CCL 2025; ಚೆನ್ನೈ ವಿರುದ್ಧ ಗೆದ್ದು ಸಿಸಿಎಲ್ ಟ್ರೋಫಿಗೆ ಮುತ್ತಿಟ್ಟ ಪಂಜಾಬ್ ದೇ ಶೇರ್
8 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಪಂಜಾಬ್ ದೇ ಶೇರ್ ತಂಡ ಸಿಸಿಎಲ್ 2025 ಟ್ರೋಫಿ ಎತ್ತಿ ಹಿಡಿದಿದೆ. ಚೆನ್ನೈ ರೈನೋಸ್ ಎದುರು ನಡೆದ ಫೈನಲ್ ಪಂದ್ಯದಲ್ಲಿ ಹಾರ್ಡಿ ಸಂಧು ನೇತೃತ್ವದ ತಂಡ ಗೆಲುವಿನ ನಗೆ ಬೀರಿದೆ. ಯಾವುದೇ ಹಂತದಲ್ಲೂ ಪೈಪೋಟಿ ನೀಡದೇ ಚೆನ್ನೈ ಸೋಲು ಒಪ್ಪಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಪಂಜಾಬ್ ತಂಡ ಚಾಂಪಿಯನ್ ಆಗಿದೆ.
2ನೇ ಇನ್ನಿಂಗ್ಸ್‌ನಲ್ಲಿ ಪಂಜಾಬ್ ಗೆಲ್ಲಲು 60 ಎಸೆತಗಳಲ್ಲಿ 71 ರನ್ ಗುರಿಯನ್ನು ಚೆನ್ನೈ ನೀಡಿತ್ತು. ಕೇವಲ 2 ವಿಕೆಟ್ ಕಳೆದುಕೊಂಡು ಇನ್ನು 2 ಓವರ್ ಬಾಕಿ ಇರುವಂತೆ ಪಂಜಾಬ್ ತಂಡ ಗೆಲುವಿನ ದಡ ಸೇರಿತು. ಆ ಮೂಲಕ 3ನೇ ಬಾರಿ ಟ್ರೋಫಿ ಗೆಲ್ಲುವ ಚೆನ್ನೈ ಕನಸು ನುಚ್ಚು ನೂರಾಯಿತು. ಲೀಗ್ ಹಂತದ 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಪಂಜಾಬ್ ಗೆದ್ದಿತ್ತು. ಬಳಿಕ ಸೆಮಿಫೈನಲ್ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿತ್ತು.

ಟಾಸ್ ಸೋತು ಚೆನ್ನೈ ರೈನೋಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಚೆನ್ನೈ 4 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿತು. ತಂಡದ ಪರ ಪೃಥ್ವಿ ಅತ್ಯಧಿಕ 23, ರಮಣ 17, ವಿಕ್ರಾಂತ್ 15 ಹಾಗೂ ಶರಣ್ 13 ರನ್ ಕಲೆ ಹಾಕಿದರು. ಪಂಜಾಬ್ ಪರ ಸೂಯುಶ್ ರೈ, ದಕ್ಷ್ ಸಿಂಗ್ ಮತ್ತು ಬಬಲ್ ರೈ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನಿಂಗ್ಸ್ ಕೊನೆ ಎಸೆತದಲ್ಲಿ ದಸರತಿ ಸಿಕ್ಸರ್ ಸಿಡಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಚೆನ್ನೈ ಆರಂಭದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಯಿತು. ಹಾಗಾಗಿ ಮೊದಲ 5 ಓವರ್‌ಗಳಲ್ಲಿ ಕೇವಲ 41 ರನ್ ಮಾತ್ರ ಗಳಿಸಿತ್ತು. ಅಂತಿಮವಾಗಿ 89 ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಬಳಿಕ ಪಂಜಾಬ್ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿತು. ಬಬಲ್ ರೈ ಮತ್ತು ಕರಣ್ ವಾಹಿ ಚೆನ್ನೈ ಬೌಲರ್‌ಗಳನ್ನು ದಂಡಿಸಿದರು. ಕೊನೆಗೆ ಮೊದಲ ಇನ್ನಿಂಗ್ಸ್‌ನಲ್ಲಿ ತಂಡ 1 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿ ಉತ್ತಮ ಹೋರಾಟ ಪ್ರದರ್ಶಿಸಿತು.
2ನೇ ಇನ್ನಿಂಗ್ಸ್ ಆರಂಭದಲ್ಲೇ ಚೆನ್ನೈ ರೈನೋಸ್ ತಂಡ ಸಂಕಷ್ಟಕ್ಕೆ ಸಿಲುಕಿತು. 14 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಅಂತಿಮವಾಗಿ 85 ಗಳಿಸಲಷ್ಟೇ ತಂಡ ಶಕ್ತವಾಯಿತು. ಹಾಗಾಗಿ ಪಂಜಾಬ್‌ಗೆ 2ನೇ ಇನ್ನಿಂಗ್ಸ್‌ನಲ್ಲಿ 71 ಗಳಿಸಬೇಕಾದ ಗುರಿ ಎದುರಾಗಿತ್ತು. ಪಂಜಾಬ್ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಗಳಿಗೆ ಕೈ ಹಾಕದೇ ನಿಧಾನವಾಗಿ ರನ್ ಸೇರಿಸಿ ಅಂತಮವಾಗಿ ಗೆದ್ದು ಬೀಗಿದರು. ತಂಡದ ಪರ ಅನುಜ್ 40 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.


Click it and Unblock the Notifications











