CCL 2026: ರಾಜೀವ್ ಅಬ್ಬರದ ಶತಕ; ತೆಲುಗು ವಾರಿಯರ್ಸ್ ವಿರುದ್ಧ ಕಿಚ್ಚನ ಪಡೆಗೆ ಭರ್ಜರಿ ಗೆಲುವು
ಸಿಸಿಎಲ್ ಕ್ರಿಕೆಟ್ 12ನೇ ಸೀಸನ್ ಸಿನಿ ಪ್ರೇಮಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದೆ. ಸರಣಿಯ 8ನೇ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಎದುರಿಸಿತು. ಸುದೀಪ್ ಹುಡುಗರ ಅದ್ಭುತ ಪ್ರದರ್ಶನದಿಂದ ತಂಡ ಗೆಲುವಿನ ನಗೆ ಬೀರಿದೆ. ಸರಣಿಯಲ್ಲಿ 2ನೇ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಹೋಗುವುದನ್ನು ತಂಡ ಬಹುತೇಕ ಖಚಿತಪಡಿಸಿಕೊಂಡಿದೆ.
ಟಾಸ್ ಗೆದ್ದು ಫೀಲ್ಡೀಂಗ್ ಆಯ್ಕೆ ಮಾಡಿದ್ದ ಕಿಚ್ಚನ ಪಡೆ ಅಖಿಲ್ ನೇತೃತ್ವದ ತಂಡವನ್ನು 226 ರನ್‌ಗಳಿಗೆ ಕಟ್ಟಿ ಹಾಕಿತ್ತು. ತೆಲುಗು ವಾರಿಯರ್ಸ್ ಪರ ನಾಯಕ ಅಖಿಲ್ ಅಕ್ಕಿನೇನಿ 44 ರನ್ ಗಳಿಸಿ ಎಲ್‌ಬಿಡಬ್ಲೂ ಆಗಿ ಔಟ್ ಆದರು. ಬಳಿಕ ಅಶ್ವಿನ್ ಬಾಬು ಶತಕ ಸಿಡಿಸಿ ತಂಡಕ್ಕೆ ನೆರವಾದರು. 69 ಎಸೆತಗಳಲ್ಲಿ 132 ರನ್ ಗಳಿಸಿ ತಂಡ ಬೃಹತ್ ಮೊತ್ತ ಪೇರಿಸಲು ಕೊಡುಗೆ ನೀಡಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ತಂಡ 5 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿತ್ತು.

ಈ ಬೃಹತ್ ಮೊತ್ತ ಬೆನ್ನತ್ತಿದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಆರಂಭದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪ್ರದೀಪ್, ರಾಜೀವ್ ನೆರವಾದರು. ಭರ್ಜರಿ ಹೊಡೆತಗಳ ಮೂಲಕ ಪವರ್‌ಪ್ಲೇ 6 ಓವರ್‌ಗಳಲ್ಲಿ 76 ರನ್ ಕಲೆ ಹಾಕಿದರು. 17.2 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಕಳೆದುಕೊಂಡು ತಂಡ ಗುರಿ ತಲುಪಿತು. ರಾಜೀವ್ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ಭಾರತೀಯ ಚಿತ್ರರಂಗದ 8 ಸಿನಿಮಾ ಇಂಡಸ್ಟ್ರಿ ಕಲಾವಿದರು ಹಾಗೂ ತಂತ್ರಜ್ಞರು ಸಿಸಿಎಲ್ ಟೂರ್ನಿಯಲ್ಲಿ 8 ತಂಡಗಳಾಗಿ ಆಡುತ್ತಿದ್ದಾರೆ. ಈ ಬಾರಿ 3 ವೀಕೆಂಡ್‌ಗಳಲ್ಲಿ ಪಂದ್ಯಗಳು ನಡೆಯುತ್ತಿದೆ. ಕಳೆದ ವೀಕೆಂಡ್ 6 ಪಂದ್ಯಗಳು ನಡೆದಿತ್ತು. ಹಾಲಿ ಚಾಂಪಿಯನ್ ಪಂಜಾಬ್ ದೇ ಶೇರ್ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಪಂದ್ಯ ಗೆದ್ದಿತ್ತು. ಮೊದಲ 6 ಪಂದ್ಯಗಳು ವೈಜಾಗ್ ACA-VDCA ಕ್ರಿಕೆಟ್ ಮೈದಾನದಲ್ಲಿ ನಡೆದಿತ್ತು. ಈ ವೀಕೆಂಡ್ ಕೋಯಂಬತ್ತೂರಿನ ಎಸ್‌ಎನ್‌ಆರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿವೆ.
