CCL:16 ಎಸೆತಕ್ಕೆ ಅರ್ಧಶತಕ ಚಚ್ಚಿದ ಬಚ್ಚನ್; ಚೆನ್ನೈ ರೈನೋಸ್ ಸೋಲಿಸಿ ಹ್ಯಾಟ್ರಿಕ್ ಬಾರಿಸಿದ ಕರ್ನಾಟಕ

ಪ್ರಸ್ತುತ ನಡೆಯುತ್ತಿರುವ ಸೆಲೆಬ್ರಿಟಿ ಲೀಗ್ ಟೂರ್ನಿಯಲ್ಲಿನ ಲೀಗ್ ಹಂತದ ಹತ್ತನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಚೆನ್ನೈ ರೈನೋಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ಕಂಡಿದೆ. ಇದು ತಂಡ ಟೂರ್ನಿಯಲ್ಲಿ ಗೆದ್ದಿರುವ ಸತತ ಮೂರನೇ ಪಂದ್ಯವಾಗಿದ್ದು, ಹ್ಯಾಟ್ರಿಕ್ ಬಾರಿಸಿ ಸೋಲಿಲ್ಲದ ಸರದಾರನಂತೆ ತನ್ನ ಸೆಮಿಫೈನಲ್ ಹಾದಿಯನ್ನು ಸರಳಗೊಳಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಪ್ರದೀಪ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ಚೆನ್ನೈ ರೈನೊಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ರೈನೋಸ್ ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು. ಚೆನ್ನೈ ಪರ ರಮಣ 20, ವಿಕ್ರಾಂತ್ 23 ( ರಿಟೈರ್ಡ್ ಹರ್ಟ್ ), ಪೃಥ್ವಿ 4, ವಿಷ್ಣು ವಿಶಾಲ್ ಅಜೇಯ 22 ಹಾಗೂ ಶಾಂತನು ಅಜೇಯ 1 ರನ್ ಕಲೆ ಹಾಕಿದರು. ಕರ್ನಾಟಕ ಬುಲ್ಡೋಜರ್ಸ್ ಪರ ಡಾರ್ಲಿಂಗ್ ಕೃಷ್ಣ ಒಂದು ವಿಕೆಟ್ ಪಡೆದರು ಹಾಗೂ ಜಯರಾಮ್ ಪೃಥ್ವಿ ಅವರನ್ನು ರನ್‌ಔಟ್ ಮಾಡಿದರು.
ಇತ್ತ ಕರ್ನಾಟಕ ಬುಲ್ಡೋಜರ್ಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 109 ರನ್ ಕಲೆಹಾಕಿ 24 ರನ್‌ಗಳ ಮುನ್ನಡೆ ಕಾಯ್ದುಕೊಂಡಿತು. ಕರ್ನಾಟಕ ಬುಲ್ಡೋಜರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಪ್ರದೀಪ್ ಬೋಗಾದಿ 2 ಸಿಕ್ಸರ್, 3 ಬೌಂಡರಿಗಳ ಸಹಿತ 27 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿದರೆ, ಡಾರ್ಲಿಂಗ್ ಕೃಷ್ಣ 1 ಸಿಕ್ಸರ್ ಹಾಗೂ ಬರೋಬ್ಬರಿ 9 ಬೌಂಡರಿಗಳ ಸಹಿತ 33 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದರು.
ಹೀಗೆ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಚೆನ್ನೈ ರೈನೋಸ್ ತನ್ನ ಪಾಲಿನ ಎರಡನೇ ಇನ್ನಿಂಗ್ಸ್‌ನಲ್ಲಿ ಕಮ್‌ಬ್ಯಾಕ್ ಮಾಡಿತು. 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 102 ರನ್‌ಗಳ ಗುರಿಯನ್ನು ನೀಡಿತು. ಚೆನ್ನೈ ರೈನೋಸ್ ಪರ ವಿಷ್ಣು ವಿಶಾಲ್ 32 ರನ್ ಚಚ್ಚಿ ಅಬ್ಬರಿಸಿದರೆ, ಶಾಂತನು 7, ದಶರತಿ 5, ಪೃಥ್ವಿ 24, ವಿಕ್ರಾಂತ್ 27, ಅಶೋಕ ಸೆಲ್ವನ್ ಡಕ್ ಔಟ್ ಹಾಗೂ ರಮಣ ಅಜೇಯ 20 ರನ್ ಗಳಿಸಿದರು.
ಆರಂಭದಲ್ಲಿ ವಿಷ್ಣು ವಿಶಾಲ್ ಅಬ್ಬರಿಸಿದರೆ, ಅಂತಿಮ ಹಂತದಲ್ಲಿ ಪೃಥ್ವಿ 9 ಎಸೆತಗಳಲ್ಲಿ 24 ರನ್ ಹಾಗೂ ವಿಕ್ರಾಂತ್ 7 ಎಸೆತಗಳಲ್ಲಿ 21 ರನ್ ಗಳಿಸಿ ಅಬ್ಬರಿಸಿದರು. ಕರ್ನಾಟಕ ಬುಲ್ಡೋಜರ್ಸ್ ಪರ ಸುನಿಲ್ ರಾವ್ 2 ವಿಕೆಟ್, ನಾಯಕ ಪ್ರದೀಪ್ ಬೋಗಾದಿ 2 ವಿಕೆಟ್ ಹಾಗೂ ಪೆಟ್ರೋಲ್ ಪ್ರಸನ್ನ ಮತ್ತು ಅರುಣ್ ಯೋಗಿ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಚೆನ್ನೈ ರೈನೋಸ್ ನೀಡಿದ 102 ರನ್‌ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಅರುಣ್ ಬಚ್ಚನ್ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ 8.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 104 ರನ್‌ಗಳನ್ನು ಬಾರಿಸಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಟೂರ್ನಿಯ ಈ ಹಿಂದಿನ ತನ್ನ ಎರಡೂ ಪಂದ್ಯಗಳಲ್ಲಿಯೂ ಗೆದ್ದಿದ್ದ ಕರ್ನಾಟಕ ಈ ಗೆಲುವಿನೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿತು.

