CCL 2025 : ಶುಕ್ರವಾರ ಕಣಕ್ಕಿಳಿಯಲಿದೆ ಕರ್ನಾಟಕ ಬುಲ್ಡೋಜರ್ಸ್? ಸುದೀಪ್ ತಂಡದ ಮುಂದಿನ ಎದುರಾಳಿ ಯಾರು ?
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಇಷ್ಟೇ ಅಲ್ಲ ಸುದೀಪ್ ಅತ್ಯದ್ಭುತ ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಸಿನಿಮಾದಷ್ಟೇ ಕ್ರಿಕೆಟ್‌ನ್ನು ಕೂಡ ಅತೀವವಾಗಿ ಇಷ್ಟ ಪಡುವ ಸುದೀಪ್ ಚೂರು ಬಿಡುವು ಸಿಕ್ಕರೂ ಸಾಕು ಕಾಣಿಸುವುದು ಮೈದಾನದಲ್ಲಿಯೇ.
ಕೆಸಿಸಿ, ಸಿಸಿಎಲ್ ಹೀಗೆ ವರ್ಷಕ್ಕೆ ಕಡಿಮೆ ಅಂದರೂ ಎರಡು ಬಾರಿ ತಮ್ಮ ಹುಡುಗರ ಜೊತೆ ಅಖಾಡಕ್ಕಿಳಿಯುವ ಸುದೀಪ್ ಈ ವರ್ಷ ಕೂಡ ಸಿಸಿಎಲ್‌ನಲ್ಲಿ ಭಾಗವಹಿಸಿದ್ದಾರೆ. ಮೊದಲ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ತಮ್ಮ ತಂಡದ ಜೊತೆ ಸೇರಿ ಮಣಿಸಿದ್ದಾರೆ. ಈಗ ಚೆನ್ನೈ ಸರದಿ.

ಹೌದು, ಸಿಸಿಎಲ್‌ನ ಹನ್ನೊಂದನೇ ಸೀಸನ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಚೆನ್ನೈ ರೈನೋಸ್ ತಂಡಕ್ಕೆ ಈ ಶುಕ್ರವಾರ ಹೈದ್ರಾಬಾದ್‌ನಲ್ಲಿ ಸವಾಲು ಹಾಕಲಿದೆ. ಫೆಬ್ರವರಿ 14ರಂದು ಶುಕ್ರವಾರ ಹೈದ್ರಾಬಾದ್‌ನ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಮಧ್ಯಾಹ್ನ 2 ಗಂಟೆಗೆ ಪಂದ್ಯ ಶುರುವಾಗಲಿದೆ.
ಇನ್ನು ಈಗಾಗಲೇ ಮೊದಲ ಪಂದ್ಯ ಗೆದ್ದು ಬೀಗಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಎರಡನೇ ಪಂದ್ಯವನ್ನು ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. ಕಳೆದ ಮ್ಯಾಚ್‌ನಲ್ಲಿ ಡಾರ್ಲಿಂಗ್ ಕೃಷ್ಣ ಆಡಿದ ಪರಿ ಈ ವಿಶ್ವಾಸವನ್ನು ಇನ್ನು ಹೆಚ್ಚಿಸಿದೆ. ಕೇವಲ ಡಾರ್ಲಿಂಗ್ ಕೃಷ್ಣ ಮಾತ್ರ ಅಲ್ಲ ರಾಜೀವ್ ಹನು, ಕರಣ್ ಆರ್ಯನ್, ಚಂದನ್ ಕುಮಾರ್, ಮಂಜುನಾಥ್ ಗೌಡ, ಗಣೇಶ್ ಹೀಗೆ ಎಲ್ಲರ ಪರ್ಫಾಮೆನ್ಸ್‌ದಿಂದ ತೆಲುಗು ವಾರಿಯರ್ಸ್ ಮುಂದೆ ಕರ್ನಾಟಕ ಬುಲ್ಡೋಜರ್ಸ್ ತಂಡದ ತೂಕ ಹೆಚ್ಚು ತೂಗುತ್ತೆ.
ಇನ್ನು ಚೆನ್ನೈ ತನ್ನ ಮೊದಲ ಮ್ಯಾಚ್‌ನಲ್ಲಿಯೇ ಸೋಲನ್ನು ಅನುಭವಿಸಿದೆ. ಬ್ಯಾಟಿಂಗ್‌ನಲ್ಲಿ ರಮಣ ಹೊರತು ಪಡಿಸಿದರೆ ಬೇರೆ ಯಾರು ಲಯದಲ್ಲಿ ಇದ್ದಂತೆ ಕಾಣುತ್ತಿಲ್ಲ. ಮೊದಲ ಪಂದ್ಯದಲ್ಲಿ ಬೌಲಿಂಗ್ ಕೂಡ ಕರಾರುವಕ್ಕಾಗಿರಲಿಲ್ಲ. ಈ ಕಾರಣದಿಂದ ಹೈದರಾಬಾದ್‌ನಲ್ಲಿ ಕೂಡ ಕರ್ನಾಟಕದ ಬಾವುಟ ಹಾರುವುದು ಖಚಿತವೆನ್ನುವ ಮಾತುಗಳು ಸದ್ಯ ಕೇಳಿ ಬರುತ್ತಿವೆ.
6 ವಿಕೆಟ್‌ಗಳ ಗೆಲುವು ಕಂಡಿದ್ದ ಕರ್ನಾಟಕ ಬುಲ್ಡೋಜರ್ಸ್
ಕಳೆದ ವರ್ಷ ಸೆಲೆಬ್ರಿಟಿ ಲೀಗ್ ಟೂರ್ನಿಯಲ್ಲಿನ ಲೀಗ್ ಹಂತದ ಹತ್ತನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಚೆನ್ನೈ ರೈನೋಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ಕಂಡಿತ್ತು. ಈ ಮೂಲಕ ಟೂರ್ನಿಯಲ್ಲಿ ಸತತವಾಗಿ ಮೂರನೇ ಪಂದ್ಯ ಗೆದ್ದು ಸಮಿಫೈನಲ್ ಹಾದಿಯನ್ನು ಸುಗಮಗೊಳಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಪ್ರದೀಪ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ಚೆನ್ನೈ ರೈನೊಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಮಿಂಚಿದ್ದ ಡಾರ್ಲಿಂಗ್ ಕೃಷ್ಣ
ಕಳೆದ ವರ್ಷದ ಈ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 109 ರನ್ ಕಲೆಹಾಕಿ 24 ರನ್‌ಗಳ ಮುನ್ನಡೆ ಕಾಯ್ದುಕೊಂಡಿತು. ಕರ್ನಾಟಕ ಬುಲ್ಡೋಜರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಪ್ರದೀಪ್ ಬೋಗಾದಿ 2 ಸಿಕ್ಸರ್, 3 ಬೌಂಡರಿಗಳ ಸಹಿತ 27 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿದ್ದರೆ, ಡಾರ್ಲಿಂಗ್ ಕೃಷ್ಣ 1 ಸಿಕ್ಸರ್ ಹಾಗೂ ಬರೋಬ್ಬರಿ 9 ಬೌಂಡರಿಗಳ ಸಹಿತ 33 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದ್ದರು. ಈ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು
ಕರ್ನಾಟಕ ಬುಲ್ಡೋಜರ್ಸ್ ತಂಡ
ಕಿಚ್ಚ ಸುದೀಪ್ (ನಾಯಕ), ರಾಜೀವ್ ಹನು, ಮಂಜುನಾಥ್ ಗೌಡ, ಡಾರ್ಲಿಂಗ್ ಕೃಷ್ಣ, ಗೋಲ್ಡನ್ ಸ್ಟಾರ್ ಗಣೇಶ್, ಅನೂಪ್ ಭಂಡಾರಿ, ಚಂದನ್ ಕುಮಾರ್, ಕರಣ್ ಆರ್ಯನ್, ಕಾರ್ತಿಕ್ ಜಯರಾಮ್, ಸುನೀಲ್ ರಾವ್, ಸಾಗರ್ ಗೌಡ.


Click it and Unblock the Notifications











