Cauvery dispute: "ಕನ್ನಡಿಗರಿಗೆ ನೀರಿಲ್ಲ, ಇನ್ನು ನಮಗೆಲ್ಲಿಂದ ಕೊಡ್ತಾರೆ": ಟ್ರೆಂಡ್ ಆಗ್ತಿದೆ ತಮಿಳು ನಟ ಸಿಂಬು ಹೇಳಿಕೆ
ಮತ್ತೆ ಕಾವೇರಿ ನದಿ ನೀರು ಹಂಚಿಕೆ ವಿಚಾರ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಿಚ್ಚಿಗೆ ಕಾರಣವಾಗಿದೆ. ಈ ವರ್ಷ ನೀರಿನ ಅಭಾವ ಇದೆ. ಆದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೀತಿದೆ. ಇಂದು(ಸೆಪ್ಟೆಂಬರ್) ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ.
ವಿವಿಧ ಸಂಘಟನೆಗಳು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಮತ್ತೆ ಕೆಲವರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗ ಕೂಡ ಸಿನಿಮಾ ಚಿತ್ರೀಕರಣ ಹಾಗೂ ಪ್ರದರ್ಶನ ನಿಲ್ಲಿಸಿ ಕಾವೇರಿ ಹೋರಾಟಕ್ಕೆ ಬಲ ತುಂಬುತ್ತಿದೆ. ಕನ್ನಡ ನೆಲ ಜಲ ಭಾಷೆ ವಿಚಾರಕ್ಕೆ ಕನ್ನಡ ಚಿತ್ರರಂಗ ಸದಾ ಬೆಂಬಲವಾಗಿ ನಿಲ್ಲುತ್ತದೆ. ಅತ್ತ ತಮಿಳು ಚಿತ್ರರಂಗ ಕೂಡ ತಮಿಳುನಾಡು ಸರ್ಕಾರವನ್ನು ಬೆಂಬಲಿಸುತ್ತಾ ಬರ್ತಿದೆ. ಇದೆಲ್ಲದರ ನಡುವೆ ಕೆಲ ವರ್ಷಗಳ ಹಿಂದೆ ತಮಿಳು ನಟ ಸಿಂಬು ಮಾತನಾಡಿದ್ದ ಮಾತುಗಳು ಕನ್ನಡಿಗರ ಮನಗೆದ್ದಿತ್ತು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ 5 ವರ್ಷಗಳ ಹಿಂದೆ ನಟ ಸಿಂಬು ನೀಡಿದ್ದ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿತ್ತು. "ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ" ಎಂದು 2018ರಲ್ಲಿ ಸಿಂಬು ಹೇಳಿದ್ದರು. ಅಂದು ತಮಿಳು ನಟನ ಮಾತುಗಳನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು. ಇದೀಗ ಮತ್ತೆ ಕಾವೇರಿ ಕಿಚ್ಚು ಹೊತ್ತಿಕೊಂಡಿದ್ದು ಸಿಂಬು ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿನ್ನೆ(ಸೆಪ್ಟೆಂಬರ್ 25) ಸಂಜೆ ಸೋಶಿಯಲ್ ಮೀಡಿಯಾದಲ್ಲಿ #ಕಾವೇರಿನಮ್ಮದು ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಲಾಗುತ್ತಿದೆ. ಈ ಟ್ರೆಂಡ್‌ನಲ್ಲಿ ಸಿಂಬು ಮಾತನಾಡಿದ್ದ ವಿಡಿಯೋ ವೈರಲ್ ಆಗ್ತಿದೆ.
5 ವರ್ಷಗಳ ಹಿಂದೆ ಮಳೆ ಇಲ್ಲದೇ ಇದೇ ರೀತಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕರ್ನಾಟಕ- ತಮಿಳುನಾಡಿನಲ್ಲಿ ಹಗ್ಗಜಗ್ಗಾಟ ಶುರುವಾಗಿತ್ತು. ಬಂದ್, ಗಲಾಟೆ ಪರಿಸ್ಥಿತಿ ಇತ್ತು. ಇಂತಹ ಸಮಯದಲ್ಲಿ ತಮಿಳು ಮಾಧ್ಯಮಗಳನ್ನು ಉದ್ದೇಶಿಸಿ ಸಿಂಬು ಮಾತನಾಡಿದ್ದರು. "ಕಾವೇರಿ ಹೋರಾಟ ನಡೆಯುತ್ತಲೇ ಇದೆ. ಆದರೆ ಕನ್ನಡಿಗರಿಗೆ ನೀರಿಲ್ಲ, ಇನ್ನು ನಮಗೆಲ್ಲಿಂದ ಕೊಡ್ತಾರೆ. ಈ ಪ್ರಪಂಚದಲ್ಲಿ ಪ್ರೀತಿಯಿಂದ ಮಾತ್ರ ಯಾವುದೇ ಒಂದು ವಿಷಯ ಗೆಲ್ಲೋದಿಕ್ಕೆ ಸಾಧ್ಯ. ಇದು ಗಾಂಧಿ ಹುಟ್ಟಿದ ಭೂಮಿ. ಅಹಿಂಸಾ ಮಾರ್ಗದ ಹೋರಾಟವೇ ಸರಿಯಾದ ಹೋರಾಟ"