ಕೇವಲ 48 ಎಸೆತಗಳಲ್ಲಿ ರಾಜೀವ್ ಶತಕ ಸಿಡಿಸಿ ಸಂಭ್ರಮಿಸಿದರು. 201.9 ಸ್ಟ್ರೈಕ್‌ರೇಟ್‌ನಲ್ಲಿ 12 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ ಒಟ್ಟಾರೆ 53 ಎಸೆತಗಳಲ್ಲಿ 107 ರನ್ ಗಳಿಸಿ ರಾಜೀವ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಸುದೀಪ್ ಪುತ್ರಿ ಸಾನ್ವಿ ಕೂಡ ಬೌಂಡರಿ ಲೈನ್‌ನಲ್ಲಿ ಕೂತು ತಂಡವನ್ನು ಹುರಿದುಂಬಿಸಿದರು. ತಂಡದ ಆಟಗಾರರು ಪ್ರತಿ ಬೌಂಡಸಿ, ಸಿಕ್ಸರ್ ಸಿಡಿಸಿದಾಗಲೂ ಸುದೀಪ್ ಪುಟ್ಟ ಮಗುವಿನ ರೀತಿ ಸಂಭ್ರಮಿಸುತ್ತಿದ್ದರು.
ಭಾನುವಾರ(ಜನವರಿ 25) ಭೋಜ್‌ಪುರಿ ದಬಾಂಗ್ಸ್ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಲೀಗ್ ಹಂತದ ಕೊನೆ ಪಂದ್ಯ ಆಡಲಿದೆ. ಆಡಿದ 2 ಪಂದ್ಯದಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 2ನೇ ಸ್ಥಾನಕ್ಕೇರಿದೆ ಕಿಚ್ಚನ ಪಡೆ. ಸಿಸಿಎಲ್ ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ನಡುವಿನ ಪಂದ್ಯಗಳು ಬಹಳ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಈ ಪಂದ್ಯ ಕೂಡ ಅದೇ ರೀತಿ ಬಹಳ ರೋಚಕವಾಗಿತ್ತು.
ಮೊದಲಿಗೆ 226 ರನ್‌ಗಳ ಗುರಿ ಕಠಿಣ ಎಂದೇ ಭಾವಿಸಲಾಗಿತ್ತು. ಆದರೆ ಆರಂಭಿಕರಾಗಿ ಬಂದ ಪ್ರದೀಪ್ ಹಾಗೂ ರಾಜೀವ್ ಆ ಭಯವನ್ನು ದೂರ ಮಾಡಿದ್ದರು. ಶತಕದ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅರ್ಧ ಶತಕ ಸಿಡಿಸಿ ಪ್ರದೀಪ್ ಔಟ್ ಆದ ಬಳಿಕ ಡಾರ್ಲಿಂಗ್ ಕೃಷ್ಣ ಬಂದು ರಾಜೀವ್ ಜೊತೆ ಕೈ ಜೋಡಿಸಿದರು. 20 ಎಸೆಯಗಳಲ್ಲಿ 43 ರನ್ ಗಳಿಸಿ ಕೃಷ್ಣ ಕೂಡ ಅಜೇಯರಾಗಿ ಉಳಿದರು.


Click it and Unblock the Notifications











