ಈ ವಾರ ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿ: ರಿಲೀಸ್ ಆಗ್ತಿರುವ ಚಿತ್ರಗಳಿಗೆ ಬಂದ್ ಬಿಸಿ
ಈ ವಾರ ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿ ನಡೀತಿದೆ. ಕನ್ನಡ, ತಮಿಳು, ತೆಲುಗಿನ ಬಹುನಿರೀಕ್ಷಿತ ಸಿನಿಮಾಗಳು ಈ ಗುರುವಾರ ಪ್ರೇಕ್ಷಕರ ಮುಂದೆ ಬರ್ತಿವೆ. ಆದರೆ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿರುವುದರಿಂದ ಶುಕ್ರವಾರ ಸಿನಿಮಾಗಳಿಗೆ ಹಿನ್ನೆಡೆಯಾಗಲಿದೆ.
ಕಳೆದೆರಡು ವಾರಗಳಿಂದ ಯಾವುದೇ ದೊಡ್ಡ ಸಿನಿಮಾ ಥಿಯೇಟರ್‌ಗೆ ಬರಲಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಹೊಂಬಾಳೆ ಸಂಸ್ಥೆ ಸಿನಿಮಾ ರಿಲೀಸ್ ಮುಂದೂಡಿದೆ. 2 ವಾರದ ಹಿಂದೆ ಬರ್ಬೇಕಿದ್ದ ಸಿನಿಮಾಗಳು ಈ ವಾರಕ್ಕೆ ಪೋಸ್ಟ್‌ಪೋನ್ ಆಗಿದೆ. ಕನ್ನಡದಲ್ಲಿ ಗಣೇಶ್ ನಟನೆಯ 'ಬಾನ ದಾರಿಯಲ್ಲಿ' ಹಾಗೂ ಜಗ್ಗೇಶ್- ಧನಂಜಯ ನಟನೆಯ 'ತೋತಾಪುರಿ-2' ಸಿನಿಮಾಗಳು ತೆರೆಗಪ್ಪಳಿಸುತ್ತಿವೆ.

ಪ್ರೀತಂ ಗುಬ್ಬಿ ನಿರ್ದೇಶನದ ರೊಮ್ಯಾಂಟಿಕ್ ಲವ್‌ಸ್ಟೋರಿ 'ಬಾನ ದಾರಿಯಲ್ಲಿ' ಟ್ರೈಲರ್, ಸಾಂಗ್ಸ್ ಹಿಟ್ ಆಗಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಮಂಗಳೂರು, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಶ್ರೀವಾರೆ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.
'ಬಾನ ದಾರಿಯಲ್ಲಿ' ವಿಜಯ್ ಪ್ರಸಾದ್ ನಿರ್ದೇಶನದ 'ತೋತಾಪುರಿ-2' ಕೂಡ ಈ ವಾರವೇ ಪ್ರೇಕ್ಷಕರ ಮುಂದೆ ಬರ್ತಿದೆ. ಕಳೆದ ವರ್ಷ ಬಂದಿದ್ದ ಚಿತ್ರದ ಮೊದಲ ಭಾಗ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಚಿತ್ರದಲ್ಲಿ ಸುಮನ್ ರಂಗನಾಥ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್ ಸೇರಿದಂತೆ ದೊಡ್ಡ ತಾರಾಗಣವಿದೆ. ಕೆ. ಸುರೇಶ್ ಬಂಡವಾಳ ಹೂಡಿದ್ದಾರೆ. ವಿಜಯ್ ಪ್ರಸಾದ್ ಕಚಗುಳಿ ಇಡುವ ಡೈಲಾಗ್ಸ್, ಜಗ್ಗೇಶ್- ಡಾಲಿ ಕಾಂಬಿನೇಷನ್ ಮ್ಯಾಜಿಕ್ ಮಾಡುವ ಸಾಧ್ಯತೆಯಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಚಂದ್ರಮುಖಿ- 2' ಸಿನಿಮಾ ಕೂಡ ಈ ವಾರವೇ ರಿಲೀಸ್ ಆಗ್ತಿದೆ. ಪಿ. ವಾಸು ನಿರ್ದೇಶನದ ಈ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ರಾಘವ ಲಾರೆನ್ಸ್, ಕಂಗನಾ ರಾಣಾವತ್ ನಟಿಸಿದ್ದಾರೆ. ರಜನಿಕಾಂತ್ ನಟನೆಯ 'ಚಂದ್ರಮುಖಿ' ಸಿನಿಮಾ ದಶಕಗಳ ಹಿಂದೆ ಹಿಟ್ ಆಗಿತ್ತು. ಅದೇ ಕತೆಯನ್ನು ಮುಂದುವರೆಸಿ ಹೊಸ ಸಿನಿಮಾ ಕಟ್ಟಿಕೊಡಲಾಗಿದೆ. ಲೈಕಾ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದ್ದು ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬರ್ತಿದೆ.
ತೆಲುಗಿನಲ್ಲಿ ರಾಮ್ ಪೋತಿನೇನಿ ಹಾಗೂ ಶ್ರೀಲೀಲಾ ನಟನೆಯ 'ಸ್ಕಂದ' ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಬೋಯಪಾಟಿ ಶ್ರೀನಿ ಈ ಆಕ್ಷನ್ ಎಂಟರ್‌ಟನರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇನ್ನು ಶ್ರೀಕಾಂತ್ ಅಡ್ಡಾಲ ನಿರ್ದೇಶನದ 'ಪೆದಕಾಪು-1' ಸಿನಿಮಾ ಕೂಡ ಇದೇ ವಾರ ಪ್ರೇಕ್ಷಕರನ್ನು ರಂಜಿಸಲು ಬರ್ತಿದೆ.