ಕರ್ನಾಟಕ ಬುಲ್ಡೋಜರ್ಸ್ ಪರ ರಾಜೀವ್ 5, ಕಿಚ್ಚ ಸುದೀಪ್ 2 ರನ್ ಬಾರಿಸಿ ಔಟ್ ಆದರೆ, ನಾಯಕ ಪ್ರದೀಪ್ ಬೋಗಾದಿ ಡಕ್ ಔಟ್ ಆದರು. ಇನ್ನುಳಿದಂತೆ ಜಯರಾಮ್ ಕಾರ್ತಿಕ್ 34 ರನ್ ಬಾರಿಸಿದರೆ ಅರುಣ್ ಬಚ್ಚನ್ 18 ಎಸೆತಗಳಲ್ಲಿ ಅಜೇಯ 57 ರನ್ ಚಚ್ಚಿದರು. ಅರುಣ್ ಬಚ್ಚನ್ ಅವರ ಈ ಅಬ್ಬರದ ಇನ್ನಿಂಗ್ಸ್ 3 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಒಳಗೊಂಡಿದೆ. ಅರುಣ್ ಬಚ್ಚನ್ 16 ಎಸೆತಗಳಲ್ಲಿ 52 ರನ್ ಕಲೆಹಾಕಿ ಅರ್ಧಶತಕ ಬಾರಿಸಿ ಆರಂಭಿಕ ಆಘಾತ ಕಂಡಿದ್ದ ಕರ್ನಾಟಕ ಬುಲ್ಡೋಜರ್ಸ್ ಗೆಲುವಿಗೆ ಪ್ರಮುಖ ಕಾರಣರಾದರು.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಬ್ಬರಿಸಿದ ಡಾರ್ಲಿಂಗ್ ಕೃಷ್ಣ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಕರ್ನಾಟಕ ಬುಲ್ಡೋಜರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಸೆಮಿಫೈನಲ್ ಹಾದಿ ಸುಲಭ ಮಾಡಿಕೊಂಡಿದೆ. ಚೆನ್ನೈ ರೈನೋಸ್ ಟೂರ್ನಿಯಲ್ಲಿ ತನ್ನ ಎರಡನೇ ಸೋಲನ್ನು ಕಂಡಿದ್ದು ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ.
ಚೆನ್ನೈ ರೈನೋಸ್ ಆಡುವ 11ರ ಬಳಗ: ಆರ್ಯ (ನಾಯಕ), ವಿಕ್ರಾಂತ್, ಅಶೋಕ್ ಸೆಲ್ವನ್, ಶಾಂತನು, ಪೃಥ್ವಿ, ವಿಷ್ಣು ವಿಶಾಲ್, ರಮಣ, ಶಿವ, ಭರತ್, ದಸರಾತಿ ಮತ್ತು ಆಧವ್ ಕಣ್ಣದಾಸನ್.
ಕರ್ನಾಟಕ ಬುಲ್ಡೋಜರ್ಸ್ ಆಡುವ ಬಳಗ: ಪ್ರದೀಪ್ ಬೋಗಾದಿ ( ನಾಯಕ ), ಜಯರಾಮ್ ಕಾರ್ತಿಕ್, ಕಿಚ್ಚ ಸುದೀಪ್ ( ವಿಕೆಟ್ ಕೀಪರ್ ), ಡಾರ್ಲಿಂಗ್ ಕೃಷ್ಣ, ಸುನಿಲ್ ರಾವ್, ಗಣೇಶ್, ರಾಜೀವ್ ಹನು, ಅರುಣ್, ಪೆಟ್ರೋಲ್ ಪ್ರಸನ್ನ ಹಾಗೂ ಕರಣ್


Click it and Unblock the Notifications