ಮತ್ತೆ ಬುರ್ಜ್ ಖಲೀಫಾ ಎದುರು ಕಿಚ್ಚ; ಜಗತ್ತಿನ ದೊಡ್ಡ ಕಟ್ಟಡದ ಮೇಲೆ CCL ಪ್ರೋಮೊ ಜಗಮಗ
ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ತಾರೆಯರೆಲ್ಲಾ ಒಂದಡೆ ಸೇರಿ ಆಡುವ ಸಿಸಿಎಲ್ ಕ್ರಿಕೆಟ್ ಟೂರ್ನಿ ಮತ್ತೆ ಬರ್ತಿದೆ. ಮತ್ತೆ ಸಿನಿಮಾ ತಾರೆಯರನ್ನೆಲ್ಲಾ ಒಂದೇ ವೇದಿಕೆಯಲ್ಲಿ ನೋಡುವ ಸುವರ್ಣಾವಕಾಶ ಅಭಿಮಾನಿಗಳಿಗೆ ಸಿಗಲಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್(CCL)10ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು ಬುರ್ಜ್ ಖಲೀಫಾ ಕಟ್ಟಡದ ಮೇಲೆ ಪ್ರೋಮೊ ಅನಾವರಣವಾಗಿದೆ.
ದುಬೈನಲ್ಲಿ ನಿನ್ನೆ(ಫೆ.2)ಪ್ರೋಮೋ ಬಿಡುಗಡೆ ಮಾಡುವ ಮೂಲಕ ಸಿಸಿಎಲ್‌ಗೆ ಚಾಲನೆ ಕೊಡಲಾಗಿದೆ. ಜಗತ್ತಿನ ಅತಿದೊಡ್ಡ ಕಟ್ಟಡದ ಮೇಲೆ ಸಿಸಿಎಲ್ ಪ್ರೋಮೋ ಪ್ರದರ್ಶಿಸಲಾಗಿದೆ. ಸ್ಯಾಂಡಲ್‌ವುಡ್‌ನಿಂದ ಕಿಚ್ಚ ಸುದೀಪ್, ಬಾಲಿವುಡ್‌ನ ಸೊಹೈಲ್ ಖಾನ್, ಕಾಲಿವುಡ್‌ನ ಆರ್ಯ ಮತ್ತು ಜೀವಾ , ಟಾಲಿವುಡ್‌ನಿಂದ ತಮನ್ ಮತ್ತು ಸುಧೀರ್ ಬಾಬು, ಬಂಗಾಳಿಯಿಂದ ಜಿಸ್ಸು ಸೇನ್‌ಗುಪ್ತಾ , ಪಂಜಾಬಿಯಿಂದ ಬುನ್ನು ಧಿಲ್ಲೋನ್ ಮತ್ತು ಸೋನು ಸೂದ್, ಮಲಯಾಳಂನಿಂದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ ಎಲ್ಲಾ 8 ತಂಡಗಳ ನಾಯಕರು ಈ ವೇಳೆ ಹಾಜರಿದ್ದರು.