"ನಾವು ಯಾರೊಂದಿಗೂ ಜಗಳ ಮಾಡಬಾರದು. ಕರ್ನಾಟಕದವರೇನಾದರೂ ನಾವು ನೀರು ಕೊಡೋದಿಲ್ಲ ಅಂತ ಹೇಳಿದ್ದಾರಾ?. ನಾನು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತಾಡುತ್ತಿಲ್ಲ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯ ಮಾಡೋದಿಕ್ಕೋಸ್ಕರ ನಾನಿಲ್ಲಿಗೆ ಬಂದಿಲ್ಲ. ಆ ಕೆಲಸ ಮಾಡೋದಕ್ಕೆ ಬಹಳಷ್ಟು ಜನ ಇದ್ದಾರೆ. ನಾನು ಹೆತ್ತ ಮಗ ಅಲ್ಲದೇ ಇದ್ರೂ, ಕರ್ನಾಟಕದಲ್ಲಿರುವಂತ ತಾಯಿಗೆ ಕೇಳ್ತಾ ಇದ್ದೀನಿ. ನೀವು ಕುಡಿದು ದಣಿವಾರಿಸಿಕೊಂಡ ಬಳಿಕ ಉಳಿದಿರುವ ನೀರನ್ನು ನಮಗೆ ಕೊಡ್ತೀರಾ ಅಮ್ಮ"
"ಈ ಭೂಮಿ ಅಂತ ಅಂದರೆ ಅದು ಭಾರತ ಆಗಿರಬಹುದು, ಕರ್ನಾಟಕ ಆಗಿರಬಹುದು, ತಮಿಳುನಾಡು ಆಗಿರಬಹುದು ಮೊದಲಿಗೆ ನಾವು ಈ ಭೂಮಿ ಮೇಲೆ ಮನುಷ್ಯರಾಗಿ ಹುಟ್ಟಿದ್ದೀವಿ. ಈಗ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಸಹಾಯ ಮಾಡಬೇಕು. ಇನ್ನು ಎಷ್ಟು ದಿನ ಈ ಜಾತಿ, ಧರ್ಮ, ಪಂಗಡ ಅನ್ನೋ ಹೆಸರಿನಲ್ಲಿ ಬೇರೆ ಮಾಡ್ತಾ ಇರ್ತೀರಿ? ಯಾರೋ ಅಧಿಕಾರಕ್ಕೆ ಬರುವುದಕ್ಕೋಸ್ಕರ ನಮ್ಮನ್ನು ನಾನಾ ಕಾರಣಕ್ಕೆ ಹೀಗೆ ಒಡೆದು ಬೇರೇ ಬೇರೆ ಮಾಡಿ ಆಳುತ್ತಿದ್ದಾರೆ"
"ನಾವು ಹೋಗಿ ಈ ಹೋರಾಟ, ರಂಪಾಟ ಇದೆಲ್ಲ ಮಾಡಲು ಸಾಧ್ಯ ಆಗ್ತಿಲ್ಲ. ನೀವು ಬಳಸಿ ಉಳಿದ ನೀರನ್ನು ಮಾತ್ರ ನಮಗೆ ಕೊಡಿ. ನೀವು ಅಣೆಕಟ್ಟು ಕಟ್ಟಿ ನೀರನ್ನು ತಡೀಬಹುದು, ಆದರೆ ಅಣೆಕಟ್ಟು ಅಳತೆ ಮೀರಿ ನೀರು ಬಂತು ಅಂದರೆ ಅದನ್ನ ನೀವು ಹೇಗೆ ತಡೆಯಲು ಸಾಧ್ಯ. ಆ ನೀರನ್ನು ಬಿಡಲೇ ಬೇಕಾಗುತ್ತದೆ ಅಲ್ವಾ. ಅಲ್ಲಿರುವ ಎಲ್ಲ ತಾಯಂದಿರೂ 'ಅಯ್ಯೋ, ನೀರು ಕೊಡೋದಿಕ್ಕಾಗ್ತಿಲ್ಲವಲ್ಲ ಅಂತ ನೊಂದು ಕಣ್ಣೀರು ಹಾಕಿದರು ಅಂದರೆ, ಆ ತಾಯಂದಿರ ಪ್ರೀತಿಯ ಅಣೆಕಟ್ಟು ಒಡೀತು ಅಂತ. ತಮಿಳು ನಾಡಿನ ಜನರಿಗೆ ಆ ದೇವರು ನೀರು ಕೊಡ್ತಾನೋ ಇಲ್ವೋ ಅಂತ ನೀವೇ ನೋಡಿ ಬೇಕಾದರೆ" ಎಂದು ಸಿಂಬು ಹೇಳಿದ್ದರು.
ಸಿಂಬು ಹೇಳಿಕೆಯನ್ನು ಕನ್ನಡಿಗರು ಸ್ವಾಗತಿಸಿದ್ದರು. ನಿಮ್ಮಂತೆಯೇ ಎಲ್ಲಾ ತಮಿಳರು ಯೋಚಿಸಿದರೆ ಈ ಸಮಸ್ಯೆಯೇ ಇರುವುದಿಲ್ಲ. ನೀವು ನಮ್ಮ ಮನಸ್ಸುನ್ನು ಗೆದ್ದುಬಿಟ್ಟಿರಿ ಎಂದಿದ್ದರು.


Click it and Unblock the Notifications










