ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಿಢೀರ್ ದಾಳಿ
ನಟಿ ರಾಗಿಣಿಗೆ ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳಗ್ಗೆ 6.30ಕ್ಕೆ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಯಲಹಂಕದಲ್ಲಿರುವ ರಾಗಿಣಿ ಮನೆಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. 2 ಕಾರಿನಲ್ಲಿ ಬಂದಿಳಿದ ಸಿಸಿಬಿ ಅಧಿಕಾರಿಗಳು ರಾಗಿಣಿ ಮನೆಗೆ ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Recommended Video
ಬೆಳಗ್ಗೆ 6.30ರಿಂದ 6 ಅಧಿಕಾರಿಗಳ ಸಿಸಿಬಿ ತಂಡ ರಾಗಿಣಿ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳು ದಾಳಿ ಮಾಡುವ ಸಮಯದಲ್ಲಿ ನಟಿ ರಾಗಿಣಿ ಮನೆಯಲ್ಲಿಯೇ ಇದ್ದರು.
ಡ್ರಗ್ಸ್ ಜಾಲ ಪ್ರಕರಣ ಸಂಬಂಧ ನಟಿ ರಾಗಿಣಿ ಆಪ್ತ ರವಿಶಂಕರ್ ನನ್ನು ಸಿಸಿಬಿ ವಶಕ್ಕೆ ಪಡೆದಿದ್ದು, ಆತನ ಮಾಹಿತಿ ಆಧರಿಸಿ ರಾಗಿಣಿಗೆ ನೋಟಿಸ್ ನೀಡಲಾಗಿತ್ತು. ಆದರೆ ರಾಗಿಣಿ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದರು. ಅನಾರೋಗ್ಯದ ಕಾರಣ ಹೇಳಿ ಸಮಯ ಬೇಕು ಅಂತ ಕೇಳಿದ್ದರು. ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಟ್ವೀಟ್ ಮೂಲಕ ರಾಗಿಣಿ ತಿಳಿಸಿದ್ದರು. ಆದರೆ ಸಿಸಿಬಿ ಮತ್ತೊಂದು ನೋಟಿಸ್ ನೀಡಿ ಇಂದು ಬಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಎಚ್ಚರಿಕೆ ನೀಡಿತ್ತು.

ಆದರೆ ಸಾಕ್ಷ್ಯಾಗಳನ್ನು ನಾಶ ಮಾಡುವ ಅನುಮಾನದಿಂದ ಸರ್ಚ್ ವಾರೆಂಟ್ ಪಡೆದು ಸಿಸಿಬಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿದೆ. ಇಡೀ ಮನೆಯನ್ನು ಅಧಿಕಾರಿಗಳು ಹುಡುಕುತ್ತಿದ್ದಾರೆ. ಮನೆಯಲ್ಲಿ ಏನಾದರೂ ಮಾದಕ ವಸ್ತು ಸಿಕ್ಕರೆ ರಾಗಿಣಿಯನ್ನು ಬಂಧಿಸುವುದು ಪಕ್ಕಾ ಎನ್ನಲಾಗುತ್ತಿದೆ.


Click it and Unblock the Notifications











