ಕಾವೇರಿದ ಕಾವೇರಿ ವಿವಾದ: ತಮಿಳು ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ಕನ್ನಡಪರ ಹೋರಾಟಗಾರರ ತಡೆ!
ರಾಜ್ಯದಲ್ಲಿ ಕಾವೇರಿ ವಿವಾದ ಕಾವೇರಿದ್ದು, ತಮಿಳು ನಟ ಸಿದ್ಧಾರ್ಥ್ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಸುದ್ದಿಗೋಷ್ಠಿಯನ್ನು ಕನ್ನಡ ಪರ ಹೋರಾಟಗಾರರು ತಡೆದಿದ್ದಾರೆ. ಗುರುವಾರ (ಸೆಪ್ಟೆಂಬರ್ 28) ಬಿಡುಗಡೆಯಾದ ತಮಿಳು ಚಿತ್ರ 'ಚಿತ್ತ' ಸಿನಿಮಾದ ಪ್ರಚಾರಕ್ಕಾಗಿ ನಟ ಸಿದ್ಧಾರ್ಥ್ ಸುದ್ದಿಗೋಷ್ಠಿ ನಡೆಸುತ್ತಿದ್ದರು.
ಸಿದ್ಧಾರ್ಥ್ ನಟನೆಯ 'ಚಿತ್ತ' (ಚಿಕ್ಕು) ಸಿನಿಮಾ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾ ಕುರಿತು ಮಲ್ಲೇಶ್ವರದ ಎಸ್ಆರ್ವಿಯಲ್ಲಿ ಸಿದ್ಧಾರ್ಥ್ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಚಿತ್ತ ಸಿನಿಮಾದ ಕನ್ನಡ ವರ್ಷನ್ ಚಿಕ್ಕು ಸಿನಿಮಾನ ಪ್ರಚಾರ ಮಾಡುತಿದ್ದರು. ಈ ಹಿಂದೆ ಸುದೀಪ್ ಕೂಡ ಟ್ವೀಟ್ ಮಾಡಿ ಶುಭಕೋರಿ, ಕನ್ನಡ ಇಂಡಸ್ಟ್ರಿಗೆ ಸಿದ್ಧಾರ್ಥ್ ಅನ್ನು ಸ್ವಾಗತಿಸಿದ್ದರು. ಆದರೆ, ಸುದ್ದಿಗೋಷ್ಠಿ ವೇಳೆ ಅಲ್ಲಿಗೆ ಬಂದ ಕನ್ನಡ ಪರ ಹೋರಾಟಗಾರರು ಸಿದ್ಧಾರ್ಥ್ ಮಾತಿಗೆ ಅಡ್ಡಿ ವ್ಯಕ್ತಪಡಿಸಿ, ನಿಲ್ಲಿಸುವಂತೆ ಕೇಳಿದ್ದಾರೆ.

