ಸಿಸಿಎಲ್: ಕರ್ನಾಟಕ vs ತೆಲುಗು ವಾರಿಯರ್ಸ್ ಸೆಮಿಫೈನಲ್ ಪಂದ್ಯದ ಟಾಸ್ ವರದಿ, ಪ್ಲೇಯಿಂಗ್ 11 & ಲೈವ್
ಪ್ರಸ್ತುತ ಸಿನಿ ರಸಿಕರು ಹಾಗೂ ಕ್ರಿಕೆಟ್ ಪ್ರಿಯರ ನೆಚ್ಚಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಹತ್ತನೇ ಆವೃತ್ತಿ ಜರುಗುತ್ತಿದ್ದು, ಟೂರ್ನಿ ಮುಕ್ತಯದ ಹಂತಕ್ಕೆ ತಲುಪಿ ಸೆಮಿಫೈನಲ್ ಪಂದ್ಯಗಳು ಜರುಗುತ್ತಿವೆ. ಟೂರ್ನಿಯಲ್ಲಿ ಭಾಗವಹಿಸಿದ್ದ ಎಂಟು ತಂಡಗಳಾದ ಕರ್ನಾಟಕ ಬುಲ್ಡೋಜರ್ಸ್, ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ಪೈಕಿ ನಾಲ್ಕು ತಂಡಗಳು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿವೆ.
ನಾಲ್ಕು ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಕರ್ನಾಟಕ ಬುಲ್ಡೋಜರ್ಸ್, ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಭೋಜ್‌ಪುರಿ ದಬಾಂಗ್ಸ್, ನಾಲ್ಕು ಪಂದ್ಯಗಳನ್ನಾಡಿ ಮೂರು ಪಂದ್ಯಗಳನ್ನು ಗೆದ್ದು ಉಳಿದೊಂದು ಪಂದ್ಯದಲ್ಲಿ ಸೋತು ಮೂರನೇ ಸ್ಥಾನದಲ್ಲಿರುವ ಮುಂಬೈ ಹೀರೊಸ್ ಹಾಗೂ ನಾಲ್ಕು ಪಂದ್ಯಗಳನ್ನಾಡಿ ಎರಡು ಪಂದ್ಯಗಳನ್ನು ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿರುವ ತೆಲುಗು ವಾರಿಯರ್ಸ್ ಸೆಮಿ ಫೈನಲ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡಿವೆ.

ಇನ್ನು ಮೊದಲ ಸೆಮಿಫೈನಲ್ ಪಂದ್ಯ ಇಂದು ( ಮಾರ್ಚ್ 24 ) ಮಧ್ಯಾಹ್ನ 2.30ಕ್ಕೆ ಮುಂಬೈ ಹೀರೋಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ತಂಡಗಳ ನಡುವೆ ನಡೆದಿದ್ದು ಈ ಪಂದ್ಯದಲ್ಲಿ ಆರು ವಿಕೆಟ್‌ಗಳ ರೋಚಕ ಜಯ ಕಂಡ ಭೋಜ್‌ಪುರಿ ದಬಾಂಗ್ಸ್ ತಂಡ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡಿದೆ. ಈ ತಂಡದ ಜತೆ ಮತ್ಯಾವ ತಂಡ ಟ್ರೋಫಿಗಾಗಿ ಸೆಣಸಾಡಲಿದೆ ಎಂಬುದು ಇದೀಗ ಆರಂಭಗೊಂಡಿರುವ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ಮೂಲಕ ತಿಳಿದು ಬರಲಿದೆ.
ವಿಶಾಖಪಟ್ಟಣದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ತೆಲುಗು ವಾರಿಯರ್ಸ್ ಫೀಲ್ಡಿಂಗ್ ಆಯ್ದುಕೊಂಡಿದ್ದು ತನ್ನ ಎದುರಾಳಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಈ ಪಂದ್ಯದಲ್ಲಿ ಯಾವ ಆಟಗಾರರು ಕಣಕ್ಕಿಳಿದಿದ್ದಾರೆ ಹಾಗೂ ಯಾವ ಚಾನೆಲ್‌ನಲ್ಲಿ ಈ ಪಂದ್ಯದ ನೇರಪ್ರಸಾರ ಲಭ್ಯವಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಕರ್ನಾಟಕ ಬುಲ್ಡೋಜರ್ಸ್ : ಕೃಷ್ಣ, ಪ್ರದೀಪ್ ಬೋಗಾದಿ (ನಾಯಕ), ರಾಜೀವ್ ಹನು, ಕಿಚ್ಚ ಸುದೀಪ್ (ವಿಕೆಟ್ ಕೀಪರ್), ಗಣೇಶ್, ಸುನೀಲ್ ರಾವ್, ಜಯರಾಮ್ ಕಾರ್ತಿಕ್, ಕರಣ್ ಅರ್ಯಾನ್, ಚಂದನ್ ಕುಮಾರ್, ನಿರೂಪ್ ಭಂಡಾರಿ, ಅರುಣ್ ಬಚ್ಚನ್.
ತೆಲುಗು ವಾರಿಯರ್ಸ್: ಅಕಿಲ್ ಅಕ್ಕಿನೇನಿ (ನಾಯಕ), ಪ್ರಿನ್ಸ್, ಸುಧೀರ್ ಬಾಬು, ಅಶ್ವಿನ್ ಬಾಬು, ರೋಷನ್, ಥಮನ್, ನಿಖಿಲ್, ಆರ್ ರಘು, ಸಮರ್ಥ್, ಸಚಿನ್ ಜೋಷಿ, ಅಯ್ಯಪ್ಪ ಶರ್ಮ (ವಿಕೆಟ್ ಕೀಪರ್).
ನೇರಪ್ರಸಾರ: ಈ ಪಂದ್ಯದ ನೇರಪ್ರಸಾರವನ್ನು ಸಿಸಿಎಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಉಚಿತವಾಗಿ ನೋಡಬಹುದಾಗಿದೆ. ಕನ್ನಡದಲ್ಲಿ ಪಂದ್ಯದ ನೇರಪ್ರಸಾರವನ್ನು ಜೀ ಪಿಚ್ಚರ್ ವಾಹಿನಿಯಲ್ಲಿ ನೋಡಬಹುದು. ಜೀ5 ಆಪ್ ಚಂದಾದಾರರು ಸಹ ಮೊಬೈಲ್ ಆಪ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ. ಅಲ್ಲದೇ ಸಿಸಿಎಲ್ ವೆಬ್ ತಾಣ ಹಾಗೂ ಟ್ವಿಟರ್ ಖಾತೆಗಳಲ್ಲಿ ಲೈವ್ ಸ್ಕೋರ್ ಅಪ್‌ಡೇಟ್ ಇರಲಿದೆ.


Click it and Unblock the Notifications











