Karnataka Bandh: ಕಾವೇರಿ ಹೋರಾಟದಲ್ಲಿ ಬೀದಿಗಿಳಿಯಲಿದೆ ಚಿತ್ರರಂಗ, ಯಾರ‍್ಯಾರು ಭಾಗಿಯಾಗಲಿದ್ದಾರೆ ಗೊತ್ತಾ?
ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ಕಾವೇರಿ ನಮ್ಮದು ಎಂದು ಶುರುವಾಗಿರುವ ಹೋರಾಟಕ್ಕೆ ನಾಡಿನಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಚಿತ್ರರಂಗ ಕೂಡ ಸಂಪೂರ್ಣ ಬೆಂಬಲ ಘೋಷಿಸಿದೆ. ಒಬ್ಬೋಬ್ಬರೇ ನಟ, ನಟಿಯರು, ಸಿನಿಮಾ ರಂಗದವರು ಹೋರಾಟಕ್ಕೆ ಮತ್ತಷ್ಟು ಕಾವು ನೀಡುತ್ತಿದ್ದಾರೆ.
ಮೊನ್ನೆ ನಡೆದ ಬೆಂಗಳೂರು ಬಂದ್ ಬೆನ್ನಲ್ಲೇ ಶುಕ್ರವಾರ (ಸೆಪ್ಟೆಂಬರ್ 29) ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನಲೆ ಕರುನಾಡು ಸ್ತಬ್ಧವಾಗಲಿದೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆಯ ಮೇರೆಗೆ ಇಡೀ ರಾಜ್ಯಾದ್ಯಂತ ಹಲವು ಸಂಘ- ಸಂಸ್ಥೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ.

ಶುಕ್ರವಾರ ಚಿತ್ರರಂಗ ಸಂಪೂರ್ಣ ಬಂದ್
ಶುಕ್ರವಾರ (ಸೆಪ್ಟೆಂಬರ್ 29) ನಡೆಯಲಿರುವ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರರಂಗದ ನಿರ್ಧಾರದ ಕುರಿತು ಫಿಲ್ಮ್ ಚೇಂಬರ್‌ನಲ್ಲಿ ಬುಧವಾರ ಸಭೆ ನಡೆಸಲಾಗಿದೆ. ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದು ಫಿಲ್ಮ್ ಚೇಂಬರ್‌ಗೆ ಆಗಮಿಸಿ ಹೋರಾಟಗಾರ ವಾಟಾಳ್ ನಾಗರಾಜ್ ಬೇಡಿಕೆ ಇಟ್ಟಿದ್ದರು.
"ಶುಕ್ರವಾರದ ಬಂದ್ ಗೆ ಚಿತ್ರರಂಗ ಬೆಂಬಲ ಕೊಡಬೇಕು. ವಾಣಿಜ್ಯ ಮಂಡಳಿ ಬಂದ್‌ಗೆ ಬೆಂಬಲ ಸೂಚಿಸಬೇಕು. ಕನ್ನಡದ ಎಲ್ಲಾ ಸಿನಿಮಾ ನಟರು ಪ್ರತಿಭಟನೆಯಲ್ಲಿ ಭಾಗಿಯಾಗಿ ಬೀದಿಗೆ ಇಳಿಯಬೇಕು, ರಜನಿಕಾಂತ್ ಬೆಂಗಳೂರಿಗೆ ಬರಬಾರದು" ಎಂದು ಬೇಡಿಕೆಗಳನ್ನು ಫಿಲ್ಮ್ ಚೇಂಬರ್ ಮುಂದೆ ಇಟ್ಟಿದ್ದರು ವಾಟಾಳ್ ನಾಗರಾಜ್.
"ನಮಗೂ ವಾಣಿಜ್ಯ ಮಂಡಳಿಗೆ ಬಹಳ ವರ್ಷಗಳ ಸಂಬಂಧವಿದೆ. ಶುಕ್ರವಾರದ ಕರ್ನಾಟಕ ಬಂದ್ ಗೆ ಚಿತ್ರರಂಗ ಬೆಂಬಲ ನೀಡಬೇಕು. ಟೌನ್ ಹಾಲ್ ಬಳಿ ಪ್ರತಿಭಟನಾ ರ್ಯಾಲಿಗೆ ಬರಬೇಕು" ಎಂದು ವಾಟಾಳ್ ನಾಗರಾಜ್ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಮ್ ಸುರೇಶ್ ಮುಂದೆ ಆಗ್ರಹಿಸಿದ್ದರು.