ಕನ್ನಡದಲ್ಲಿ ಮಾತು ಆರಂಭಿಸಿದ್ದ ನಟ ಸಿದ್ಧಾರ್ಥ್!
ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಯಲ್ಲಿ ಕನ್ನಡದಲ್ಲಿ ನಮಸ್ಕಾರ ಎಂದು ಆರಂಭಿಸುತ್ತಿದ್ದರು, ಅಷ್ಟರಲ್ಲಿ ಗುಂಪಿನ ಸಮೇತ ಅಲ್ಲಿಗೆ ಬಂದ ಕರವೇ ಸ್ವಾಭಿಮಾನಿ ಸೇನೆ ಹೋರಾಟಗಾರರು, ಕಾವೇರಿ ಜಲವಿವಾದವನ್ನು ಬೆಂಬಲಿಸದಿದ್ದರೂ, ಪತ್ರಿಕಾಗೋಷ್ಠಿಯನ್ನು ನಡೆಸುವುದಕ್ಕಿಂತ ಈ ಸಮಸ್ಯೆಯನ್ನು ಪರಿಹರಿಸುವುದು ಅತ್ಯಗತ್ಯ ಎಂದು ಹೇಳಿದರು. ಜೊತೆಗೆ ನಾವು ಹದಿನೈದು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ನಿಮಗೆ ಕಾಣಿಸುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಗಲಾಟೆ ನಡೆಯುತ್ತಿರುವ ಸಮಯದಲ್ಲಿ ತಮಿಳು ಸಿನಿಮಾವೊಂದರ ಸುದ್ದಿಗೋಷ್ಠಿ ಆಯೋಜಿಸಿರುವುದು ಎಷ್ಟು ಸರಿ ಎಂದು ಆಯೋಜಕರನ್ನು ಪ್ರಶ್ನಿಸಿದ್ದಾರೆ. ಅಲ್ಲಿ ನೆರೆದಿದ್ದ ಎಲ್ಲರಿಗೂ ನೀವು ಕಾವೇರಿ ನೀರು ಕುಡಿಯುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿ, ಮೊದಲು ಇದನ್ನು ನಿಲ್ಲಿಸಿ ಎಂದಿದ್ದಾರೆ. ನಟ ಸಿದ್ಧಾರ್ಥ್ ಅವರಿಗೂ ಈ ಸಮಯದಲ್ಲಿ ಇದು ಸರಿಯಲ್ಲ ದಯವಿಟ್ಟು ನೀವು ಇಲ್ಲಿಂದ ಹೊರಡಿ ಎಂದು ಹೋರಾಟಗಾರರು ಮನವಿ ಮಾಡಿದ್ದಾರೆ. ತಕ್ಷಣ ನಟ ಅಲ್ಲಿಂದ ಎದ್ದು ಹೊರಟು ಹೋಗಿದ್ದಾರೆ.

ಇನ್ನೂ, ಶುಕ್ರವಾರ (ಸೆಪ್ಟೆಂಬರ್ 29) ರಾಜ್ಯದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆಯ ಮೇರೆಗೆ ಕನ್ನಡ ಚಿತ್ರರಂಗ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಚಿತ್ರರಂಗದ ಪ್ರತ್ಯೇಕ ಪ್ರತಿಭಟನೆಯನ್ನು ಮುನ್ನಡೆಸಲಿದ್ದಾರೆ.
ನಟ ಶಿವರಾಜ್‌ಕುಮಾರ್ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 29ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಶಿವಾನಂದ ಸರ್ಕಲ್ ಬಳಿಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಕಾವೇರಿ ಹೋರಾಟಕ್ಕೆ ಸಂಬಂಧಿಸಿ ಚಿತ್ರರಂಗದಿಂದ ಪ್ರತ್ಯೇಕ ಹೋರಾಟ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಮ್ ಎನ್ ಸುರೇಶ್ ತಿಳಿಸಿದ್ದಾರೆ.
ಎಲ್ಲಾ ನಟ ನಟಿಯರು ವಾಣಿಜ್ಯ ಮಂಡಳಿ ಬಳಿ ಸೇರಲಿದ್ದಾರೆ. ಶಿವಣ್ಣ, ರವಿಚಂದ್ರನ್, ಪ್ರೇಮ್, ಧ್ರುವಸರ್ಜಾ, ವಿಜಯ್ ರಾಘವೇಂದ್ರ, ಶ್ರೀಮುರುಳಿ, ಶೃತಿ, ಮಾಲಾಶ್ರೀ, ವಿನೋದ್ ಪ್ರಭಾಕರ್, ಪ್ರೇಮಾ ಸೇರಿದಂತೆ ಎಲ್ಲರಿಗೂ ತಿಳಿಸಿದ್ದೇವೆ. ಶಿವರಾಜ್ ಕುಮಾರ್ ಅವರು ಖಂಡಿತಾ ಬರುತ್ತೇನೆ ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಾವೇರಿ ಜಲವಿವಾದವು ಎರಡು ರಾಜ್ಯಗಳ ಮಧ್ಯೆ ಬಹಳ ಹಿಂದಿನಿಂದಲೂ ಇದೆ. ಈಗ ಮತ್ತೆ ಸುಪ್ರೀಂಕೋರ್ಟ್ ಮತ್ತು ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶದಿಂದ ಮುನ್ನಲೆಗೆ ಬಂದಿದೆ.


Click it and Unblock the Notifications











