ಅಪ್ಪು ಹಾಡು ಹಾಕಿ ಎಂದಿದ್ದಕ್ಕೆ ಥಳಿತ: ದರ್ಶನ್ ಫ್ಯಾನ್ ವಿರುದ್ಧ ಪ್ರಕರಣ ದಾಖಲು
ಕಳೆದ ಕೆಲವು ತಿಂಗಳಿನಿಂದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಯುತ್ತಲೇ ಇದೆ. ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಅಭಿಮಾನಿಗಳು ಕಿತ್ತಾಡುತ್ತಲೇ ಇದ್ದಾರೆ. 'ಕ್ರಾಂತಿ' ಸಾಂಗ್ ರಿಲೀಸ್ ವೇಳೆ ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಈ ಕಿತ್ತಾಟ ತಾರಕಕ್ಕೇರಿತ್ತು. ಅದು ಇನ್ನೇ ತಣ್ಣಗಾಗುತ್ತಿದೆ ಎನ್ನುವಾಗಲೇ ಮೈಸೂರಿನಲ್ಲಿ ದರ್ಶನ್ ಅಭಿಮಾನಿ ವಿರುದ್ಧ ಅಪ್ಪು ಫ್ಯಾನ್ ದೂರು ದಾಖಲಿಸಿದ್ದಾರೆ.
ಶನಿವಾರ (ಫೆಬ್ರವರಿ 25) ರಾತ್ರಿ ಮೈಸೂರಿನ ಉದ್ಯಮಿ ಹಾಗೂ ಅಪ್ಪು ಅಭಿಮಾನಿ ಯಶವಂತ್ ಕುಮಾರ್ ಎಂಬುವವರು ಪತ್ನಿ ಹುಟ್ಟುಹಬ್ಬ ಆಚರಣೆ ಮಾಡಿಲು ಸೋಶಿಯಲ್ ರೆಸಾರ್ಟ್‌ಗೆ ತೆರಳಿದ್ದರು. ಈ ವೇಳೆ ಡಿಜೆ ಆಪರೇಟರ್‌ಗಳಿಗೆ ಪುನೀತ್ ರಾಜ್‌ಕುಮಾರ್ ಅವರ ಹಾಡನ್ನು ಹಾಕುವಂತೆ ಕೇಳಿಕೊಂಡಿದ್ದರು. ಆ ಬಳಿಕ ಆಪರೇಟರ್ ಎರಡು ಹಾಡು ಮುಗಿದ ಬಳಿಕ ಹಾಕುತ್ತೇನೆ ಎಂದು ಹೇಳಿದ್ದರಂತೆ. ಆಗ ಅಪ್ಪು ಹಾಡು ಕೇಳಿದ್ದಕ್ಕೆ ಸ್ಥಳದಲ್ಲೇ ಇದ್ದ ದರ್ಶನ್ ಅಭಿಮಾನಿ ಏಕಾಏಕಿ ಹಲ್ಲೆಗೆ ಮುಂದಾಗಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೈಸೂರಿನ ಬೋಗಾದಿಯ ನಿವಾಸಿ ಉದ್ಯಮಿ ಯಶವಂತ್ ಕುಮಾರ್ ಪುನೀತ್ ರಾಜ್‌ಕುಮಾರ್ ಮತ್ತು ಅಣ್ಣಾವ್ರ ಹಾಡನ್ನು ಕೇಳಿದ್ದಕ್ಕೆ ಥಳಿಸಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರಿನ ಹೆಬ್ಬಾಳದಲ್ಲಿರುವ ದರ್ಶನ್ ಸ್ನೇಹಿತ ಹರ್ಷಾ ಮೆಲಂಟ ಒಡೆತನದ ಮೈಸೂರಿನ ಸೋಶಿಯಲ್ ರೆಸಾರ್ಟ್‌ನಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಅಲ್ಲದೆ ಘಟನೆ ನಡೆದ ವೇಳೆ ದರ್ಶನ್ ಕೂಡ ಇದ್ದರು. ಆದರೂ ಗಲಾಟೆ ಬಿಡಿಸುವ ಗೋಜಿಗೆ ಹೋಗಲಿಲ್ಲ ಎಂದು ವರದಿಯಾಗಿದೆ.
ಪುನೀತ್ ಹಾಗೂ ಅಣ್ಣಾವ್ರ ಹಾಡನ್ನು ಕೇಳಿದ್ದೇ ತಪ್ಪಾಯಿತಾ? ಅದಕ್ಕೆ ತಮ್ಮ ದರ್ಶನ್ ಅಭಿಮಾನಿ ಕೈ ಮಾಡಿದ್ದಾರೆ. ಕೆಟ್ಟಪದಗಳಿಂದ ನಿಂದಿಸಿದ್ದಾರೆಂದು ಯಶವಂತ್ ಆರೋಪಿಸಿದ್ದಾರೆ. ಅಲ್ಲದೆ ಈ ಜಗಳ ನಡೆಯುವ ವೇಳೆ ಇವರ ಪತ್ನಿ ದರ್ಶನ್ ಅವರ ಬಳಿ ಈ ರೀತಿ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದು, ಅದಕ್ಕೆ ಉತ್ತರಿಸಿಲ್ಲ ಎಂದು ಯಶವಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


Click it and Unblock the Notifications