ಟೌನ್ ಹಾಲ್ ಬಳಿಯ ಪ್ರತಿಭಟನೆಯಲ್ಲಿ ಚಿತ್ರರಂಗ ಭಾಗಿ
ವಾಟಳ್ ನಾಗರಾಜ್ ಮನವಿ ಬೆನ್ನಲ್ಲೇ ಕರ್ನಾಟಕ ಬಂದ್‌ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಮ್ ಸುರೇಶ್ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಶುಕ್ರವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಇಡೀ ಚಿತ್ರರಂಗ ಭಾಗಿಯಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ರಾಜ್ ಕುಮಾರ್ ಅವರ ಕಾಲದಿಂದಲೂ ಚಿತ್ರರಂಗ ನಾಡಿನ ಪರ ಇದೆ. ಮುಂದೆಯೂ ಚಿತ್ರರಂಗ ನಾಡು ನುಡಿ ವಿಚಾರದಲ್ಲಿ ಜೊತೆ ಇರಲಿದೆ. 29ನೇ ತಾರೀಖು ಚಿತ್ರರಂಗದ ಎಲ್ಲಾ ಕೆಲಸ ನಿಲ್ಲಿಸಿ ಬಂದ್‌ಗೆ ಬೆಂಬಲ ನೀಡಲಿದೆ. ಇವತ್ತು ಚಿತ್ರರಂಗದ ಎಲ್ಲಾ ಅಂಗಸಂಸ್ಥೆಗಳ ಜೊತೆ ಸಭೆ ನಡೆಸಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
ಮುಮದುವರಿದು, "29 ನೇ ತಾರೀಖು ಕರ್ನಾಟಕ ಬಂದ್‌ಗೆ ಬೆಂಬಲಿಸುವಂತೆ ಕಲಾವಿದರನ್ನು ಮನವಿ ಮಾಡುತ್ತೇವೆ. ಶುಕ್ರವಾರ ಚಿತ್ರರಂಗದವರೆಲ್ಲಾ ಫಿಲ್ಮ್ ಚೇಂಬರ್ ಬಳಿ ಸೇರುತ್ತೇವೆ. ಇಲ್ಲಿಂದ ಟೌನ್ ಹಾಲ್ ಬಳಿಯ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ" ಎಂದು ಅಧ್ಯಕ್ಷ ಎಮ್ ಎನ್ ಸುರೇಶ್ ತಿಳಿಸಿದ್ದಾರೆ.
ಈಗಾಗಲೇ ನಟ ಶಿವರಾಜ್ ಕುಮಾರ್, ದರ್ಶನ್ ತೂಗೂದೀಪ, ಸುದೀಪ್, ಡಾಲಿ ಧನಂಜಯ್, ದುನಿಯಾ ವಿಜಯ್, ಜಗ್ಗೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವು ಕಲಾವಿದರು ಬಹಿರಂಗವಾಗಿ ಕಾವೇರಿ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಹೀಗಾಗಿ ಚಿತ್ರರಂಗ ಘೋಷಿಸಿರುವ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುವ ಸಾಧ್ಯತೆಯಿದೆ. ಹೀಗಾಗಿ ಶುಕ್ರವಾರ ಟೌನ್‌ಹಾಲ್ ಬಳಿಯ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ನಿರೀಕ್ಷೆಯಿದೆ.


Click it and Unblock the Notifications











