ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದ ತಮಿಳುನಾಡಿನಲ್ಲೇ ಹಳದಿ ಕೆಂಪು ಧ್ವಜ ಹಿಡಿದು ಕಿಚ್ಚನ ಸಂಭ್ರಮ
ಕಿಚ್ಚ ಸುದೀಪ್ ತಮಿಳುನಾಡಿನಲ್ಲಿ ಕನ್ನಡ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ. ಸಿಸಿಎಲ್ ಕ್ರಿಕೆಟ್ ಟೂರ್ನಿಗಾಗಿ ಸುದೀಪ್ ತಂಡ ತಮಿಳುನಾಡಿನ ಕೊಯಂಬತ್ತೂರಿಗೆ ಹೋಗಿದೆ. ನಿನ್ನೆ(ಜನವರಿ 25) ಭೋಜ್‌ಪುರಿ ದಬಾಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಿಚ್ಚನ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದು ಬೀಗಿದೆ. ಆ ಬಳಿಕ ಮೈದಾನದಲ್ಲಿ ಸುದೀಪ್ ಕನ್ನಡ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ಕನ್ನಡ ಧ್ವಜಕ್ಕೆ ಅಪಮಾನ ಮಾಡಲಾಗಿತ್ತು. ಇತ್ತೀಚೆಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ಟಿಟಿ ವಾಹನದ ಮೇಲೆ ಕನ್ನಡ ಧ್ವಜವಿತ್ತು ಎಂಬ ಕಿರಿಕ್ ನಡೆದಿತ್ತು. ವಾಹನ ನಿಲ್ಲಿಸಿ ತಮಿಳುನಾಡಿನ ಈರೋಡ್ ನಿವಾಸಿ ಸಿಲಂಬರಸನ್ ಕ್ಯಾತೆ ತೆಗೆದಿದ್ದ. ವಾಹನಕ್ಕೆ ಕಟ್ಟಿದ್ದ ಕನ್ನಡ ಧ್ವಜವನ್ನು ಬಲವಂತವಾಗಿ ತೆಗೆಸಿ ಕಾಲಿನಿಂದ ತುಳಿದು ಅಪಮಾನ ಮಾಡಿದ್ದ. ಈಗ ಅದೇ ತಮಿಳುನಾಡಿನಲ್ಲಿ ಸುದೀಪ್ ಕನ್ನಡ ಧ್ವಜ ಹಾರಿಸಿದ್ದಾರೆ ಎಂದು ಅಭಿಮಾನಿಗಳು ವಿಡಿಯೋ ವೈರಲ್ ಮಾಡುತ್ತಿದ್ದಾರೆ.

ಸಿಲಂಬರಸನ್ ಕೃತ್ಯಕ್ಕೆ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲಿಗೆ ತೆರಳಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಪ್ರಕರಣದ ಸಂಬಂಧ ಬೆಂಗಳೂರು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಈರೋಡ್ ಪೊಲೀಸ್ ವರಿಷ್ಠಾದಿಕಾರಿ ಸುಜಾತರವರ ಆದೇಶದ ಮೇರೆಗೆ ಸಿಲಂಬರಸನ್ ಹಾಗೂ ಅಬ್ದುಲ್ ಮಲ್ಲಿಕ್ ಎಂಬುವವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು.
ಯಾವುದೇ ರಾಜ್ಯದ ಲಾಂಛನ ಅಥವಾ ಧ್ವಜಕ್ಕೆ ಅವಮಾನ ಮಾಡುವುದು ಕಾನೂನುಬಾಹಿರ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿತ್ತು. ಇದೀಗ ಅದೇ ತಮಿಳುನಾಡಿನಲ್ಲಿ ಸುದೀಪ್ ಕನ್ನಡ ಧ್ವಜ ಹಿಡಿದು ಸಂಭ್ರಮಿಸಿರುವುದು ಕನ್ನಡಿಗರಿಗೆ ಖುಷಿ ತಂದಿದೆ. ಇದೇ ಶನಿವಾರ ಚೆನ್ನೈ ಕಿಂಗ್ಸ್ ವಿರುದ್ಧ ಸಿಸಿಎಲ್ ಸೆಮಿಫೈನಲ್ ಪಂದ್ಯವನ್ನು ಸುದೀಪ್ ಪಡೆ ಆಡಲಿದೆ.
ಈ ಬಾರಿ ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಅದ್ಭುತ ಪ್ರದರ್ಶನ ತೋರುತ್ತಿದೆ. ಆಡಿದ 3 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಇತ್ತೀಚೆಗೆ 'ಮಾರ್ಕ್' ಚಿತ್ರದ ಸುದ್ದಿಗೋಷ್ಠಿ ಚೆನ್ನೈನಲ್ಲಿ ನಡೆದಿತ್ತು. ಆಗ ವೇದಿಕೆಯಲ್ಲಿ ಕುಳಿತ್ತಿದ್ದ ನಟಿ ರೋಶಿನಿಗೆ ತಮಿಳು ಪತ್ರಕರ್ತ ಕೇಳಿದ ಪ್ರಶ್ನೆ ಕಿಚ್ಚನಿಗೂ ಕಿರಿಕಿರಿ ತಂದಿತ್ತು. ಕೂಡಲೇ ಪ್ರತಿಕ್ರಿಯಿಸಿ ಸುದೀಪ್ ಗಮನ ಸೆಳೆದಿದ್ದರು. ಅವರ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸ್ವತಃ ತಮಿಳು ಪತ್ರಕರ್ತಕರು ಭೇಷ್ ಎಂದು ಚಪ್ಪಾಳೆ ತಟ್ಟಿದ್ದರು.
