Karnataka Bandh: "ಯಾವಾಗ್ಲೂ ಕಲಾವಿದರು ಬರ್ಲಿಲ್ಲ ಅನ್ಬೇಡಿ.. ನಾವು ಬಂದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುತ್ತಾ?": ಶಿವಣ್ಣ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಪ್ರತಿಭಟನೆಯಲ್ಲಿ ಕನ್ನಡ ಚಿತ್ರರಂಗ ಭಾಗಿ ಆಗಿದೆ. ಫಿಲ್ಮ್ ಚೇಂಬರ್ ಬಳಿ ನಡೆ ಪ್ರತಿಭಟನೆ ಸಭೆಯಲ್ಲಿ ಕಲಾವಿದರು ಮಾತನಾಡಿದರು. ನಟ ಶಿವರಾಜ್‌ಕುಮಾರ್ ಏನು ಹೇಳಿದರು ಎನ್ನುವುದನ್ನು ಮುಂದೆ ಓದಿ.
"ಕಾವೇರಿ ಸಮಸ್ಯೆ ಇವಾಗಿಂದ ಅಲ್ಲ. ಬಹಳ ವರ್ಷಗಳಿಂದ ಇದೆ. ಅವತ್ತಿನಿಂದ ಹೋರಾಟ ಮಾಡುತ್ತಾ ಬರ್ತಿದ್ದೇವೆ. ಇದನ್ನೆಲ್ಲಾ ನೋಡಿದರೆ ಕಾವೇರಿ ತಾಯಿ ಎಷ್ಟು ನೋವು ಅನುಭವಿಸುತ್ತಿರಬೇಕು. ಇಲ್ಲೂ ಇರಬೇಕು ಅಲ್ಲೂ ಹೋಗಬೇಕು. ನೀರಿಲ್ಲ ಅಂದ್ರೆ ಅಳಬೇಕು. ತಾಯಿ ಶಕ್ತಿಯೇ ಅಂಥಾದ್ದು. ಎಲ್ಲಾ ನೋವು ತಗೋತ್ತಾಳೆ. ಅದಕ್ಕೆ ತಾಯಿನ ದೇವರು ಎನ್ನುವುದು"

"ಇಂತ ಸಂದರ್ಭ ಎದುರಾದಾಗ ಕಲಾವಿದರು ಬರಲಿಲ್ಲ ಅಂತಾರೆ. ಕಲಾವಿದರು ಬಂದು ಏನು ಮಾಡ್ತಾರೆ ಹೇಳಿ. ನಾವು ಬಂದು ನಿಂತ ಮಾತ್ರಕ್ಕೆ ಸಮಸ್ಯೆ ಪರಿಹಾರ ಆಗುತ್ತಾ? ನಿಮ್ಮಂತೆ ನಾವು ಮನುಷ್ಯರೇ ಅಲ್ಲವೇ. ನಮಗೆ ಸ್ಟಾರ್‌ಡಮ್ ಕೊಟ್ಟಿರುವುದೇ ನೀವು. ಅದನ್ನು ಬೇಕಿದ್ದರೆ ಕಿತ್ತುಕೊಂಡುಬಿಡಿ ಬೇಡ. ನೀವೇ ಸ್ಟಾರ್‌ಡಮ್ ಕೊಡ್ತೀರಾ, ನೀವೇ ಕಿತ್ತುಕೊಳ್ತೀರಾ. ಬರಲ್ಲ ಅಂತ ಹೇಳಲ್ಲ. ನಾವು 5 ನಿಮಿಷ ಕೂತು ಮಾತಾಡಿ ಹೋದರೆ ಸಮಸ್ಯೆ ಬಗೆ ಹರಿಯುತ್ತಾ?" ಎಂದು ಪ್ರಶ್ನಿಸಿದ್ದಾರೆ.
ನಾವು ಆರಿಸುವ ಸರ್ಕಾರ, ತಮಿಳು ಸರ್ಕಾರ ಎಲ್ಲರೂ ಕೂತು ಮಾತನಾಡಬೇಕು. ಕರ್ನಾಟಕ ರೈತರು, ತಮಿಳುನಾಡು ರೈತರು ಅಂತ ಬೇರೆ ಬೇರೆ ಇಲ್ಲ, ರೈತರು ಎಲ್ಲರೂ ಒಂದೇ. ಎಲ್ಲರಿಗೂ ಸಮಸ್ಯೆ ಬರುತ್ತದೆ. ನಾವು ಯಾರನ್ನು ಆರಿಸುತ್ತೇವೆ ಅವರು ಇದರ ಬಗ್ಗೆ ಕೂತು ಮಾತನಾಡಿ ಬಗೆಹರಿಸಬೇಕು. ಹೋರಾಟ ಏನು ಮಾಡೋದು ಹೇಳಿ. ರೋಡ್ ಅಲ್ಲಿ ಹೋಗುವ ಬಸ್ ಹೊಡೆದರೆ ಹೋರಾಟನಾ?"
