CCL 2023: ಬೆಂಗಾಲ್ vs ಭೋಜ್‌ಪುರಿ, ಮುಂಬೈ vs ಕೇರಳ ಪಂದ್ಯಗಳಲ್ಲಿ ಗೆದ್ದವರಾರು?

ಸದ್ಯ ಹತ್ತನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿ ನಡೆಯುತ್ತಿದೆ. ಟೂರ್ನಿಯ ಲೀಗ್ ಹಂತದಲ್ಲಿ16 ಪಂದ್ಯಗಳು ಆಯೋಜನೆಯಾಗಿದ್ದು, ಪ್ರತಿ ತಂಡಗಳೂ ತಲಾ ನಾಲ್ಕು ಲೀಗ್ ಪಂದ್ಯಗಳನ್ನು ಆಡಲಿವೆ. ಈ ನಾಲ್ಕು ಪಂದ್ಯಗಳಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಸೆಮಿಫೈನಲ್ ತಲುಪಲಿವೆ, ಬಳಿಕ ಫೈನಲ್.
ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್, ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ಸೇರಿದಂತೆ ಒಟ್ಟು ಎಂಟು ತಂಡಗಳು ಕಣಕ್ಕಿಳಿದಿವೆ. ಸದ್ಯ ಲೀಗ್ ಹಂತದ 12 ಪಂದ್ಯಗಳು ಮುಕ್ತಾಯಗೊಂಡಿದ್ದು, ಯಾವ ತಂಡಗಳು ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದುಕೊಂಡು ಸೆಮಿಫೈನಲ್‌ಗೆ ಲಗ್ಗೆ ಇಡಬಹುದು ಎಂಬ ಊಹೆಗಳು ಹಾಗೂ ಲೆಕ್ಕಾಚಾರಗಳು ಆರಂಭಗೊಂಡಿವೆ.
ಇನ್ನು ನಿನ್ನೆ ( ಮಾರ್ಚ್ 5 ) ತಿರುವನಂತಪುರಂನ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆದ ಲೀಗ್ ಹಂತದ ಹನ್ನೊಂದನೇ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ಕಣಕ್ಕಿಳಿದಿದ್ದವು ಮತ್ತು ಹನ್ನೆರಡನೇ ಪಂದ್ಯದಲ್ಲಿ ಮುಂಬೈ ಹೀರೊಸ್ ಹಾಗೂ ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಮಧ್ಯಾಹ್ನ ನಡೆದ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವು ಕಂಡ ಭೋಜ್‌ಪುರಿ ದಬಾಂಗ್ಸ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಬಳಿಕ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 9.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 59 ರನ್ ಗಳಿಸಿ ತೀವ್ರ ಹಿನ್ನಡೆ ಅನುಭವಿಸಿತು. ಅತ್ತ ಭೋಜ್‌ಪುರಿ ದಬಾಂಗ್ಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 116 ರನ್ ಕಲೆಹಾಕಿತು. ಈ ಮೂಲಕ ಭೋಜ್‌ಪುರಿ ದಬಾಂಗ್ಸ್ 57 ರನ್‌ಗಳ ಮುನ್ನಡೆ ಕಾಯ್ದುಕೊಂಡಿತು.
ಎರಡನೇ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 105 ರನ್ ಕಲೆಹಾಕಿತು ಹಾಗೂ ಕಮ್‌ಬ್ಯಾಕ್ ಮಾಡಿ ಎದುರಾಳಿ ಭೋಜ್‌ಪುರಿ ದಬಾಂಗ್ಸ್ ತಂಡಕ್ಕೆ ಗೆಲ್ಲಲು 48 ರನ್‌ಗಳ ಗುರಿಯನ್ನು ನೀಡಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಭೋಜ್‌ಪುರಿ ದಬಾಂಗ್ಸ್ 6.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 49 ರನ್ ಕಲೆಹಾಕಿ ಐದು ವಿಕೆಟ್‌ಗಳ ಜಯ ಸಾಧಿಸಿದೆ.
ನಂತರ ರಾತ್ರಿ ನಡೆದ ಮುಂಬೈ ಹಿರೋಸ್ ಹಾಗೂ ಕೇರಳ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಹೀರೊಸ್ ತಂಡ 7 ವಿಕೆಟ್‌ಗಳ ಗೆಲುವನ್ನು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ಹೀರೊಸ್ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 116 ರನ್ ಕಲೆಹಾಕಿತು. ಅತ್ತ ಕೇರಳ ಸ್ಟ್ರೈಕರ್ಸ್ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 107 ರನ್ ಬಾರಿಸಿತು. 9 ರನ್‌ಗಳ ಮುನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ಹೀರೊಸ್ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿ ಕೇರಳ ಸ್ಟ್ರೈಕರ್ಸ್ ತಂಡಕ್ಕೆ ಗೆಲ್ಲಲು 113 ರನ್‌ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನತ್ತಿದ ಕೇರಳ ಸ್ಟ್ರೈಕರ್ಸ್ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 105 ರನ್ ಕಲೆಹಾಕಿತು. ಈ ಮೂಲಕ ಕೇರಳ ಸ್ಟ್ರೈಕರ್ಸ್ ವಿರುದ್ಧ ಮುಂಬೈ ಹೀರೊಸ್ 7 ರನ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿನ ತನ್ನ ಎರಡನೇ ಗೆಲುವನ್ನು ಕಂಡಿದೆ ಹಾಗೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೂ ಸಹ ಏರಿಕೆ ಕಂಡಿದೆ.


Click it and Unblock the Notifications