ವೇದಿಕೆಯಲ್ಲಿ ಚಿತ್ರತಂಡದವರು ಕುಳಿತ್ತಿದ್ದರು. ನಟಿ ರೋಶಿನಿ ಅವರಿಗೆ ಪ್ರಶ್ನೆ ಕೇಳುವ ಸಮಯದಲ್ಲಿ " ನಿಮ್ಮನ್ನು ವೇದಿಕೆಯ ಒಂದು ಬದಿಯಲ್ಲಿ ಕೂರಿಸಲಾಗಿದೆ. ಸಿನಿಮಾದಲ್ಲೂ ಕೂಡ ಇದೇ ರೀತಿ ಸೈಡ್‌ಲೈನ್ ಆಗಿದ್ದೀರಾ?" ಎಂದು ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಏನು ಉತ್ತರ ಕೊಡಬೇಕು ಎಂದು ಗೊತ್ತಾಗದೇ ರೋಶಿನಿ ತಬ್ಬಿಬ್ಬಾಗಿದ್ದರು. ಅಷ್ಟರಲ್ಲಿ ಕಿಚ್ಚ ಸುದೀಪ್ ಮಧ್ಯೆ ಪ್ರವೇಶಿಸಿ ಸ್ಪಷ್ಟನೆ ನೀಡಿದ್ದರು.
ತಾವು ಕುಳಿತಿದ್ದ ಸೀಟ್ ಬಿಟ್ಟು ಎದ್ದು ಬನ್ನಿ ಇಲ್ಲಿ ಎಂದು ಇಬ್ಬರೂ ನಟಿಯರನ್ನು ವೇದಿಕೆಯ ಮಧ್ಯಭಾಗದಲ್ಲಿ ಕೂರುವಂತೆ ಹೇಳಿದ್ದರು. ಕೂಡಲೇ ನೆರೆದಿದ್ದವರೆಲ್ಲಾ ಚಪ್ಪಾಳೆ ತಟ್ಟಿ ಸುದೀಪ್ ನಡೆಗೆ ಮೆಚ್ಚುಗೆ ಸೂಚಿಸಿದ್ದರು. ಬಳಿಕ ಮಾತನಾಡಿದ ಕಿಚ್ಚ "ಇಂಥ ಪ್ರಶ್ನೆ ನಮ್ಮ ಸೆಟ್‌ನಲ್ಲಿ ಯಾವತ್ತೂ ಬರಲಿಲ್ಲ. ರೋಶಿನಿ ಅವರನ್ನು ಚಿತ್ರದಲ್ಲಿ ಸೈಡ್‌ಲೈನ್ ಮಾಡಿಲ್ಲ. ವೇದಿಕೆ ಮೇಲೆ ಕೂಡ ಮಾಡಿಲ್ಲ. ನೀವು ಕೇಳಿದ ಪ್ರಶ್ನೆ ಸರಿಯಲ್ಲ. ಅಂತಹ ಭಾವನೆ ನಮ್ಮಲ್ಲಿ ಇಲ್ಲ ನಾವೆಲ್ಲರೂ ಇಲ್ಲಿ ಸಂಭ್ರಮ ಆಚರಣೆಗೆ ಬಂದಿದ್ದರೆ, ಅದನ್ನ ಮಾತ್ರ ಮಾಡಬೇಕು" ಎಂದು ಪತ್ರಕರ್ತನಿಗೆ ಸುದೀಪ್ ತಿರುಗೇಟು ನೀಡಿದ್ದರು.
ಬಳಿಕ ಸುದ್ದಿಗೋಷ್ಠಿ ಮುಗಿಯುವರೆಗೂ ತಾವು ಕುಳಿತಿದ್ದ ಮಧ್ಯ ಭಾಗದ ಚೇರ್‌ನಲ್ಲಿ ರೋಶಿನಿ ಅವರನ್ನು ಕೂರಿಸಿ ಸುದೀಪ್ ವೇದಿಕೆಯ ಬದಿಯಲ್ಲಿ ರೋಶಿನಿ ಕೂತಿದ್ದ ಜಾಗದಲ್ಲಿ ಹೋಗಿ ಕೂತುಬಿಟ್ಟರು. ಹೀಗೆ ಯಾರಿಗೆ ಅಪಮಾನ, ಅವಮಾನ ಆದರೂ ಸುದೀಪ್ ಸಹಿಸಲ್ಲ. ಅದೇ ಜಾಗದಲ್ಲಿ ವಾಪಸ್ ಕೊಡುತ್ತಾರೆ. ಈಗ ತಮಿಳುನಾಡಿನಲ್ಲಿ ಕನ್ನಡ ಧ್ವಜ ಹಾರಿಸಿ ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದಾರೆ.


Click it and Unblock the Notifications











