ಯುವ 2ನೇ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ, 'ಎಕ್ಕ ರಾಜ ರಾಣಿ' ಚಿತ್ರದ ಟೈಟಲ್?
ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಯುವ 02' ಸಿನಿಮಾ ಬರುತ್ತದೆ ಎನ್ನುವ ಚರ್ಚೆ ಕಳೆದ ಮೂರ್ನಾಲ್ಕು ದಿನಗಳಿಂದ ಜೋರಾಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಚಿತ್ರದ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಣ್ಣಾವ್ರ ಮೊಮ್ಮಗನ 2ನೇ ಸಿನಿಮಾ ಬಗ್ಗೆ ದೊಡ್ಮನೆ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ.
ಎರಡು ದಿನಗಳ ಹಿಂದೆಯಷ್ಟೆ ತಮ್ಮ 2ನೇ ಸಿನಿಮಾ ಬಗ್ಗೆ ಯುವ ರಾಜ್‌ಕುಮಾರ್ ಸುಳಿವು ನೀಡಿದ್ದರು. ಶೀಘ್ರದಲ್ಲೆ 'ಯುವ 02' ಅಪ್‌ಡೇಟ್ ಸಿಗುತ್ತೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ತಮ್ಮ ಮನೆಯ ಹೀರೊ ಜೊತೆಗೆ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಆ ಸಿನಿಮಾ ಯಾವ್ದು? ಟೈಟಲ್ ಏನು? ನಿರ್ದೇಶಕರು ಯಾರು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.

ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಮಾಡುವ ಶೈಲಿಯೇ ಬದಲಾಗಿದೆ. ಸಕ್ಸಸ್ ಸೂತ್ರ ಗೊತ್ತಿಲ್ಲದೇ ಒಳ್ಳೆ ಸಿನಿಮಾ ಮಾಡಲು ಹೆಣಗಾಡುವಂತಾಗಿದೆ. ಸ್ಟಾರ್ ನಿರ್ದೇಶಕರು, ಹೀರೊ ಜೊತೆಯಾದರೆ ಒಂದು ಹಂತಕ್ಕೆ ಸಿನಿಮಾ ಕ್ರೇಜ್ ಹುಟ್ಟು ಹಾಕುತ್ತದೆ. ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವುದರಿಂದ ಪ್ರೇಕ್ಷಕರ ನಿರೀಕ್ಷೆ ಹೆಚ್ಚುತ್ತಲೇ ಇರುವುದರಿಂದ ಒಳ್ಳೆ ಕಥೆ, ಮೇಕಿಂಗ್, ಸ್ಟಾರ್‌ಕಾಸ್ಟರ್ ಬಗ್ಗೆ ಚಿತ್ರತಂಡಗಳು ಹೆಚ್ಚು ಗಮನ ಹರಿಸುವಂತಾಗಿದೆ.
ಪಕ್ಕಾ ಪ್ಲ್ಯಾನಿಂಗ್ ಜೊತೆಗೆ ಸಿನಿಮಾ ಮಾಡುವ ಪ್ರಯತ್ನ ಹೆಚ್ಚಾಗಿದೆ. ರಿಸ್ಕ್ ಬೇಡ ಎನ್ನುವ ಕಾರಣಕ್ಕೆ ಎರಡೂ ಸಿನಿಮಾ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಿವೆ. ಮೊದಲ ಪ್ರಯತ್ನದಲ್ಲೇ ಯುವ ಸಕ್ಸಸ್ ಕಂಡಿದ್ದಾರೆ. ಡ್ಯಾನ್ಸ್ ಹಾಗೂ ಆಕ್ಷನ್ ಮೂಲಕ ಅಬ್ಬರಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಹೊಂಬಾಳೆ ಸಂಸ್ಥೆ 'ಯುವ' ಚಿತ್ರವನ್ನು ನಿರ್ಮಿಸಿತ್ತು.

