CCL 2025: ಕ್ರಿಕೆಟ್ ಪ್ರಾಕ್ಟೀಸ್ ಬಳಿಕ ಮೆಟ್ರೋ ಏರಿದ ಸುದೀಪ್ ಮತ್ತವರ ತಂಡ
ಮತ್ತೆ ತಾರೆಯರ ಕ್ರಿಕೆಟ್ ಕಲರವ ಶುರುವಾಗಿದೆ. ಸಿಸಿಎಲ್ ಸೀಸನ್ 11 ಆರಂಭವಾಗಿದೆ. ಕಳೆದ ವೀಕೆಂಡ್ ಒಟ್ಟು 2 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ತೆಲುಗು ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದು ಬೀಗಿತ್ತು. ಎರಡನೇ ಪಂದ್ಯಕ್ಕೆ ಇದೀಗ ತಂಡ ಸಿದ್ಧತೆ ನಡೆಸುತ್ತಿದೆ.
ನಾಳೆ(ಫೆಬ್ರವರಿ 14) ಹೈದರಾಬಾದ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಎರಡನೇ ಪಂದ್ಯ ಆಡಲಿದೆ. ಮಧ್ಯಾಹ್ನ 2 ಗಂಟೆಗೆ ಶುರುವಾಗುವ ಪಂದ್ಯದಲ್ಲಿ ಚೆನ್ನೈ ರೈನೋಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡೂ ತಂಡಗಳು ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿವೆ. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ಈಗಾಗಲೇ ಅಲ್ಲಿ ಸುದೀಪ್ ಅಂಡ್ ತಾಲೀಮು ನಡೆಸುತ್ತಿದೆ. ಇತ್ತೀಚೆಗೆ ತಾಲೀಮು ಮುಗಿಸಿ ತಂಡ ಹೈದರಾಬಾದ್ ಮೆಟ್ರೋ ಏರಿ ತಾವು ಉಳಿಸಿದ್ದ ಹೋಟೆಲ್ ತಲುಪಿದೆ.

ಸುದೀಪ್ ತಂಡ ತಂಡದ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸಿರುವ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಅಭಿಮಾನಿಗಳ ಜೊತೆ ಫೋಟೊಗೂ ಪೋಸ್ ಕೊಟ್ಟಿದ್ದಾರೆ. ಹೈದರಾಬಾದ್ ಮೆಟ್ರೋ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ನಡುವಿನ ಜಿದ್ದಾಜಿದ್ದಿ ರೀತಿಯಲ್ಲೇ ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ಚೆನ್ನೈ ರೈನೋಸ್ ಪಂದ್ಯ ಕುತೂಹಲ ಕೆರಳಿಸುತ್ತದೆ.
ಫೈನಲ್ ಪಂದ್ಯಕ್ಕಿಂತ ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ಚೆನ್ನೈ ರೈನೋಸ್ ಪಂದ್ಯ ಬಹಳ ಮುಖ್ಯ ಎನ್ನುವಂತೆ ಕೆಲವರು ಭಾವಿಸುತ್ತಾರೆ. ಹಾಗಾಗಿ 2ನೇ ಪಂದ್ಯ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಡಾರ್ಲಿಂಗ್ ಕೃಷ್ಣ ಅಬ್ಬರದ ಬ್ಯಾಟಿಂಗ್ ಮಾಡಿ ನೋಡುಗರನ್ನು ರಂಜಿಸಿದ್ದರು. ಈ ಪಂದ್ಯದಲ್ಲಿ ಯಾರು ಹೇಗೆ ಆಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.
ತಲಾ 10 ಓವರ್‌ಗಳ 4 ಇನ್ನಿಂಗ್ಸ್‌ಗಳಾಗಿ ಟೆಸ್ಟ್ ಮ್ಯಾಚ್ ಫಾರ್ಮೆಟ್‌ನಲ್ಲಿ ಸಿಸಿಎಲ್ ಪಂದ್ಯಗಳು ನಡೆಯುತ್ತದೆ. ಟಿ20 ಪಂದ್ಯಗಳಿಗಿಂತ ಬಹಳ ರೋಚಕವಾಗಿ ಇಲ್ಲಿ ಪೈಪೋಟಿ ಏರ್ಪಡುತ್ತದೆ. ಈಗಾಗಲೇ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ತಂಡಗಳು ತಲಾ 2 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದವು. 3ನೇ ಬಾರಿ ಚಾಂಪಿಯನ್ ಆಗಲು ಎರಡೂ ತಂಡಗಳು ತುದಿಗಾಲಲ್ಲಿ ನಿಂತಿವೆ.
ನಟ ಆರ್ಯ ಈ ಬಾರಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ತಂಡ ಬೆಂಗಾಲ್ ಟೈಗರ್ಸ್ ಎದುರು ಸೋಲುಂಡಿತ್ತು. 2ನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇನ್ನು ಮೊದಲ ಪಂದ್ಯದಲ್ಲಿ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಬಹಳ ಹುಮ್ಮಸ್ಸಿನಿಂದಲೇ ಚೆನ್ನೈ ತಂಡಕ್ಕೆ ಮುಖಾಮುಖಿ ಆಗುತ್ತಿದೆ. ಕಳೆದ ಪಂದ್ಯದಲ್ಲಿ ಸ್ಟಾರ್ ಪ್ಲೇಯರ್ ರಾಜೀವ್ ಅಷ್ಟಾಗಿ ಅಬ್ಬರಿಸಲಿಲ್ಲ. ಹಾಗಾಗಿ 2ನೇ ಪಂದ್ಯದಲ್ಲಿ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ.
ವಯಸ್ಸು 50 ದಾಟಿದರೂ ನಟ ಸುದೀಪ್ ಬಹಳ ಹುರುಪಿನಿಂದ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಂಡವನ್ನು ಬಹಳ ಚೆನ್ನಾಗಿ ಮುನ್ನಡೆಸುತ್ತಿದ್ದಾರೆ. ಅಭಿಮಾನಿಗಳು ಅವರನ್ನು ಮೈದಾನದಲ್ಲಿ ನೋಡಲು ಬಹಳ ಇಷ್ಟಪಡುತ್ತಾರೆ. ಬ್ಯಾಟಿಂಗ್, ಕೀಪಿಂಗ್‌ನಲ್ಲಿ ಕಿಚ್ಚ ಸದಾ ಮುಂದಿರುತ್ತಾರೆ.


Click it and Unblock the Notifications











