Cauvery row: "ಹೊಟ್ಟೆಗೆ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರ ವಿಷಯದಲ್ಲಿ ಬೆಂಬಲ ನೀಡಲೇಬೇಕು": ಯಶ್ ಹಳೇ ಹೇಳಿಕೆ ವೈರಲ್
ಕರ್ನಾಟಕದಲ್ಲಿ ಕಾವೇರಿ ಕಿಚ್ಚ ಜೋರಾಗಿ ಹೊತ್ತಿ ಉರಿಯುತ್ತಿದೆ. ಈಗಾಗಲೇ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರು ಬಂದ್ ನಡೆಸಿ ಹೋರಾಟ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗ ಕೂಡ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಕನ್ನಡದ ಸ್ಟಾರ್ ನಟರು ಸೋಶಿಯಲ್ ಮೀಡಿಯಾ ಮೂಲಕ ಯಾವುದೇ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ.
ಸ್ಟಾರ್ ನಟರೆಲ್ಲಾ ಈ ಬಗ್ಗೆ ಪ್ರತಿಕ್ರಿಯಿಸಿದ್ದರೂ ನಟ ಯಶ್ ಮೌನವಾಗಿದ್ದಾರೆ. ಪ್ಯಾನ್ ಇಂಡಿಯಾ ಮಾಡ್ತಾರೆ, ತಮಿಳುನಾಡಿನಲ್ಲೂ ಅವರ ಸಿನಿಮಾ ಪ್ರದರ್ಶನ ಆಗುತ್ತದೆ ಎನ್ನುವ ಕಾರಣಕ್ಕೆ ಯಶ್ ಮಾತನಾಡದೇ ಸುಮ್ಮನಿದ್ದಾರೆ ಎನ್ನುವ ವಾದ ಕೆಲವರದ್ದು. ಯಶ್ ಟ್ವೀಟ್ ಮಾಡಿದ ಮಾತ್ರಕ್ಕೆ ಎಲ್ಲವೂ ಬದಲಾಗಲ್ಲ, ಎನ್ನುವುದು ಅಭಿಮಾನಿಗಳ ಮಾತು. ಕೊನೆಪಕ್ಷ ಬೆಂಬಲ ಸೂಚಿಸಿ ಹೋರಾಟಕ್ಕೆ ಪ್ರೇರಣೆ ತುಂಬಬೇಕು ಎನ್ನುವ ಕೆಲವರು ವಾದ. ಇದೆಲ್ಲದರ ನಡುವೆ ಯಶ್ ಹಳೇ ವಿಡಿಯೋ ವೈರಲ್ ಆಗ್ತಿದೆ.

5 ವರ್ಷಗಳ ಹಿಂದೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಇಂಥದ್ದೇ ಪರಿಸ್ಥಿತಿ ತಲೆದೋರಿತ್ತು. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. 2016ರಲ್ಲಿ ಕಾವೇರಿಗಾಗಿ ಕರ್ನಾಟಕ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಕನ್ನಡ ಚಿತ್ರರಂಗ ಕೂಡ ಬೆಂಬಲ ನೀಡಿತ್ತು. ಚಲನಚಿತ್ರ ವಾಣಿಜ್ಯಮಂಡಳಿ ನಡೆದ ಪ್ರತಿಭಟನೆಯಲ್ಲಿ ಹಲವರು ಭಾಗಿ ಆಗಿದ್ದರು. 'ಸಂತು ಸ್ಟ್ರೇಟ್ ಫಾರ್ವರ್ಡ್' ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶದಲ್ಲಿದ್ದ ಚಿತ್ರತಂಡ ಮಾತ್ರ ಭಾಗಿ ಆಗಿರಲಿಲ್ಲ.