ನೆನ್ನಿ ಯಾವುದೋ ನಟನ ಸಿನಿಮಾ ಸುದ್ದಿಗೋಷ್ಠಿ ನಡೀತು. ಅದನ್ನು ಹೋಗಿ ತಡೆದರು. ತಪ್ಪು ಅಲ್ವಾ ಅದು. ನಮ್ಮ ಕನ್ನಡ ಜನ ಯಾವಾಗಲೂ ಎಲ್ಲರನ್ನು ಸ್ವಾಗತಿಸುತ್ತಾರೆ. ಸಮಸ್ಯೆಗಳು ಇರ್ತಾವೆ. ಸಮಸ್ಯೆ ನುಂಗುವವನೇ ಮನುಷ್ಯ. ಸಮಸ್ಯೆ ತೆಗೆದುಕೊಳ್ಳದಿದ್ದರೆ ಮನುಷ್ಯನೇ ಅಲ್ಲ. ಸಮಸ್ಯೆಯಿಂದ ಹೇಗೆ ಹೊರಬರಬೇಕು ಎಂದು ಯೋಚಿಸಬೇಕು. ಸುಮ್ನೆ ಕೂತು ಹೋರಾಟ ಅಂತ ಎಲ್ಲರೂ ಮಾತನಾಡುತ್ತೀರಾ. ಏನು ಹೋರಾಟ. ನಾವು ಮಾತನಾಡಿದ್ದನ್ನು ಎಷ್ಟು ಜನ ಅರ್ಥ ಮಾಡಿಕೊಳ್ತೀರಾ ಹೇಳಿ."
ಪರಿಸ್ಥಿತಿ ನೋಡಿ ಮಾತನಾಡಬಾರದು. ಸಮಸ್ಯೆ ಬಂದಾಗ ಅದನ್ನು ತೋರಿಸಿಕೊಂಡು ಗೆದ್ದುಬಿಡಬೇಕು ಅನ್ನೋದು ಹೋರಾಟ ಅಲ್ಲ. ಹೋರಾಟಕ್ಕೆ ಗೌರವ ಕೊಟ್ಟಂತೆ ಅಲ್ಲ. ಏನೇ ಮಾಡಿದರೂ ಸತ್ಯವಾಗಿ ಮಾಡಬೇಕು. ತಮ್ಮ ಚಿತ್ರರಂಗದಿಂದ ನಟ ಸಿದ್ಧಾರ್ಥ್‌ಗೆ ಕ್ಷಮೆ ಕೇಳುತ್ತೇನೆ. ನನಗೆ ಬಹಳ ನೋವಾಗಿದೆ. ಈ ತಪ್ಪು ಮತ್ತೆ ಆಗಲ್ಲ. ಕನ್ನಡ ಜನ ಬಹಳ ಒಳ್ಳೆಯವರು. ಅವರು ಎಲ್ಲಾ ಭಾಷೆ ಜನರನ್ನು ಪ್ರೀತಿಸುತ್ತಾರೆ. ಎಲ್ಲಾ ಭಾಷೆ ಸಿನಿಮಾಗಳನ್ನು ನೋಡುತ್ತಾರೆ ಅಂದ್ರೆ ಅದು ಕರ್ನಾಟಕದಲ್ಲಿ ಮಾತ್ರ. ಹೆಮ್ಮೆಯಿಂದ ಹೇಳಿಕೊಳ್ಳಬಹುದು"
"ನಾವು ಒಂದು ಟ್ವೀಟ್ ಮಾಡಿದರೆ ವಿಡಿಯೋ ಮಾಡಿ ಮಾತನಾಡಿದರೆ ಮಾತ್ರ ಅಕ್ಕರೆ ಇದೆ ಅಂತ ಅಲ್ಲ. ಯಾವಾಗಲೂ ನಮ್ಮ ಬೆಂಬಲ ಇರುತ್ತದೆ. ನಮ್ಮ ಜನರ ಮೇಲೆ ರೈತರ ಮೇಲೆ ನಮ್ಮ ತಾಯಿ ಮೇಲೆ ನಮಗೆ ಗೌರವ ಇರುವುದಿಲ್ಲವಾ? ಎಲ್ಲರ ಮೇಲೂ ಇದೆ. ಅದನ್ನು ಹೇಗೆ ಮಾಡಬೇಕು ಎಂದು ಯೋಚಿಸಬೇಕು. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ ನಾನು ಹೀಗೆ ಮಾತನಾಡಿದೆ ಎಂದು. ನಾನು ಯಾವಾಗಲೂ ಹೃದಯದಿಂದ ಮಾತನಾಡುತ್ತೇನೆ"