ನಟ ಕಿಚ್ಚ ಸುದೀಪ್ ಮಾತನಾಡಿ "ನಾನು ಈ ಹಿಂದೆ ಸಿನಿಮಾಗಾಗಿ ಬುರ್ಜ್ ಖಲೀಫ್‌ದಲ್ಲಿದ್ದೆ. ಆದರೆ ಈಗ ಕ್ರಿಕೆಟ್‌ಗಾಗಿ ಇಲ್ಲಿರುವುದು ವಿಶೇಷ ಹಾಗೂ ಮರೆಯಲಾಗದ ಸಂಗತಿ" ಎಂದು ಹೇಳಿದ್ದಾರೆ. ಅಂದಹಾಗೆ
ಫೆಬ್ರವರಿ 23ರಿಂದ ಆರಂಭವಾಗುವ ಸಿಸಿಎಲ್ 10ನೇ ಸೀಸನ್ ಟೂರ್ನಿ ಮಾರ್ಚ್ 17 ರವರೆಗೆ ನಡೆಯಲ್ಲಿದೆ. ಲೀಗ್ ರೌಂಡ್ ಮಾರ್ಚ್ 10 ರವರೆಗೆ ನಡೆಯಲಿದ್ದು, ಈ ಸುತ್ತಿನಲ್ಲಿ ಒಟ್ಟು 16 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇಆಫ್ ರೌಂಡ್ ಶುರುವಾಗಲಿದೆ. ಮೊದಲ ಪಂದ್ಯ ಶಾರ್ಜಾದಲ್ಲಿ ನಡೆಯಲ್ಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಸೆಣಸಲಿವೆ.
ಜಿಯೊ ಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಜಿಯೋ ಸಿನಿಮಾದಲ್ಲಿ ಪಂದ್ಯಗಳು ನೇರಪ್ರಸಾರವಾಗಲಿದೆ. ಭಾರತದ ಎಂಟು ಚಲನಚಿತ್ರೋದ್ಯಮಗಳ ಸ್ಟಾರ್ ನಟರನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಪ್ರಶಸ್ತಿಗಾಗಿ ಹೋರಾಡಲಿವೆ. ಶಾರ್ಜಾದಲ್ಲಿ 3 ಪಂದ್ಯಗಳು ನಡೆಯಲ್ಲಿದ್ದು, ಆ ನಂತರ ಲೀಗ್ ಭಾರತಕ್ಕೆ ಕಾಲಿಡಲಿದೆ. ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವೈಜಾಗ್‌ನಲ್ಲಿ ಉಳಿದ ಪಂದ್ಯಗಳು ನಡೆಯುತ್ತವೆ.

ಇನ್ನು ಈ ಬಾರಿ 'ಮುಂಬೈ ಹೀರೋಸ್' ತಂಡಕ್ಕೆ ನಟ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ಕ್ಯಾಪ್ಟನ್ ಆಗಿ ಆಡಲಿದ್ದಾರೆ. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ. 'ಕರ್ನಾಟಕ ಬುಲ್ಡೋಜರ್ಸ್' ತಂಡಕ್ಕೆ ಸುದೀಪ್ ಕ್ಯಾಪ್ಟನ್ ಆಗಿದ್ದಾರೆ. 'ತೆಲುಗು ವಾರಿಯರ್ಸ್' ತಂಡಕ್ಕೆ ವಿಕ್ಟರಿ ವೆಂಕಟೇಶ್ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು ಅಖಿಲ್ ಅಕ್ಕಿನೇನಿ ತಂಡ ಮುನ್ನಡೆಸಲಿದ್ದಾರೆ. ಮೋಹನ್ ಲಾಲ್ ಸಹ-ಮಾಲೀಕರಾಗಿರುವ 'ಕೇರಳ ಸ್ಟ್ರೈಕರ್ಸ್' ತಂಡಕ್ಕೆ ಇಂದ್ರಜಿತ್ ಕ್ಯಾಪ್ಟನ್ ಆಗಿದ್ದಾರೆ. 'ಭೋಜಪುರಿ ದಬಾಂಗ್ಸ್' ತಂಡಕ್ಕೆ ಮನೋಜ್ ತಿವಾರಿ, 'ಪಂಜಾಬ್ ದೆ ಶೇರ್' ತಂಡಕ್ಕೆ ಸೋನು ಸೂದ್ ನಾಯಕರಾಗಿದ್ದಾರೆ. ಇನ್ನು 'ಬೆಂಗಾಲ್ ಟೈಗರ್ಸ್' ತಂಡಕ್ಕೆ ಜಿಸ್ಸು ಸೇನ್‌ಗುಪ್ತ ಮುಂದಾಳತ್ವ ವಹಿಸಿದ್ದಾರೆ.
ಈ ಬಾರಿಯ ತಂಡಗಳು
1. ಕರ್ನಾಟಕ ಬುಲ್ಡೋಜರ್ಸ್
2. ಮುಂಬೈ ಹೀರೋಸ್
3. ತೆಲುಗು ವಾರಿಯರ್ಸ್
4. ಕೇರಳ ಸ್ಟ್ರೈಕರ್ಸ್
5. ಭೋಜ್‌ಪುರಿ ದಬಾಂಗ್ಸ್
6. ಚೆನ್ನೈ ರೈನೋಸ್
7. ಪಂಜಾಬ್ ದಿ ಶೇರ್
8. ಬೆಂಗಾಲ್ ಟೈಗರ್ಸ್


Click it and Unblock the Notifications











