CCL 2025: ಡಾರ್ಲಿಂಗ್ ಕೃಷ್ಣ ಅಬ್ಬರಿಸಿದ್ರು ಸೋಲೊಪ್ಪಿಕೊಂಡ ಬುಲ್ಡೋಜರ್ಸ್
ಸಿಸಿಎಲ್ 2025 ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಸೋತಿದೆ. ಪಂಜಾಬ್ ದೇ ಶೇರ್ ವಿರುದ್ಧ ಸೂರತ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 2 ರನ್‌ಗಳ ರೋಚಕ ಸೋಲ ಅನುಭವಿಸಿದೆ. ಆದರೂ ಸೆಮಿ ಫೈನಲ್‌ಗೆ ಸುದೀಪ್ ನೇತೃತ್ವದ ತಂಡ ಎಂಟ್ರಿ ಕೊಟ್ಟಿದೆ.
ಮೊದಲ 3 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಕರ್ನಾಟಕ ಬುಲ್ಡೋಜರ್ಸ್ ತಂಡ ಸದ್ದು ಮಾಡಿತ್ತು. ಉತ್ತಮ ರನ್‌ರೇಟ್ ಜೊತೆಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೂಡ ಬುಲ್ಡೋಜರ್ಸ್ ಅಗ್ರಸ್ಥಾನದಲ್ಲಿತ್ತು. ಸೆಮಿಫೈನಲ್ ಟಿಕೆಟ್ ಫೈನಲ್ ಮಾಡಿಕೊಂಡಿದ್ದ ಸುದೀಪ್ ನೇತೃತ್ವದ ತಂಡ ಅಂತಿಮ ಲೀಗ್ ಪಂದ್ಯದಲ್ಲಿ ಪಂಜಾಬ್ ದೇ ಶೇರ್ ತಂಡವನ್ನು ಎದುರಿಸಿತ್ತು.

ಟಾಸ್ ಗೆದ್ದ ಪಂಜಾಬ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಪಂಜಾಬ್ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತ್ತು. ತಂಡದ ಪರ ಬಬಲ್ 20 ಎಸೆತಗಳಲ್ಲಿ 38 ರನ್ ಗಳಿಸಿದರು. ಅನುಜ್ 8 ಎಸೆತಗಳಲ್ಲಿ 21 ರನ್ ಗಳಿಸಿದ್ದೇ ತಂಡದ ಪರ ಅಧಿಕ ಎನಿಸಿಕೊಂಡಿತ್ತು. ಕರ್ನಾಟಕ ಬುಲ್ಡೋಜರ್ಸ್ ಪರ ಕರಣ್ ಹಾಗೂ ಚಂದನ್ ತಲಾ 2 ವಿಕೆಟ್ ಕಬಳಿಸಿದರು.
ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 91 ರನ್ ಮಾತ್ರ ಗಳಿಸಿತು. 26 ಎಸೆತಗಳಲ್ಲಿ ರಾಜೀವ್ 40 ರನ್ ಗಳಿಸಿ ಉತ್ತಮ ಕೊಡುಗೆ ನೀಡಿದರು. ರಾಜೀವ್ ಜೊತೆ ಬ್ಯಾಟಿಂಗ್ ಆರಂಭಿಸಿದ್ದ ಚಂದನ್ 18 ರನ್ ಗಳಿಸಿದರು. ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ನಿರಾಸೆ ಮೂಡಿಸಿದ್ದರು.
2ನೇ ಇನ್ನಿಂಗ್ಸ್‌ನಲ್ಲಿ ಪಂಜಾಬ್ ಬ್ಯಾಟಿಂಗ್ ಆರಂಭದಲ್ಲೇ ಭಾರೀ ಕುಸಿತ ಕಂಡಿತು. ಬಳಿಕ ನಿಧಾನವಾಗಿ ಚೇತರಿಸಿಕೊಂಡು ಅಂತಿಮವಾಗಿ ತಂಡ 10 ಓವರ್‌ಗಳಲ್ಲಿ 94 ರನ್ ಗಳಿಸಿತು. ಆ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 125 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿ 2ನೇ ಇನ್ನಿಂಗ್ಸ್ ಆರಂಭಿಸಿದ ಬುಲ್ಡೋಜರ್ಸ್ ಆರಂಭದಲ್ಲಿ ರನ್ ಗಳಿಸಲು ಪರದಾಡಿದರು.
ನಿಧಾನವಾಗಿ ಟಾರ್ಗೆಟ್ ಕಡೆ ಮುಖ ಮಾಡಿದ ತಂಡ ಒಂದು ಹಂತದಲ್ಲಿ ಬಹಳ ಸುಲಭವಾಗಿ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿತ್ತು. ಡಾರ್ಲಿಂಗ್ ಕೃಷ್ಣ ಹಾಗೂ ರಾಜೀವ್ ಕ್ರೀಸ್‌ನಲ್ಲಿ ಇರುವರೆಗೂ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವಂತಾಗಿತ್ತು. ಆದರೆ ಅವರಿಬ್ಬರು ಔಟ್ ಆದ ಬಳಿಕ ಗೆಲುವು ಕಷ್ಟ ಎನ್ನುವಂತಾಯಿತು. ಕೊನೆಗೆ ಅಂತೂ ಇಂತೂ ಗೆಲುವಿನ ಹೊಸ್ತಿಲಿಗೆ ಬಂದು ಸೋಲುವಂತಾಯಿತು.
ಕೊನೆ ಓವರ್‌ನಲ್ಲಿ 7 ರನ್ ಗಳಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡು ಅಂತಿಮವಾಗಿ 10 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಮಾತ್ರ ಗಳಿಸಿತು. ಹಾಗಾಗಿ 2 ರನ್‌ಗಳಿಂದ ಪಂಜಾಬ್ ದೇ ಶೇರ್ ಎದುರು ಕರ್ನಾಟಕ ಬುಲ್ಡೋಜರ್ಸ್ ಸೋಲು ಒಪ್ಪಿಕೊಳ್ಳುವಂತಾಯಿತು.


Click it and Unblock the Notifications