"ನಾವು ಇವತ್ತು ಇರ್ತೀವಿ ನಾಳೆ ಇರಲ್ಲ. ಯಾರಿಗೆ ಗೊತ್ತು. ಆದರೆ ಇರುವವರೆಗೂ ಚೆನ್ನಾಗಿರಬೇಕು, ಎಲ್ಲರೊಟ್ಟಿಗೂ ಚೆನ್ನಾಗಿರಬೇಕು. ದೇವರಿಗೆ ಪ್ರಾರ್ಥಿಸಿದರೆ ಖಂಡಿತ ಫಲಿತಾಂಶ ಸಿಗುತ್ತದೆ. ದಯವಿಟ್ಟು ಆರೋಪ ಮಾಡಬೇಡಿ. ಈ ನಟ ಬಂದಿಲ್ಲ, ಆ ನಟ ಬಂದಿಲ್ಲ ಎನ್ನಬೇಡಿ. ಇಲ್ಲಿ ಇಷ್ಟು ಜನ ಬಂದಿದ್ದೀವಿ ಅಂದ್ರೆ ಎಲ್ಲರೂ ಬಂದಿದ್ದೀವಿ ಎಂದೇ ಅರ್ಥ. ನಾವೆಲ್ಲಾ ಒಂದೇ, ಮನಸ್ತಾಪದಲ್ಲಿ ಕೆಲವೊಮ್ಮೆ ಏನೇನೋ ಮಾತನಾಡಬಹುದು. ಹಾಗಂತ ಪ್ರೀತಿ ಇಲ್ಲ ಅಂತಲ್ಲ. ಎಲ್ಲಿ ಜಗಳ ಜಾಸ್ತಿ ಇರುತ್ತೋ ಅಲ್ಲೇ ಪ್ರೀತಿ ಜಾಸ್ತಿ"
"ತಮಿಳುನಾಡಿನ ನಮ್ಮ ಪಕ್ಕದ ರಾಜ್ಯ. ಅಲ್ಲಿರುವ ಒಬ್ಬ ನಟ ಕೂಡ ಎಷ್ಟು ಚೆನ್ನಾಗಿ ಮಾತನಾಡಿದ್ದಾರೆ. ಪ್ರತಿಯೊಬ್ಬರಲ್ಲೂ ಅದು ಬರುತ್ತದೆ. ಸಮಸ್ಯೆ ಹೇಗೆ ಪರಿಹಾರ ಮಾಡಬೇಕು ಅನ್ನುವುದನ್ನು ಯೋಚನೆ ಮಾಡಬೇಕು. ಎಲ್ಲಾ ಸಂಘಗಳನ್ನು ನಾನು ಕೇಳಿಕೊಳ್ಳುವುದು ಇದೇ. ಯಾವುದೇ ಹೋರಾಟ ಸರಿಯಾಗಿ ಮಾಡಿ. ಆಗ ಫಲಿತಾಂಶ ಸಿಗುತ್ತದೆ. ಕಲಾವಿದರು ನಾವು ಯಾವಾಗಲೂ ಜೊತೆಗಿರುತ್ತೇವೆ. ಇವತ್ತು ಬಂದಿಲ್ಲ ಅಂದ್ರೆ ಇಷ್ಟ ಇಲ್ಲ ಅಂತ ಅಲ್ಲ. ಬಂದರೆ ಮಾತ್ರ ಇಷ್ಟ ಅಂತ್ಲಾ?"
"ಕೆಲವರು ಇಲ್ಲಿ ನಮ್ಮ ಮುಖ ನೋಡಲು ಬಂದಿರುತ್ತಾರೆ. ಕೆಲವರು ಸೆಲ್ಫಿಗಾಗಿ ಬಂದಿರುತ್ತಾರೆ. ಯಾರಿಗ್ ಗೊತ್ತು. ನಾವು ಅದನ್ನು ಪ್ರೀತಿಸಬೇಕು, ಕಾವೇರಿನೂ ಪ್ರೀತಿಸಬೇಕು, ನಿಮ್ಮ ಅಭಿಮಾನನೂ ಪ್ರೀತಿಸಬೇಕು. ಹೆಂಗೆ ಸ್ವಾಮಿ, ನಾವು ಮನುಷ್ಯರೇ ಅಲ್ಲವೇ ನಿಮ್ ತರ. ಇನ್ನೊಂದು ವಾರಕ್ಕೆ ಮಳೆ ಬಂದು ಸಮಸ್ಯೆ ಬಗೆಹರಿಬಹುದು. ನಂಬಿಕೆ ಬೇಕು, ವಿಶ್ವಾಸ ಬೇಕು. ನಾವು ಯಾವಾಗಲೂ ಜೊತೆಗಿರುತ್ತೇವೆ" ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications










