ಸಿಸಿಎಲ್: ಬಾಲಿವುಡ್ vs ಭೋಜ್‌ಪುರಿ ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್ ತಲುಪಿದವರಾರು?
ಪ್ರಸ್ತುತ ನಡೆಯುತ್ತಿರುವ ಜನಪ್ರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಹತ್ತನೇ ಆವೃತ್ತಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಇಂದು ( ಮಾರ್ಚ್ 24 ) ಟೂರ್ನಿಯ ಸೆಮಿಫೈನಲ್ ಹಂತದ ಎರಡು ಪಂದ್ಯಗಳು ಜರುಗುತ್ತಿವೆ.
ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಕರ್ನಾಟಕ ಬುಲ್ಡೋಜರ್ಸ್, ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಭೋಜ್‌ಪುರಿ ದಬಾಂಗ್ಸ್, ನಾಲ್ಕು ಪಂದ್ಯಗಳನ್ನಾಡಿ ಮೂರು ಪಂದ್ಯಗಳನ್ನು ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತು ಮೂರನೇ ಸ್ಥಾನದಲ್ಲಿರುವ ಮುಂಬೈ ಹೀರೊಸ್ ಹಾಗೂ ನಾಲ್ಕು ಪಂದ್ಯಗಳನ್ನಾಡಿ ಎರಡು ಪಂದ್ಯಗಳನ್ನು ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿರುವ ತೆಲುಗು ವಾರಿಯರ್ಸ್ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿವೆ.

ಈ ಪೈಕಿ ಮೊದಲ ಸೆಮಿಫೈನಲ್ ಪಂದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಭೋಜ್‌ಪುರಿ ದಬಾಂಗ್ಸ್ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದ್ದ ಮುಂಬೈ ಹೀರೊಸ್ ತಂಡಗಳ ನಡುವೆ ವಿಶಾಖಪಟ್ಟಣದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭೋಜ್‌ಪುರಿ ದಬಾಂಗ್ಸ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಮುಂಬೈ ಹೀರೊಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಹೀರೊಸ್ ಮೊದಲ ಇನ್ನಿಂಗ್ಸ್‌ನಲ್ಲಿ ಹತ್ತು ಓವರ್‌ಗಳಿಗೆ 5 ವಿಕೆಟ್ ಕಳೆದುಕೊಂಡು 109 ರನ್ ಕಲೆಹಾಕಿತು. ಇನ್ನು ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭೋಜ್‌ಪುರಿ ದಬಾಂಗ್ಸ್ ತಂಡ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 80 ರನ್ ಕಲೆಹಾಕಿತು. ಈ ಮೂಲಕ ಮುಂಬೈ ಹೀರೊಸ್ ಮೊದಲ ಇನ್ನಿಂಗ್ಸ್ ಮುಕ್ತಾಯದ ಹಂತಕ್ಕೆ 109 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತು.
ಹೀಗೆ ದೊಡ್ಡ ಮುನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ಹೀರೊಸ್ ಮೊದಲ ಇನ್ನಿಂಗ್ಸ್ ರೀತಿ ಅಬ್ಬರಿಸಲಾಗದೇ 9.5 ಓವರ್‌ಗಳಲ್ಲಿ ಕೇವಲ 62 ರನ್ ಕಲೆಹಾಕಿ ಆಲ್ ಔಟ್ ಆಯಿತು. ಈ ಮೂಲಕ 91 ರನ್‌ಗಳ ಗುರಿಯನ್ನು ಭೋಜ್‌ಪುರಿ ದಬಾಂಗ್ಸ್ ತಂಡಕ್ಕೆ ಮುಂಬೈ ಹೀರೊಸ್ ತಂಡ ನೀಡಿದೆ.
ಈ ಗುರಿಯನ್ನು ಬೆನ್ನತ್ತಿದ ಭೋಜ್‌ಪುರಿ ದಬಾಂಗ್ಸ್ ತಂಡ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 93 ರನ್ ಕಲೆಹಾಕಿ 6 ವಿಕೆಟ್‌ಗಳ ರೋಚಕ ಜಯವನ್ನು ಸಾಧಿಸಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ. ಇನ್ನು ಭೋಜ್‌ಪುರಿ ದಬಾಂಗ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಎಸೆತದಲ್ಲಿ 5 ರನ್ ಬಾರಿಸಬೇಕಾದ ಅಗತ್ಯವಿದ್ದಾಗ ಅಸ್ಗರ್ ಸಿಕ್ಸರ್ ಚಚ್ಚಿದ್ದಾರೆ. ಈ ಮೂಲಕ ಸೋಲಿನ ಸುಳಿಗೆ ಸಿಲುಕಿಕೊಂಡಿದ್ದ ಭೋಜ್‌ಪುರಿ ದಬಾಂಗ್ಸ್ ಗೆಲುವನ್ನು ದಾಖಲಿಸಿದೆ. ಅತ್ತ ಕಳೆದ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಮುಂಬೈ ಹೀರೋಸ್ ತಂಡ ಈ ಬಾರಿ ಸೆಮಿಫೈನಲ್ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದಿದೆ.
ಹೀಗೆ ನಾಳೆ ( ಮಾರ್ಚ್ 25 ) ನಡೆಯಲಿರುವ ಫೈನಲ್ ಪಂದ್ಯಕ್ಕೆ ಭೋಜ್‌ಪುರಿ ದಬಾಂಗ್ಸ್ ತಂಡ ಎಂಟ್ರಿ ಕೊಟ್ಟಿದ್ದು, ಈ ಪಂದ್ಯಕ್ಕೆ ಪ್ರವೇಶಿಸಲಿರುವ ಮತ್ತೊಂದು ತಂಡ ಯಾವುದು ಎಂಬ ಮಾಹಿತಿ ಇಂದು ನಡೆಯಲಿರುವ ಎರಡನೇ ಸಮಿಫೈನಲ್ ಪಂದ್ಯದ ಫಲಿತಾಂಶದಲ್ಲಿ ತಿಳಿಯಲಿದೆ. ಈ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳು ಮುಖಾಮುಖಯಾಗಿವೆ.


Click it and Unblock the Notifications











