ಬೆಂಗಳೂರು ಬಂದ್‌ಗೆ ಚಿತ್ರರಂಗದ ಬೆಂಬಲ: ಶೂಟಿಂಗ್ ಇಲ್ಲ, ಸಿನಿಮಾ ಪ್ರದರ್ಶನವಿಲ್ಲ
ನೆರೆಯ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ (ಸೆಪ್ಟಂಬರ್ 26) ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ವಿರೋಧ ಪಕ್ಷಗಳು, ರೈತರು ಮತ್ತು ಕೆಲವು ಸಂಘಟನೆಗಳು ಬಂದ್ ನಡೆಸುತ್ತಿದ್ದು, ಹಲವು ಪ್ರಮುಖ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ.
"ಕಾವೇರಿ ನಮ್ಮದು" ಎಂಬ ಬೆಂಗಳೂರು ಬಂದ್‌ಗೆ ಕನ್ನಡ ಚಿತ್ರರಂಗ ಕೂಡ ಸಿನಿಮಾ ಚಿತ್ರೀಕರಣ ಹಾಗೂ ಪ್ರದರ್ಶನ ನಿಲ್ಲಿಸಿ ಕಾವೇರಿ ಹೋರಾಟಕ್ಕೆ ಬಲ ತುಂಬುತ್ತಿದೆ. ಕನ್ನಡ ನೆಲ ಜಲ ಭಾಷೆ ವಿಚಾರಕ್ಕೆ ಕನ್ನಡ ಚಿತ್ರರಂಗ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ನಟರು, ಚಿತ್ರರಂಗದವರು ಹೇಳುತ್ತಲೇ ಇದ್ದಾರೆ.

ಬೆಂಗಳೂರಿನ ಥಿಯೇಟರ್‌ಗಳಿಗೂ ಬಂದ್ ಬಿಸಿ
ಕಾವೇರಿ ನೀರು ವಿಚಾರವಾಗಿ ನಡೆಯುತ್ತಿರುವ ಬೆಂಗಳೂರು ಬಂದ್ ಕಾರಣ ಕನ್ನಡ ಸಿನಿಮಾಗಳ ಚಿತ್ರೀಕರಣ ಸೇರಿ ಇನ್ನಿತರ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಸಿನಿಮಾ ಪ್ರದರ್ಶನ ಕೂಡ ನಿಲ್ಲಿಸಲಾಗಿದ್ದು, ಥಿಯೇಟರ್‌ಗಳು ಖಾಲಿ ಹೊಡೆಯುತ್ತಿವೆ. ಬೆಂಗಳೂರಿನಲ್ಲಿ ಇಂದು ಯಾವುದೇ ಸಿನಿಮಾ ಪ್ರದರ್ಶನವಾಗುವುದಿಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಿನಿಮಾಗಳ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಟೆಲಿವಿಷನ್ ಅಸೋಸಿಯೇಷನ್ ಕೂಡ ಬಂದ್‌ಗೆ ಬೆಂಬಲ ನೀಡಿದೆ. ಇದೇ ಕಾರಣಕ್ಕೆ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣಗಳು ಸ್ಥಗಿತ ಮಾಡಲಾಗಿದೆ.
ಸಂಜೆಯ ವರೆಗೆ ಬಂದ್‌ಗೆ ಕರೆ ನೀಡಲಾಗಿದ್ದು, ಇದಾದ ಬಳಿಕ ಸಿನಿಮಾ ಪ್ರದರ್ಶನ ಪ್ರಾರಂಭವಾಗಬಹುದು ಎಂದು ಕೆಲವು ಥಿಯೇಟರ್‌ಗಳ ಮಾಲೀಕರು ಸೂಚಿಸಿದ್ದಾರೆ. ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿರುವ ಸಿನಿರಂಗದ ಕೆಲಸಕ್ಕೆ ರೈತರು ಮತ್ತು ಅಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ನಟ ಸುದೀಪ್ ಬಹಿರಂಗ ಪತ್ರ
ಕಾವೇರಿ ಹೋರಾಟ ತೀವ್ರವಾಗುತ್ತಿರುವ ಸಮಯದಲ್ಲಿ ನಟ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲಾ ಪಕ್ಷದ ನಾಯಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಮಾತುಕತೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವಂತೆ ಮನವಿ ಮಾಡಿದ್ದಾರೆ. ಟ್ರಿಬ್ಯೂನಲ್ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕ ದ ಬರ ಪರಿಸ್ಥಿತಿಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ. ತಮಿಳುನಾಡು ಸಿಎಂ ಜೊತೆ ಸೌಹಾರ್ದ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಬೇಕು, ಕೇಂದ್ರ ಸರ್ಕಾರಕ್ಕೆ ಪರಿಸ್ಥಿತಿ ತಿಳಿಸಲು ಎಲ್ಲಾ ಪಕ್ಷದ ನಾಯಕರು ಮುಂದೆ ಬರಬೇಕು" ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಂದ್‌ನ ನಡುವೆಯೇ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ರೈತರು ಸರ್ಕಾರಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ. ಶುಕ್ರವಾರ ರಾಜ್ಯಾದ್ಯಂತ ವ್ಯಾಪಕ ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ- ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನದಿ ನೀರಿನ ವಿವಾದ ದಶಕಗಳಿಂದ ನಡೆಯುತ್ತಿದೆ. ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶ ನೀಡಿದ ನಂತರ ಈ ಸಮಸ್ಯೆ ಇತ್ತೀಚೆಗೆ ಉಲ್ಬಣಗೊಂಡಿದೆ.
ಬರಗಾಲದ ಪರಿಸ್ಥಿತಿಯ ನಡುವೆ ನೀರು ಬಿಡಲು ನೀರಿಲ್ಲ ಎಂದು ಹಲವು ದಿನಗಳಿಂದ ಸರ್ಕಾರ ಪಟ್ಟು ಹಿಡಿದಿದೆ. ಆದರೆ, ಸುಪ್ರೀಂಕೋರ್ಟ್ ಕೂಡ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದೆ. ಹೀಗಾಗಿ ಮಂಡ್ಯ, ಉಡುಪಿ, ಬೆಂಗಳೂರು ಸೇರಿದಂತೆ ಹಲವೆಡೆ ನೀರು ಬಿಡದಂತೆ ರೈತರು ಮತ್ತು ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.


Click it and Unblock the Notifications