ಆಗ ಕೂಡ ಯಶ್ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಬಂದಿತ್ತು. ಕೂಡಲೇ ವಿದೇಶದಿಂದಲೇ ವಿಡಿಯೋ ಸಂದೇಶ ನೀಡಿದ್ದರು. "ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿರುವುದರಿಂದ, ರಾಜ್ಯದ ಜನತೆ ಶಾಂತಿ ಕಾಪಾಡಬೇಕು" ಎಂದಿದ್ದರು. ಅಂದು ಯಶ್ ಕಾವೇರಿ ವಿಚಾರದಲ್ಲಿ ನೀಡಿದ್ದ ಹೇಳಿಕೆ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
"ನಮಸ್ಕಾರ, ನಾವು ಕನ್ನಡಿಗರು, ಶಾಂತಿ ಪ್ರಿಯರು ಎನ್ನುವುದನ್ನು ಮರೆಯಬಾರದು. ನ್ಯಾಯ ನಮಗೆ ಸಿಗುತ್ತದೆ. ಅದನ್ನು ಖಂಡಿತ ಬಿಡುವುದು ಬೇಡ. ಆದ್ರೆ, ಅದನ್ನು ಯಾವ ದಾರಿಯಲ್ಲಿ ಪಡೆಯುತ್ತೇವೆ ಅನ್ನೋದು ತುಂಬಾ ಮುಖ್ಯ ಆಗುತ್ತದೆ. ಶಾಂತಿಯಿಂದ ಮಾತ್ರ ದೊಡ್ಡ ದೊಡ್ಡ ವಿಷಯಗಳು ಅಚೀವ್ ಆಗಿರುವುದು ಲೈಫ್‌ನಲ್ಲಿ. ವೈಲೆನ್ಸ್ ಇಂದ ಏನೂ ಉಪಯೋಗ ಇಲ್ಲ. ಈಗ ನಾವು ನಡೆದುಕೊಳ್ಳುತ್ತಿರುವ ರೀತಿ, ನಾವು ಶಾಂತಿ ಪ್ರಿಯರು, ಕನ್ನಡಿಗರು, ನಮ ಶೋಭೆ ತರುವುದು ಅಲ್ಲ ಅಂತ ನನಗೆ ಅನಿಸುತ್ತದೆ"
"ದಯವಿಟ್ಟು ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಬೆಂಕಿ ಹಚ್ಚೋದಾಗಲಿ, ಅಥವಾ ಯಾರಿಗೋ ಹೊಡೆಯುವುದರಿಂದ ಏನೂ ಪ್ರಯೋಜನ ಇಲ್ಲ. ನಾನು ಹೇಳುವುದು ಒಂದೇನೇ.. ಇವಾಗ ನಾವಿಲ್ಲಿ ಹೊಡೆಯುತ್ತೇವೆ ಅಂದ್ರೆ, ಅಲ್ಲಿರುವ ಕನ್ನಡಿಗರ ಗತಿ ಏನು? ಅದನ್ನ ಯೋಚಿಸಬೇಕು. ನ್ಯಾಯ ಸಿಕ್ಕೇ ಸಿಗುತ್ತದೆ. ಹೋರಾಡೋಣ. ಶಾಂತಿಯುತವಾಗಿ ಹೋರಾಡೋಣ"
"ಫೇಸ್ ಬುಕ್ ಮತ್ತು ಇತರ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಸ್ಟೇಟ್ಮೆಂಟ್ ಕೊಡುವುದನ್ನ ಮಾಡಬೇಡಿ. ಜನರನ್ನು ಪ್ರಚೋದಿಸಬೇಡಿ. ಇದರಿಂದ ಏನೂ ಉಪಯೋಗ ಇಲ್ಲ. ರೈತರ ಪರವಾಗಿ ಎಲ್ಲರೂ ನಿಲ್ಲಬೇಕು. ಆದ್ರೆ ಶಾಂತಿಯುತವಾಗಿ ಎಲ್ಲರೂ ಹೋರಾಡೋಣ. ಹಂಡ್ರೆಡ್ ಪರ್ಸೆಂಟ್ ಹೊಟ್ಟೆಗೆ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರ ವಿಷಯದಲ್ಲಿ ಬೆಂಬಲ ನೀಡಲೇಬೇಕು. ಅಶಾಂತಿಯಿಂದ ವರ್ತಿಸುವುದರಿಂದ ರೈತರಿಗೂ ಪ್ರಯೋಜನ ಆಗಲ್ಲ" ಎಂದು ಯಶ್ ಅಂದು ಹೇಳಿದ್ದರು.


Click it and Unblock the Notifications