ಯುವ ರಾಜ್‌ಕುಮಾರ್ 2ನೇ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳುತ್ತಾರೆ? ಎನ್ನುವ ಬಗ್ಗೆ ಸಾಕಷ್ಟು ಊಹಾಪೋಹ ಶುರುವಾಗಿದೆ. ಮೊದಲಿಗೆ ದುನಿಯಾ ಸೂರಿ ಹೆಸರು ಕೇಳಿಬಂದಿತ್ತು. ಬಳಿಕ ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಚಿತ್ರವನ್ನು ಪೂರಿ ಕಟ್ಟಿಕೊಟ್ಟಿದ್ದರು. ಅದಕ್ಕೂ ಮುನ್ನ ಶಿವಣ್ಣ 'ಯುವರಾಜ' ಚಿತ್ರದ ಸಾರಥ್ಯ ವಹಿಸಿದ್ದರು.
ಸದ್ಯ 'ಲೈಗರ್' ಹಾಗೂ 'ಡಬಲ್ ಇಸ್ಮಾರ್ಟ್ ಶಂಕರ್' ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಪೂರಿ ಜಗನ್ನಾಥ್ ಸೋತಿದ್ದಾರೆ. ಸೋಲಿನ ಸುಳಿಗೆ ಸಿಲುಕಿರುವ ತೆಲುಗು ನಿರ್ದೇಶಕರು ಕನ್ನಡದಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರಾ? ಯುವ 02 ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರಾ? ಎನ್ನುವ ಕುತೂಹಲ ಕೆಲವರಲ್ಲಿದೆ. ಮತ್ತೊಂದು ಕಡೆ ದುನಿಯಾ ಸೂರಿ ಕೂಡ ಸೋಲಿನ ಸುಳಿಗೆ ಸಿಲುಕಿದ್ದಾರೆ. ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಸದ್ಯ 'ಯುವ 02' ಸಿನಿಮಾ ಬಗ್ಗೆ ಹೊಸದೊಂದು ಸುದ್ದಿ ಹರಿದಾಡುತ್ತಿದೆ. 'ರತ್ನನ್ ಪ್ರಪಂಚ' ಸಿನಿಮಾ ಖ್ಯಾತಿಯ ರೋಹಿತ್ ಪದಕಿ ಯುವ ರಾಜ್‌ಕುಮಾರ್ 2ನೇ ಚಿತ್ರದ ಸಾರಥ್ಯ ವಹಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. 'ಎಕ್ಕ ರಾಜ ರಾಣಿ' ಎನ್ನುವ ಟೈಟಲ್‌ನಲ್ಲಿ ಸಿನಿಮಾ ಮೂಡಿ ಬರುತ್ತದೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡುತ್ತಿದೆ. ಕಾರಣಾಂತರಗಳಿಂದ ರೋಹಿತ್ ಪದಕಿ ನಿರ್ದೇಶನದ 'ಉತ್ತರಕಾಂಡ' ಸಿನಿಮಾ ಕೂಡ ನಿಂತು ಹೋಗಿದೆ ಎನ್ನುವ ಊಹಾಪೋಹ ಶುರುವಾಗಿದೆ.
ಧನಂಜಯ್ ನಟನೆಯ 'ಉತ್ತರಕಾಂಡ' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿತ್ತು. ಶಿವಣ್ಣ ಕೂಡ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಇತ್ತೀಚೆಗೆ ಸಿನಿಮಾ ಸುದ್ದಿನೇ ಇಲ್ಲ. ಬಜೆಟ್ ಹೆಚ್ಚಾಯ್ತು ಎನ್ನುವ ಕಾರಣಕ್ಕೆ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಸದ್ಯಕ್ಕೆ ಸಿನಿಮಾ ನಿಲ್ಲಿಸಿದೆ ಎಂದು ಗುಲ್ಲಾಗಿದೆ. ಹಾಗಾಗಿ 'ಉತ್ತರಕಾಂಡ' ಬಿಟ್ಟು ರೋಹಿತ್ ಪದಕಿ 'ಎಕ್ಕ ರಾಜ ರಾಣಿ' ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.
'ಎಕ್ಕ ರಾಜ ರಾಣಿ' ಚಿತ್ರಕ್ಕೆ ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆಗೆ ಕೆಆರ್‌ಜಿ ಸಂಸ್ಥೆ ಕೂಡ ಕೈ ಜೋಡಿಸಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ. 'ಜಾಕಿ' ಚಿತ್ರದ 'ಎಕ್ಕ ರಾಜ ರಾಣಿ ನನ್ನ ಕೈಯೊಳಗೆ' ಸಾಂಗ್ ಸೂಪರ್ ಹಿಟ್ ಆಗಿತ್ತು. ಅದೇ ಹಾಡಿನ ಮೊದಲ ಸಾಲಿನ ಟೈಟಲ್‌ನಲ್ಲಿ ಯುವ ರಾಜ್‌ಕುಮಾರ್ 2ನೇ ಸಿನಿಮಾ ಬರುತ್ತದೆ ಎನ್ನಲಾಗ್ತಿದೆ. ದಸರಾ ಸಂಭ್ರಮದಲ್ಲೇ ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ.
ನಿರ್ಮಾಪಕ ಕಾರ್ತಿಕ್ ಗೌಡ ಮಾಡಿರುವ ಟ್ವೀಟ್‌ವೊಂದು ಇದಕ್ಕೆಲ್ಲಾ ಪುಷ್ಠಿ ಕೊಡುವಂತಿದೆ. 'ಟ್ರ್ಯಾಕ್‌ಗೆ ಮರಳಿದ್ದು ಆಯಿತು. ಈ ವಾರ ಶುಭ ವಾರವಾಗಲಿದೆ' ಎಂದು ಬರೆದು ಎಕ್ಕ ಎಸ್ಪೀಟ್ ಎಲೆಯ ಫೋಟೊ ಹಂಚಿಕೊಂಡಿದ್ದಾರೆ. ಇದು 'ಯುವ- 02' ಟೈಟಲ್ ಬಗ್ಗೆ ಮತ್ತಷ್ಟು ಸುಳಿವು ಕೊಟ್ಟಿದೆ. ಇನ್ನು ಯುವ ಇತ್ತೀಚೆಗೆ ಮಾಡಿದ್ದ ಇನ್‌ಸ್ಟಾ ಪೋಸ್ಟ್‌ನಲ್ಲಿ ಕೂಡ 'ಎಕ್ಕ ರಾಜ ರಾಣಿ' ಎನ್ನುವ ಸಾಲು ಇತ್ತು. ಜಯಣ್ಣ- ಭೋಗೇಂದ್ರ ಕೂಡ ಈ ಚಿತ್ರಕ್ಕೆ ಕೈ ಜೋಡಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ.


Click it and Unblock the Notifications











