಡ್ ಪ್ರವೇಶಿಸಿದ್ದರು.
ರಜನಿಕಾಂತ್ ಜೊತೆಗೆ ಕಲೀಶಾ ಎಂಬ ಖಡಕ್ ಪಾತ್ರದಲ್ಲಿ ಉಪ್ಪಿ ನಟಿಸಿ ಗಮನ ಸೆಳೆದಿದ್ದರು. ಕನ್ನಡದಲ್ಲಿ ಮೂರ್ನಾಲ್ಕು ಸಿನಿಮಾಗಳು ರಿಯಲ್ ಸ್ಟಾರ್ ಕೈಯಲ್ಲಿವೆ. ಕೊನೆಯದಾಗಿ '45' ಸಿನಿಮಾ ಮೂಲಕ ಅವರು ಪ್ರೇಕ್ಷಕರ ಮುಂದೆ ಬಂದಿದ್ದರು. ನಾಗಣ್ಣ ನಿರ್ದೇಶನದ 'ಭಾರ್ಗವ' ಎಂಬ ಚಿತ್ರದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. 'ಗೆರಿಲ್ಲಾ ವಾರ್' ಹಾಗೂ 'ನೆಕ್ಸ್ಟ್ ಲೆವೆಲ್' ಎಂಬ ಸಿನಿಮಾಗಳು ಘೋಷಣೆಯಾಗಿದೆ.

ಮತ್ತೊಂದು ಕಡೆ ಉಪ್ಪಿ ನಟನೆಯ 'ಬುದ್ಧಿವಂತ- 2' ಹಾಗೂ 'ತ್ರಿಶೂಲಂ' ಚಿತ್ರಗಳು ಬಿಡುಗಡೆಯಾಗದೇ ಡಬ್ಬಾ ಸೇರಿವೆ. ಉಪೇಂದ್ರ ಮತ್ತೆ ಆಕ್ಷನ್ ಕಟ್ ಹೇಳಬೇಕು ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಪ್ರಜಾಕೀಯ ಪಕ್ಷವನ್ನು ಮುನ್ನಡೆಸುತ್ತಿರುವ ಉಪ್ಪಿ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎನ್ನುವ ಕೂಗು ಹೆಚ್ಚಾಗುತ್ತಿದೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಕೆಲ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರೊಟ್ಟಿಗೆ ಉಪೇಂದ್ರ ಕೈ ಜೋಡಿಸುತ್ತಿರುವುದು ಕುತೂಹಲ ಮೂಡಿಸಿದೆ.
ರಜನಿಕಾಂತ್ ನಟನೆ 'ಪೇಟಾ' ಚಿತ್ರಕ್ಕೂ ಕಾರ್ತಿಕ್ ಆಕ್ಷನ್ ಕಟ್ ಹೇಳಿದ್ದರು. 'ಪಿಜ್ಜಾ', 'ಜಿಗರ್‌ಥಂಡಾ', 'ರೆಟ್ರೋ' ರೀತಿಯ ಸಿನಿಮಾಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. 'ಮೇಯರ್ ಮುತ್ತಣ್ಣ', 'ಬಂಗಾರದ ಮನುಷ್ಯ', 'ಭೂತಯ್ಯನ ಮಗ ಅಯ್ಯು' ರೀತಿಯ ಅದ್ಭುತ ಸಿನಿಮಾಗಳ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮೊಮ್ಮಗ ಅಥರ್ವ ತಮಿಳು ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಅವರ ಜೊತೆ ಉಪೇಂದ್ರ ನಟಿಸುತ್ತಿರುವುದು ವಿಶೇಷ. ಚಿತ್ರದಲ್ಲಿ ಬಹಳ ಮುಖ್ಯವಾದ ಪಾತ್ರವೇ ಸಿಕ್ಕಿದೆ ಎನ್ನಲಾಗ್ತಿದೆ.
'ಪರಾಶಕ್ತಿ' ಚಿತ್ರದಲ್ಲಿ ಕೊನೆಯದಾಗಿ ಅಥರ್ವ ನಟಿಸಿದ್ದರು. ಕಾರ್ತಿಕ್ ಸುಬ್ಬರಾಜ್ ಹಾಗೂ ಅಥರ್ವ ಕಾಂಬಿನೇಷನ್ ಚಿತ್ರಕ್ಕ ಇಳಯರಾಜಾ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕಿ ಗುನೀತ್ ಮೊಂಗ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಏಳೆಂಟು ವರ್ಷಗಳಿಂದ ಒಂದೊಳ್ಳೆ ಬ್ರೇಕ್‌ಗಾಗಿ ಉಪ್ಪಿ ಕಾಯುತ್ತಿದ್ದಾರೆ. 'ಐ ಲವ್ ಯು' ಬಳಿಕ ಅವರು ನಟಿಸಿದ ಯಾವುದೇ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಸ್ವತಃ ನಿರ್ದೇಶಿಸಿ ನಟಿಸಿದ 'ಯುಐ' ಚಿತ್ರ ಸಹ ಕೈ ಹಿಡಿಯಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ 'ಕಬ್ಜ' ಚಿತ್ರ ಮುಗ್ಗರಿಸಿತ್ತು. ತೆಲುಗಿನಲ್ಲಿ ನಟಿಸಿದ 'ಆಂಧ್ರ ಕಿಂಗ್ ತಾಲೂಕ' ಸಿನಿಮಾ ಬಂದು ಹೋಗಿದ್ದು ಗೊತ್ತಾಗಲಿಲ್ಲ. ಅಭಿಮಾನಿಗಳಂತೂ ಉಪ್ಪಿ ಸ್ಟೈಲ್ ಸಿನಿಮಾ ನೋಡಲು ಕಾಯ್ತಿದ್ದಾರೆ.


Click it and Unblock the Notifications