ಬಾಲಿವುಡ್‌ನಲ್ಲಿ 'ಫುಕ್ರೆ-3' ಹಾಗೂ 'ವ್ಯಾಕ್ಸಿನ್ ವಾರ್' ಸಿನಿಮಾಗಳು ತೆರೆಗೆ ಬರ್ತಿವೆ. ರೊಮ್ಯಾಂಟಿಕ್, ಕಾಮಿಡಿ, ಆಕ್ಷನ್, ಹಾರರ್ ಹೀಗೆ ಎಲ್ಲಾ ಜಾನರ್ ಸಿನಿಮಾಗಳು ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿರುವುದು ವಿಶೇಷ. ಪ್ರೇಕ್ಷಕರು ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೋ ಕಾದು ನೋಡಬೇಕು.
ಕಾವೇರಿ ಹೋರಾಟ ಸಂಬಂಧ ವಿವಿಧ ಸಂಘಟನೆಗಳು ನಾಳೆ(ಸೆಪ್ಟೆಂಬರ್ 26) ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಕನ್ನಡ ಸಿನಿಮಾ ಪ್ರದರ್ಶಕರ ಸಂಘ ಕೂಡ ಇದ್ದಕ್ಕೆ ಬೆಂಬಲ ಸೂಚಿಸಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಸಿನಿಮಾ ಪ್ರದರ್ಶನ ಮಾಡದಿರಲು ನಿರ್ಧರಿಸಿದೆ. ಇದೇ ವಿಚಾರವಾಗಿ ಶುಕ್ರವಾರ ಕರ್ನಾಟಕ(ಸೆಪ್ಟೆಂಬರ್ 28) ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅದಕ್ಕೆ ಚಿತ್ರರಂಗ ಕೂಡ ಬೆಂಬಲ ಸೂಚಿಸಿದೆ. ಪ್ರದರ್ಶಕರು ಸಹ ಅಂದು ಸಿನಿಮಾ ಪ್ರದರ್ಶನಕ್ಕೆ ಬ್ರೇಕ್ ಹಾಕುವ ಸಾಧ್ಯತೆಯಿದೆ. ಹಾಗಾಗಿ ಸೆಪ್ಟೆಂಬರ್ 28ರಂದು ಕರ್ನಾಟಕದಲ್ಲಿ ಪ್ರದರ್ಶನವಾಗುವ ಸಿನಿಮಾಗಳಿಗೆ ನಷ್ಟವಾಗುವ ಸಾಧ್ಯತೆಯಿದೆ.


Click it and Unblock the Notifications











